ಬೆಂಗಳೂರಿನಲ್ಲಿ ಜಾರಿಯಾದ ಮೋಟಾರು ಕಾಯ್ದೆ: ಭಾರೀ ದಂಡ, ವಾಹನ ಸವಾರರೇ ಎಚ್ಚರ!

Update: 2019-09-04 16:11 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ.4: ಕೇಂದ್ರ ಸರಕಾರವು ಮೋಟಾರು ವಾಹನ ಕಾಯ್ದೆಗೆ ತಂದಿರುವ ತಿದ್ದುಪಡಿಯನ್ನು ಜಾರಿಗೊಳಿಸಿ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿರುವ ಹಿನ್ನೆಲೆ ಬೆಂಗಳೂರು ವ್ಯಾಪ್ತಿಯಲ್ಲಿ ಪರಿಷ್ಕೃತ ದಂಡದ ಮೊತ್ತ ಚಾಲ್ತಿಗೆ ಬಂದಿದೆ.

ದಂಡ ಎಷ್ಟು?: ಸಾಮಾನ್ಯ ಸಾರಿಗೆ ನಿಯಮ ಮೀರಿದರೆ 500 ರೂ.ದಂಡ, ಟಿಕೆಟ್ ರಹಿತ ಪ್ರಯಾಣಕ್ಕೆ 500 ರೂ. ದಂಡ, ಸಂಚಾರ ಪೊಲೀಸರ ಸೂಚನೆ ನಿರ್ಲಕ್ಷಕ್ಕೆ 2 ಸಾವಿರ, ಸೀಟ್ ಬೆಲ್ಟ್ ಧರಿಸದಿದ್ದರೆ 1 ಸಾವಿರ ರೂ., ಹೆಲ್ಮೆಟ್ ರಹಿತ ಚಾಲನೆ ಗೆ 1 ಸಾವಿರ ರೂ. ಜೊತೆಗೆ 3 ತಿಂಗಳು ಪರವಾನಗಿ ರದ್ದು.

ಆರ್‌ಸಿ ದಾಖಲೆಯಿಲ್ಲದೆ ವಾಹನ ಬಳಸುವವರಿಗೆ 5 ಸಾವಿರ ರೂ. ದಂಡ. ಚಾಲನಾ ಲೈಸನ್ಸ್ ಇಲ್ಲದೆ, ವಾಹನ ಚಾಲನೆಗೆ 5 ಸಾವಿರ ರೂ., ರದ್ದುಗೊಳಿಸಿದ ಚಾಲನಾ ಲೈಸನ್ಸ್‌ನೊಂದಿಗೆ ವಾಹನ ಚಲಾಯಿಸಿದರೆ 10 ಸಾವಿರ ರೂ. ದಂಡ ಕಟ್ಟಬೇಕಾಗಿದೆ.

ನಿಗದಿತ ಗಾತ್ರಕ್ಕಿಂತ ಹೆಚ್ಚಿನ ಗಾತ್ರವಿರುವ ವಾಹನಕ್ಕೆ 5 ಸಾವಿರ ರೂ. ಮದ್ಯ ಸೇವಿಸಿ ವಾಹನ ಚಲಾಯಿಸಿದರೆ 10 ಸಾವಿರ ರೂ.ಲೈಸನ್ಸ್ ಷರತ್ತು ಉಲ್ಲಂಘಿಸಿದರೆ 25 ಸಾವಿರ ರೂ.ನಿಂದ 1 ಲಕ್ಷ ರೂ.ವರೆಗೆ ದಂಡ. ಓವರ್‌ಲೋಡ್ ಇದ್ದರೆ 20 ಸಾವಿರ ರೂ. ಮತ್ತು ಹೆಚ್ಚುವರಿ ಟನ್‌ಗೆ 2 ಸಾವಿರ ರೂ.ನಂತೆ ದಂಡ ಪಾವತಿ ಮಾಡಬೇಕಾಗಿದೆ. ಅಷ್ಟೇ ಅಲ್ಲದೆ, ದಂಡದ ಜೊತೆಗೆ 3 ವರ್ಷ ಜೈಲು ಶಿಕ್ಷೆ ಹಾಗೂ ವಾಹನ ನೋಂದಣಿ ರದ್ದು ಆಗುವ ಸಾಧ್ಯತೆಗಳಿದ್ದು, ರಸ್ತೆ ಸಾರಿಗೆ ನಿಯಮಗಳು ಉಲ್ಲಂಘನೆ ಆಗದಂತೆ ನಡೆದುಕೊಳ್ಳಬೇಕು ಎಂದು ಸಂಚಾರ ಪೊಲೀಸರು ವಾಹನ ಸವಾರರಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News