ಡಿಕೆಶಿ ಆಪ್ತರ ಬಂಧನ ಸದ್ಯಕ್ಕಿಲ್ಲ: ಹೈಕೋರ್ಟ್ ಗೆ ಈ.ಡಿ. ಪರ ವಕೀಲರ ಹೇಳಿಕೆ

Update: 2019-09-05 08:54 GMT

ಬೆಂಗಳೂರು, ಸೆ.5: ಹೊಸದಿಲ್ಲಿಯ ನಿವಾಸಗಳ ಮೇಲಿನ ಐಟಿ ದಾಳಿ ಪ್ರಕರಣದಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ನಾಲ್ವರು ಆಪ್ತರು ಜಾರಿ ನಿರ್ದೇಶನಾಲಯ(ಈ.ಡಿ.) ತಮ್ಮನ್ನು ಬಂಧಿಸದಂತೆ ನಿರ್ದೇಶಿಸಲು ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಡಿಕೆಶಿ ಆಪ್ತರನ್ನು ಸದ್ಯಕ್ಕೆ ಬಂಧಿಸುವುದಿಲ್ಲ ಎಂದು ಹೈಕೋರ್ಟ್ ಗೆ ಈ.ಡಿ. ಪರ ವಕೀಲರು ಹೇಳಿಕೆ ನೀಡಿದ್ದಾರೆ.

ಈ ಕುರಿತು ಡಿಕೆಶಿ ಆಪ್ತರಾದ ಆಂಜನೇಯ, ಸಚಿನ್ ನಾರಾಯಣ್, ಸುನೀಲ್ ಶರ್ಮಾ, ರಾಜೇಂದ್ರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಬಿ.ವಿ.ಆಚಾರ್ಯ ಅವರು, ಡಿಕೆಶಿ ಮತ್ತು ನಾಲ್ವರು ಆಪ್ತರು ಬಂಧಿಸದಂತೆ ರಕ್ಷಣೆ ಕೋರಿ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ನ್ಯಾಯಪೀಠವು ಸಿಆರ್ ಪಿಸಿ 482 ಅಡಿ ತೀರ್ಪು ನೀಡದೆ, ಅನುಚ್ಛೇದ 226, 227 ಅಡಿ ತೀರ್ಪು ನೀಡಿ ಅರ್ಜಿ ವಜಾಗೊಳಿಸಿದೆ. ಹೀಗಾಗಿ, ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎಂದು ಪೀಠಕ್ಕೆ ತಿಳಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಇಡಿ ಪರ ವಕೀಲ ನರಗುಂದ ಅವರು, ಸಿಆರ್ ಪಿಸಿ 482 ಅಡಿ ದಾಖಲಿಸಿರುವ ಪ್ರಕರಣ ಕ್ರಿಮಿನಲ್ ಪ್ರಕರಣವಾಗಿದೆ. ಏಕಸದಸ್ಯ ನ್ಯಾಯಪೀಠವೂ ಸಿಆರ್ ಪಿಸಿ 482 ಅಡಿಯಲ್ಲಿಯೆ ತೀರ್ಪು ನೀಡಿದೆ. ಹೀಗಾಗಿ, ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲು ಬರುವುದಿಲ್ಲ ಎಂದು ಪೀಠಕ್ಕೆ ತಿಳಿಸಿದರು.

ಅರ್ಜಿದಾರರಿಗೆ ಯಾವುದೆ ಸಮನ್ಸ್ ನೀಡಿಲ್ಲ. ಅವರನ್ನು ಸದ್ಯಕ್ಕಂತೂ ಬಂಧಿಸುವುದಿಲ್ಲ. ಆದರೆ, ಈ.ಡಿ. ವಿಚಾರಣೆಗೆ ಕರೆದಾಗ ಬರಬೇಕಾಗುತ್ತದೆ ಎಂದು ಪೀಠಕ್ಕೆ ತಿಳಿಸಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠವು ಸದ್ಯಕ್ಕೆ ಅರ್ಜಿದಾರರನ್ನು ಬಂಧಿಸುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಬಿ.ವಿ.ಆಚಾರ್ಯ ಅವರ ಗಮನಕ್ಕೆ ತಂದ ನ್ಯಾಯಪೀಠವು ಅರ್ಜಿ ವಿಚಾರಣೆಯನ್ನು ಸೆ.16ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News