ಭಾರತ, ಇತರ ದೇಶಗಳ ಟೆಲಿಕಾಮ್ ಜಾಲಗಳಿಗೆ ಚೀನಾ ಕನ್ನ?

Update: 2019-09-06 15:25 GMT

ಲಂಡನ್, ಸೆ. 6: ಮಧ್ಯ ಮತ್ತು ಆಗ್ನೇಯ ಏಶ್ಯದಲ್ಲಿ ಉಯಿಘರ್ ಮುಸ್ಲಿಮರ ಚಲನವಲನಗಳನ್ನು ಪತ್ತೆಹಚ್ಚುವುದಕ್ಕಾಗಿ ಚೀನಾ ಸರಕಾರಕ್ಕಾಗಿ ಕೆಲಸ ಮಾಡುವ ಕನ್ನಗಾರರು ಆ ವಲಯದ ಟೆಲಿಕಾಮ್ ಜಾಲಗಳಿಗೆ ಕನ್ನ ಹಾಕಿದ್ದಾರೆ ಎಂದು ಇ ಸೈಬರ್ ದಾಳಿಗಳ ಬಗ್ಗೆ ತನಿಖೆ ನಡೆಸಿರುವ ಗುಪ್ತಚರ ಅಧಿಕಾರಿಗಳು ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.

ರಾಜತಾಂತ್ರಿಕರು ಮತ್ತು ವಿದೇಶಿ ಸೇನಾ ಸಿಬ್ಬಂದಿ ಮುಂತಾದ ಪ್ರಮುಖ ವ್ಯಕ್ತಿಗಳನ್ನು ಗುರಿಯಾಗಿಸಿ ನಡೆಸಲಾದ ಬೃಹತ್ ಸೈಬರ್ ಬೇಹುಗಾರಿಕೆಯ ಭಾಗ ಇದಾಗಿದೆ ಎಂದು ಮೂಲಗಳು ಹೇಳಿವೆ.

ಉಯಿಘರ್ ಜನಾಂಗೀಯ ಅಲ್ಪಸಂಖ್ಯಾತರ ಚಲನವಲನಗಳ ಮೇಲೆ ನಿಗಾ ಇಡುವುದನ್ನು ಆದ್ಯತೆಯನ್ನಾಗಿ ಚೀನಾ ಮಾಡಿಕೊಂಡಿದೆ ಎಂದಿವೆ. ಅಲ್ಪಸಂಖ್ಯಾತ ಉಯಿಘರ್ ಮುಸ್ಲಿಮರನ್ನು ಚೀನಾ ಭದ್ರತಾ ಬೆದರಿಕೆಯಾಗಿ ಪರಿಗಣಿಸಿದೆ.

ಚೀನಾವು ಇತ್ತೀಚಿನ ವರ್ಷಗಳಲ್ಲಿ ಕ್ಸಿನ್‌ಜಿಯಾಂಗ್‌ನ ಲಕ್ಷಾಂತರ ಉಯಿಘರ್ ಮುಸ್ಲಿಮರನ್ನು ಬಂಧನ ಕೇಂದ್ರಗಳಲ್ಲಿ ಇಟ್ಟಿತ್ತು. ಚೀನಾ ಅದನ್ನು ವೃತ್ತಿ ತರಬೇತಿ ಎಂದು ಹೇಳಿಕೊಂಡು ಬಂದಿದ್ದರೂ, ಈ ಬಂಧನಕ್ಕೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ.

ಉಯಿಘರ್ ಮುಸ್ಲಿಮರ ಮೇಲೆ ನಿಗಾ ಇಡುವ ಕಾರ್ಯಕ್ರಮದ ಭಾಗವಾಗಿ, ಚೀನಾದ ಕನ್ನಗಾರರ ವಿವಿಧ ಗುಂಪುಗಳು ಟರ್ಕಿ, ಕಝಖ್‌ಸ್ತಾನ್, ಭಾರತ, ಥಾಯ್ಲೆಂಡ್ ಮತ್ತು ಮಲೇಶ್ಯ ಮುಂತಾದ ದೇಶಗಳಲ್ಲಿನ ಟೆಲಿಕಾಮ್ ಸಂಸ್ಥೆಗಳಿಗೆ ಕನ್ನ ಹಾಕಿವೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News