ಆಂಧ್ರ ಬ್ಯಾಂಕ್ ವಿಲೀನ ವಿರೋಧ ಖಂಡಿಸಿ ಪ್ರತಿಭಟನೆ

Update: 2019-09-06 17:37 GMT

ಬೆಂಗಳೂರು, ಸೆ.6: ಆಂಧ್ರ ಬ್ಯಾಂಕ್ ವಿಲೀನಕ್ಕೆ ಮುಂದಾಗಿರುವ ಕೇಂದ್ರ ಸರಕಾರದ ಕ್ರಮವನ್ನು ಕರ್ನಾಟಕ ಹಾಗೂ ಕೇರಳ ಘಟಕಗಳ ಬ್ಯಾಂಕ್ ನೌಕರರ ಒಕ್ಕೂಟಗಳು ವಿರೋಧ ವ್ಯಕ್ತಪಡಿಸಿವೆ.

ಇತ್ತೀಚೆಗಷ್ಟೇ ವಿತ್ತಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಬ್ಯಾಂಕುಗಳ ವಿಲೀನ ಪ್ರಕ್ರಿಯೆ ಕುರಿತು ವಿಷಯವನ್ನು ಮುಂದಿಟ್ಟಿದ್ದಾರೆ. ಇದನ್ನು ಖಂಡಿಸಿ ಇಲ್ಲಿನ ಜಯನಗರ 4 ನೆ ಬ್ಲಾಕ್‌ನಲ್ಲಿರುವ ವಲಯ ಕಚೇರಿ ಎದುರು ಆಂಧ್ರ ಬ್ಯಾಂಕ್ ಸಿಬ್ಬಂದಿ ಸಾಂಕೇತಿಕ ಪ್ರತಿಭಟನೆ ನಡೆಸುವ ಮೂಲಕ ವಿರೋಧ ವ್ಯಕ್ತಪಡಿಸಿದರು.

ದೇಶದಲ್ಲಿ ಆರ್ಥಿಕ ಸ್ಥಿತಿ ಕುಸಿಯುತ್ತಿರುವ ಸಂದರ್ಭದಲ್ಲಿ ಸುಧಾರಣೆಗಾಗಿ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆ ಕೈಗೊಳ್ಳಲು ಮುಂದಾಗಿರುವುದು ಸಲ್ಲ. ನಾಯಕ್ ಸಮಿತಿ ಪ್ರಕಾರ ಸರಕಾರದ ಹಸ್ತಕ್ಷೇಪ ಶೇ.50ಕ್ಕಿಂತ ಕಡಿಮೆಯಿರಬೇಕು. ಆ ಮೂಲಕ ಬ್ಯಾಂಕ್‌ಗಳು ಸ್ವಾಯತ್ತವಾಗಿ ವ್ಯವಹಾರ ನಡೆಸಲು ಅವಕಾಶ ಕಲ್ಪಿಸಬೇಕಿದೆ ಎಂದು ಹೇಳಿದೆ ಎಂದು ಹೇಳಿದರು.

ಇಂದಿನ ಬ್ಯಾಂಕ್‌ಗಳು ಸಾಂಪ್ರದಾಯಿಕ ಪದ್ಧತಿಯಿಂದ ತಂತ್ರಜ್ಞಾನ ಬಳಕೆ ಮಾಡಿಕೊಂಡು ಗ್ರಾಹಕರಿಗೆ ಉತ್ತಮ ಸೇವೆ ನೀಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಬ್ಯಾಂಕ್ ಅನ್ನು ಮತ್ತೊಂದು ಬ್ಯಾಂಕಿನೊಂದಿಗೆ ವಿಲೀನ ಮಾಡಲು ಮುಂದಾಗಿರುವುದು ಸಮಂಜಸವಲ್ಲ ಎಂದು ಬ್ಯಾಂಕ್ ನೌಕರರ ಸಂಘಟನೆಯ ಪದಾಧಿಕಾರಿಗಳು ತಿಳಿಸಿದರು.

ಕರ್ನಾಟಕ ಹಾಗೂ ಕೇರಳ ವಿಭಾಗದ ಅಧ್ಯಕ್ಷ ದಿನೇಶ್ ಮಾತನಾಡಿ, ಆರೋಗ್ಯ ವಿಮೆ, ಸಾಮಾನ್ಯ ವಿಮೆ ಹಾಗೂ ಮ್ಯೂಚುವಲ್ ಫಂಡ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಆದರೆ, ರಾಜಕೀಯ ಹಸ್ತಕ್ಷೇಪದಿಂದ ಎನ್‌ಪಿಎಸ್ ಫಲಿತಾಂಶ ಕುಸಿತಕ್ಕೆ ಒಳಗಾಗಿತ್ತು ಎಂದು ಹೇಳಿದರು.

ಆಂಧ್ರ ಬ್ಯಾಂಕ್ ಅತ್ಯುತ್ತಮವಾಗಿ ಕೆಲಸ ನಿರ್ವಹಿಸುತ್ತಾ ಜನಪರವಾಗಿದೆ. ಈ ಬ್ಯಾಂಕ್ ಅನ್ನು ವಿಲೀನಗೊಳಿಸಲು ಗ್ರಾಹಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ, ಬ್ಯಾಂಕ್ ಅನ್ನು ಈಗಿರುವ ಸ್ಥಿತಿಯಲ್ಲಿಯೇ ಮುಂದುವರಿಸಬೇಕು. ಯಾವುದೇ ಕಾರಣಕ್ಕೂ ವಿಲೀನ ಮಾಡಲು ಮುಂದಾಗಬಾರದು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಆಲ್ ಇಂಡಿಯಾ ಆಂಧ್ರ ಬ್ಯಾಂಕ್ ನೌಕರರ ಯೂನಿಯನ್ ಮಹಾ ಪ್ರಧಾನ ಕಾರ್ಯದರ್ಶಿ ಪದ್ಮನಾಭನ್, ಕರ್ನಾಟಕ ಹಾಗೂ ಕೇರಳ ವಿಭಾಗದ ಕಾರ್ಯದರ್ಶಿ ಪಿ.ರಾಘವೇಂದ್ರ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News