ಪ.ಪೂರ್ವ ಉಪನ್ಯಾಸಕರ ನೇಮಕಾತಿ-2015: ಹೆಚ್ಚುವರಿ ಹುದ್ದೆಗಳನ್ನು ಸೇರಿಸಲು ಉದ್ಯೋಗಾಕಾಂಕ್ಷಿಗಳ ಒತ್ತಾಯ

Update: 2019-09-06 17:35 GMT

ಬೆಂಗಳೂರು, ಸೆ.6: ಪದವಿಪೂರ್ವ ಉಪನ್ಯಾಸಕರ ನೇಮಕಾತಿ 2015ರ ಹುದ್ದೆಗಳಿಗೆ ಹೆಚ್ಚುವರಿಯಾಗಿ ಮತ್ತಷ್ಟು ಹುದ್ದೆಗಳನ್ನು ಸೇರ್ಪಡೆ ಮಾಡಬೇಕೆಂದು ಪದವಿಪೂರ್ವ ಉಪನ್ಯಾಸಕ ಹುದ್ದೆ ಆಕಾಂಕ್ಷಿಗಳು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಮನವಿ ಮಾಡಿದ್ದಾರೆ.

ಕರ್ನಾಟಕ ಸರಕಾರ ಅಧಿಕೃತ ಮಾಹಿತಿ ಪ್ರಕಾರ ಈಗ ಒಟ್ಟು 3,407 ಹುದ್ದೆಗಳು ಖಾಲಿ ಇವೆ. ಆದರೆ, ಸರಕಾರ ಕೇವಲ 1,130 ಹುದ್ದೆಗಳನ್ನು ಮಾತ್ರ ತುಂಬಿ ಕೊಳ್ಳಲು ಮುಂದಾಗಿದೆ. ಇದರಿಂದಾಗಿ ಪದವಿಪೂರ್ವ ಉಪನ್ಯಾಸಕ ಹುದ್ದೆಗೆ ಪರೀಕ್ಷೆ ಬರೆದಿರುವ 65 ಸಾವಿರ ಮಂದಿ ನಿರುದ್ಯೋಗಿಗಳಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.

ಶಿಕ್ಷಣ ಇಲಾಖೆ 2011ರಿಂದ ಉಪನ್ಯಾಸಕ ನೇಮಕಾತಿ ನಡೆಸಿಲ್ಲ. 2015-16ನೇ ಶೈಕ್ಷಣಿಕ ಸಾಲಿನಿಂದ 2018-19ನೇ ಶೈಕ್ಷಣಿಕ ಸಾಲಿನವರೆಗೆ ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಹಲವಾರು ಉಪನ್ಯಾಸಕರ ಹುದ್ದೆಗಳು ನಿವೃತ್ತಿ, ಮರಣ, ಸ್ವಯಂ ನಿವೃತ್ತಿ ಮುಂತಾದ ಕಾರಣಗಳಿಂದ ಇಲ್ಲಿಯವರೆಗೂ ಸುಮಾರು 3,407 ಹುದ್ದೆಗಳು ಖಾಲಿ ಇವೆ. ಆದರೆ, ಈಗ ಕೇವಲ 1,130 ಹುದ್ದೆಗಳನ್ನು ಮಾತ್ರ ತುಂಬಿಕೊಳ್ಳುತ್ತಿರುವುದು ಉದ್ಯೋಗಾಕಾಂಕ್ಷಿಗಳಿಗೆ ನಿರಾಸೆ ಮೂಡಿಸಿದೆ.

ಪದವಿಪೂರ್ವ ಉಪನ್ಯಾಸಕರ ನೇಮಕಾತಿಗೆ ಪರೀಕ್ಷೆ ಬರೆದಿರುವ ಬಹುತೇಕರಿಗೆ ವಯೋಮಿತಿ ಮೀರುತ್ತಿದ್ದು, ಮುಂದಿನ ನೇಮಕಾತಿಗೆ ಅರ್ಜಿ ಸಲ್ಲಿಸಲು ಹಲವು ಮಂದಿ ಅರ್ಹರಾಗಿರುವುದಿಲ್ಲ. ಈಗಿರುವ ಅವಕಾಶವನ್ನು ಬಿಟ್ಟರೆ ಹಲವರಿಗೆ ಮುಂದಿನ ನೇಮಕಾತಿ ಮರೀಚಿಕೆ ಆಗಲಿದೆ. ಹೀಗಾಗಿ 2018-19ರವರೆಗಿನ ಶೈಕ್ಷಣಿಕ ಸಾಲಿನ ಖಾಲಿ ಹುದ್ದೆಗಳನ್ನು ಕೂಡ ಪರಿಗಣಿಸಬೇಕೆಂದು ಪದವಿಪೂರ್ವ ಉದ್ಯೋಗಾಕಾಂಕ್ಷಿಗಳು ಮನವಿ ಮಾಡಿದ್ದಾರೆ.

ಪದವಿಪೂರ್ವ ಉಪನ್ಯಾಸಕರ ನೇಮಕಾತಿ-2015ರ ನೇಮಕಾತಿ ಪ್ರಕ್ರಿಯೆ ಆರಂಭವಾಗಿ ಸುಮಾರು 5 ವರ್ಷಗಳು ಕಳೆದರೂ ಇನ್ನೂ ಅಂತಿಮವಾಗಿಲ್ಲ. ಈ ನೇಮಕಾತಿ ಪ್ರಕ್ರಿಯೆಯಲ್ಲಿ ಅನೇಕ ಲೋಪದೋಷಗಳಿದ್ದು, ಇವುಗಳನ್ನು ಅಧಿಕಾರಿಗಳ ಗಮನಕ್ಕೆ ಎಷ್ಟೇ ಬಾರಿ ತಂದರೂ ಪ್ರಯೋಜನವಾಗಲಿಲ್ಲ. ಈ ಸಂಬಂಧ ಸಚಿವರ ಮುಂದೆ ನಮ್ಮ ಅಳಲನ್ನು ತೋಡಿಕೊಂಡಿದ್ದೇವೆ. ಸಭೆ ಕರೆದು ನಿಮ್ಮ ಸಮಸ್ಯೆಗಳನ್ನು ಸರಿಪಡಿಸಲು ಕ್ರಮ ತೆಗೆದುಕೋಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ. ಸಚಿವರು ಸರಿಪಡಿಸುತ್ತಾರೆ ಎಂಬ ನೀರೀಕ್ಷೆಯಲ್ಲಿ ರಾಜ್ಯದಾದ್ಯಂತ ಉಪನ್ಯಾಸಕ ಹುದ್ದೆಯ ಆಕಾಂಕ್ಷಿಗಳು ನಿರೀಕ್ಷೆಯಲ್ಲಿದ್ದಾರೆ.

-ಅರ್ಜುನ್, ಉಪನ್ಯಾಸಕ, ಹುದ್ದೆಯ ಆಕಾಂಕ್ಷಿ

ಪದವಿಪೂರ್ವ ಉಪನ್ಯಾಸಕರ ನೇಮಕಾತಿ-2015ರ ಸಂಬಂಧ ಅನೇಕ ಅಭ್ಯರ್ಥಿಗಳು ಕರ್ನಾಟಕ ಆಡಳಿತ ಮಂಡಳಿ ನ್ಯಾಯಾಲಯದಲ್ಲಿ ದೂರುಗಳನ್ನು ದಾಖಲಿಸಿದ್ದಾರೆ. ಹೈಕೋರ್ಟ್‌ನಲ್ಲೂ ದೂರು ದಾಖಲಾಗಿದೆ. ಆದರೂ ನೇಮಕಾತಿಯನ್ನು ಅಧಿಕಾರಿಗಳ ಮನಸೋ ಇಚ್ಛೆ ನಡೆಸುತ್ತಿದ್ದಾರೆ.

-ಸತ್ಯರಾಜು ಆರ್., ಉಪನ್ಯಾಸಕ ಹುದ್ದೆಯ ಆಕಾಂಕ್ಷಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News