ಚಂದ್ರಯಾನ 2 ಲ್ಯಾಂಡರ್ ಜೊತೆ ಕಡಿದು ಹೋದ ಸಂಪರ್ಕ: ಇಸ್ರೋ ಅಧ್ಯಕ್ಷ

Update: 2019-09-07 16:07 GMT
Photo: ANI

ಹೊಸದಿಲ್ಲಿ,ಸೆ.7: ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ತನ್ನ ರೋಬಾಟಿಕ್ ಲ್ಯಾಂಡರ್‌ ನ್ನು ಇಳಿಸಿದ ವಿಶ್ವದ ಪಪ್ರಥಮ ದೇಶವೆಂಬ ಹೆಗ್ಗಳಿಕೆ ಪಡೆಯಲು ಭಾರತವು ನಡೆಸಿದ ಪ್ರಯತ್ನ ವಿಫಲಗೊಂಡಿದೆ. ಶನಿವಾರ ಬೆಳಗಿನ ಜಾವ ಚಂದ್ರಯಾನ-2ರ ರೋವರ್ ‘ವಿಕ್ರಮ’ ಕೊನೆಯ ಕ್ಷಣದಲ್ಲಿ ಭೂಕೇಂದ್ರದೊಂದಿಗೆ ಸಂಪರ್ಕ ಕಳೆದುಕೊಳ್ಳುವುದರೊಂದಿಗೆ ಚಂದಿರನ ಮೇಲೆ ದಿಗ್ವಿಜಯದ ಕ್ಷಣಗಳನ್ನು ಕಣ್ಣುಗಳಲ್ಲಿ ತುಂಬಿಕೊಳ್ಳಲು ಕಾತುರರಾಗಿದ್ದ ಕೋಟ್ಯಂತರ ಭಾರತೀಯರು ನಿರಾಶೆಯ ಮಡುವಿನಲ್ಲಿ ಮುಳುಗಿದರು.

ಚಂದ್ರನ ಮೇಲ್ಮೈನಿಂದ 2.1 ಕಿ.ಮೀ.ಎತ್ತರದಲ್ಲಿ ಸುತ್ತುತ್ತಿದ್ದ ವಿಕ್ರಮ ಯಶಸ್ವಿ ಸಾಫ್ಟ್ ಲ್ಯಾಂಡಿಂಗ್‌ಗೆ ಕೆಲವೇ ಕ್ಷಣಗಳಿರುವಾಗ ಇಸ್ರೋ ಅದರಿಂದ ಬರುತ್ತಿದ್ದ ಸಂಕೇತಗಳನ್ನು ಕಳೆದುಕೊಂಡಿತು.

  ಎಲ್ಲವೂ ಅಂದುಕೊಂಡಂತೆಯೇ ನಡೆದಿತ್ತು ಮತ್ತು ಚಂದ್ರನ ಮೇಲ್ಮೈನಿಂದ 2.1 ಕಿ.ಮೀ.ಎತ್ತರದವರೆಗೂ ಯೋಜನೆಯು ನಿಖರವಾಗಿ ಕಾರ್ಯಗತಗೊಂಡಿತ್ತು. ನಂತರ ವಿಕ್ರಮ ಭೂ ಕೇಂದ್ರದೊಂದಿಗೆ ಸಂಪರ್ಕವನ್ನು ಕಳೆದುಕೊಂಡಿತು ಎಂದು ಇಸ್ರೋದ ನಿಯಂತ್ರಣ ಕೇಂದ್ರವು ಶನಿವಾರ ಬೆಳಿಗ್ಗೆ ಹೇಳಿಕೆಯೊಂದರಲ್ಲಿ ತಿಳಿಸಿದೆ. ಲಭಿಸಿರುವ ದತ್ತಾಂಶಗಳನ್ನು ವಿಶ್ಲೇಷಿಸಲಾಗುತ್ತಿದೆ ಎಂದೂ ಅದು ಹೇಳಿದೆ.

 ಇಸ್ರೋ ಕೇಂದ್ರದಲ್ಲಿ ಉಪಸ್ಥಿತರಿದ್ದು ವಿಫಲ ಪ್ರಯತ್ನದ ಅಂತಿಮ ಕ್ಷಣಗಳಿಗೆ ಸಾಕ್ಷಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರು 150 ಮಿಲಿಯನ್ ಡಾಲರ್ ವೆಚ್ಚದ ದೇಶದ ಮಹತ್ವಾಕಾಂಕ್ಷೆಯ ಯೋಜನೆಯ ಯಶಸ್ಸಿಗಾಗಿ ಅಹರ್ನಿಶಿ ಶ್ರಮಿಸಿದ್ದ ಚಂದ್ರಯಾನ ತಂಡಕ್ಕೆ ಧೈರ್ಯ ತುಂಬಿದರಲ್ಲದೆ,ಉತ್ತೇಜಿಸುವ ಮಾತುಗಳನ್ನಾಡಿದರು.

“ ಭಾರತಕ್ಕೆ ತನ್ನ ವಿಜ್ಞಾನಿಗಳ ಬಗ್ಗೆ ಹೆಮ್ಮೆಯಿದೆ. ಅವರು ತಮ್ಮ ಅತ್ಯುತ್ತಮ ಸಾಧನೆಯನ್ನು ಪ್ರದರ್ಶಿಸಿದ್ದಾರೆ ಮತ್ತು ಸದಾ ಭಾರತವು ಹೆಮ್ಮೆ ಪಟ್ಟುಕೊಳ್ಳುವಂತೆ ಮಾಡುತ್ತಲೇ ಬಂದಿದ್ದಾರೆ. ಈ ಕ್ಷಣಗಳು ಧೈರ್ಯ ತಂದುಕೊಳ್ಳುವ ಕ್ಷಣಗಳಾಗಿವೆ ಮತ್ತು ನಾವು ಧೈರ್ಯವಂತರಾಗಿಯೇ ಇರುತ್ತೇವೆ’’ ಎಂದು ಮೋದಿ ಟ್ವೀಟಿಸಿದ್ದಾರೆ.

ಚಂದ್ರಯಾನ-2ರ ಇತ್ತೀಚಿನ ವಿವರಗಳನ್ನು ಪೋಸ್ಟ್ ಮಾಡಿರುವ ಇಸ್ರೋ ಅಧ್ಯಕ್ಷ ಕೆ.ಶಿವನ್ ಅವರು,‘ನಾವು ಭರವಸೆಯನ್ನು,ಆತ್ಮವಿಶ್ವಾಸವನ್ನು ಕಳೆದುಕೊಂಡಿಲ್ಲ. ನಮ್ಮ ಬಾಹ್ಯಾಕಾಶ ಕಾರ್ಯಕ್ರಮಕ್ಕಾಗಿ ಕಠಿಣ ಪರಿಶ್ರಮವನ್ನು ಮುಂದುವರಿಸುತ್ತೇವೆ ’ ಎಂದು ಟ್ವೀಟಿಸಿದ್ದಾರೆ.

ಈವರೆಗೆ ಯಾವುದೇ ದೇಶವು ಅನ್ವೇಷಿಸಿರದ ಚಂದ್ರನ ದಕ್ಷಿಣ ಧ್ರುವದಿಂದ ಸುಮಾರು 375 ಮೈಲು ದೂರದಲ್ಲಿ ಎರಡು ಕುಳಿಗಳ ನಡುವಿನ ಪ್ರದೇಶದಲ್ಲಿ ವಿಕ್ರಮನನ್ನು ಇಳಿಸಲು ಇಸ್ರೋ ವಿಜ್ಞಾನಿಗಳು ಉದ್ದೇಶಿಸಿದ್ದರು.

ಯಶಸ್ವಿ ಸಾಫ್ಟ್ ಲ್ಯಾಂಡಿಂಗ್ ಅಂದರೆ ಭೂಮಿಯಿಂದ ನಿಯಂತ್ರಿತ ಇಳಿಕೆಯ ಬಳಿಕ ಲ್ಯಾಂಡರ್ ವಿಕ್ರಮ ತನ್ನ ಒಡಲೊಳಗಿನಿಂದ ಸೌರಶಕ್ತಿ ಚಾಲಿತ ರೋವರ್ ‘ಪ್ರಜ್ಞಾನ್’ ಅನ್ನು ಬಿಡುಗಡೆಗೊಳಿಸಬೇಕಿತ್ತು. ಯೋಜನೆಯಂತೆ ರೋವರ್ 14 ಭೂದಿನಗಳ ಕಾಲ ಚಂದ್ರನ ಮೇಲ್ಮೈಯಲ್ಲಿ ಸಂಚರಿಸಿ ಅಲ್ಲಿಯ ನಾಲ್ಕು ಶತಕೋಟಿ ವರ್ಷಗಳಷ್ಟು ಹಿಂದಿನ ಮಣ್ಣನ್ನು ಸಂಗ್ರಹಿಸಿ ತನ್ನಲ್ಲಿ ಅಳವಡಿಸಲಾಗಿದ್ದ ಸಾಧನಗಳ ಮೂಲಕ ಅದನ್ನು ವಿಶ್ಲೇಷಿಸಬೇಕಿತ್ತು.

 ಇಂದಿನ ಅಭಿಯಾನ ಯಶಸ್ವಿಯಾಗಿದ್ದರೆ ಭಾರತವು ಚಂದ್ರನ ಮೇಲ್ಮೈ ಮೇಲೆ ಸಾಫ್ಟ್ ಲ್ಯಾಂಡಿಂಗ್‌ನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ವಿಶ್ವದ ನಾಲ್ಕನೇ ರಾಷ್ಟ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿತ್ತು. ಈವರೆಗೆ ಅಮೆರಿಕ,ರಷ್ಯಾ ಮತ್ತು ಚೀನಾ ಮಾತ್ರ ಸಾಫ್ಟ್ ಲ್ಯಾಂಡಿಂಗ್‌ನಲ್ಲಿ ಯಶಸ್ವಿಯಾಗಿವೆ.

1960ರ ದಶಕದಲ್ಲಿ ಚಂದ್ರನ ಮೇಲೆ ಸಾಫ್ಟ್,ರೋಬಾಟಿಕ್ ಲ್ಯಾಂಡಿಂಗ್‌ಗಾಗಿ ಅಮೆರಿಕ ಮತ್ತು ರಷ್ಯಾಗಳು ನಡೆಸಿದ್ದ ಹಲವಾರು ಪ್ರಯತ್ನಗಳು ವಿಫಲಗೊಂಡಿದ್ದವು.

ಇದ್ದದರಲ್ಲಿ ಖುಷಿಯ ವಿಷಯವೆಂದರೆ ಚಂದ್ರಯಾನ-2ರ ಭಾಗವಾಗಿರುವ ಆರ್ಬಿಟರ್ ಇನ್ನೂ ಕಾರ್ಯ ನಿರ್ವಹಿಸುತ್ತಿದೆ.

ದಶಕಕ್ಕೂ ಹಿಂದೆ ಭಾರತವು ಕೈಗೊಂಡಿದ್ದ ಚಂದ್ರಯಾನ-1ಯಶಸ್ವಿಯಾಗಿತ್ತು ಮತ್ತು ಚಂದ್ರನಲ್ಲಿ ನೀರಿನ ಕಣಗಳ ಕುರುಹನ್ನು ಪತ್ತೆ ಹಚ್ಚಿದ ಸಾಧನೆಯನ್ನು ಮಾಡಿತ್ತು.

ವಿಕ್ರಮ ಮೌನವಾದ ಮೊದಲಿನ ಕ್ಷಣಗಳು

ವಿಕ್ರಮ ಚಂದ್ರನ ಮೇಲ್ಮೈ ಮೇಲೆ ಇಳಿಯಲು ತೆಗೆದುಕೊಳ್ಳಲಿದ್ದ ಆ ‘ಭೀತಿಯ 15 ನಿಮಿಷಗಳು ’ಯಶಸ್ಸಿನ ಸಂಭ್ರಮದಲ್ಲಿ ಕರಗಿಹೋಗುವ ಎಲ್ಲ ಲಕ್ಷಣಗಳೂ ಇದ್ದವು. ಬೆಂಗಳೂರಿನ ಇಸ್ರೋದ ಮಿಷನ್ ಆಪರೇಷನ್ ಕಾಂಪ್ಲೆಕ್ಸ್‌ನಲ್ಲಿ ವಿಜ್ಞಾನಿಗಳು ಚಂದ್ರಯಾನ-2ರ ಪ್ರಗತಿಯ ಮೇಲೆ ನಿಕಟ ನಿಗಾಯಿರಿಸಿದ್ದರು. ರೋವರ್ ಪ್ರಜ್ಞಾನ್ ಅನ್ನು ತನ್ನ ಒಡಲಲ್ಲಿರಿಸಿಕೊಂಡಿದ್ದ ವಿಕ್ರಮ ಚಂದ್ರನ ಮೇಲ್ಮೈನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡುವ ಕ್ಷಣಗಳು ಹತ್ತಿರವಾಗುತ್ತಿದ್ದಂತೆ ಈ ವಿಜ್ಞಾನಿಗಳಲ್ಲಿ ಮುಖದಲ್ಲಿ ಸಂಭ್ರಮ,ಜೊತೆಜೊತೆಗೆ ಆತಂಕ ಎದ್ದುಕಾಣುತ್ತಿತ್ತು. ಎಲ್ಲವೂ ಅಂದುಕೊಂಡಿದ್ದಂತೆಯೇ ನಡೆದಿದ್ದರೆ ಇಂದು ಭಾರತವು ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡಿಂಗ್ ನಡೆಸಿದ ವಿಶ್ವದ ಮೊದಲ ರಾಷ್ಟ್ರವೆಂದು ಜಾಗತಿಕ ಇತಿಹಾಸದ ಪುಟಗಳಲ್ಲಿ ದಾಖಲಾಗುತ್ತಿತ್ತು.

ಶನಿವಾರ ನಸುಕಿನ 1:40ಕ್ಕೆ ಕೆಲವೇ ಕ್ಷಣಗಳ ಮೊದಲು ಸಾಫ್ಟ್ ಲ್ಯಾಂಡಿಂಗ್ ಪ್ರಕ್ರಿಯೆ ಆರಂಭಗೊಂಡಿತ್ತು ಮತ್ತು ಮುಂದಿನ ಕೆಲವು ನಿಮಿಷಗಳವರೆಗೆ ಪ್ರತಿಯೊಂದೂ ಯೋಜನೆಯಂತೆ ಕರಾರುವಾಕ್ಕಾಗಿ ನಡೆದಿತ್ತು. ಅತ್ತ ಚಂದ್ರನ ಮೇಲ್ಮೈ ಮೇಲೆ ಇಳಿಯುವ ವಿವಿಧ ಹಂತಗಳನ್ನು ವಿಕ್ರಮ ಯಶಸ್ವಿಯಾಗಿ ದಾಟುತ್ತಿದ್ದರೆ ಕರತಾಡನ ಮಾಡುತ್ತಿದ್ದ ಇಸ್ರೋ ಕೇಂದ್ರದಲ್ಲಿದ್ದ ವಿಜ್ಞಾನಿಗಳ ಮುಖದಲ್ಲಿಯ ಸಂಭ್ರಮ ಇನ್ನಷ್ಟು ಹೆಚ್ಚಿತ್ತು.

ಆದರೆ ವಿಕ್ರಮನ ಲ್ಯಾಂಡಿಂಗ್ ಆರಂಭಗೊಂಡ ಸುಮಾರು 12 ನಿಮಿಷಗಳ ಬಳಿಕ ಏಕಾಏಕಿ ಎಲ್ಲವೂ ನಿಯಂತ್ರಣ ತಪ್ಪಿತ್ತು. ನಿಯಂತ್ರಣ ಕೋಣೆಯ ಹೊರಗಿದ್ದವರಿಗೆ ಏನು ತಪ್ಪು ಸಂಭವಿಸಿದೆ ಎನ್ನುವುದು ಗೊತ್ತಿರಲಿಲ್ಲ. ಆದರೆ ನಿಯಂತ್ರಣ ಕೇಂದ್ರದಲ್ಲಿ ಹೆಪ್ಪುಗಟ್ಟಿದ್ದ ಮೌನ ಮತ್ತು ವಿಜ್ಞಾನಿಗಳ ಮುಖದಲ್ಲಿದ್ದ ಆತಂಕ-ಚಿಂತೆ ಎಲ್ಲೋ ಏನೋ ತಪ್ಪಾಗಿದೆ ಎನ್ನುವ ಸುಳಿವನ್ನು ನೀಡಿತ್ತು.

 ಇಡೀ ಭಾರತವೇ ಕಾತುರ ತುಂಬಿಕೊಂಡು ಇಸ್ರೋದಿಂದ ಮಾಹಿತಿಗಾಗಿ ಕಾಯುತ್ತಿದ್ದರೆ ಇತ್ತ ಮುಂದಿನ ಕೆಲವು ನಿಮಿಷಗಳು ಗಂಟೆಗಳಂತೆ ಭಾಸವಾಗತೊಡಗಿದ್ದವು. ಈ ವೇಳೆಗೆ ಶಿವನ್ ಅವರು ಚಂದ್ರಯಾನ-2ರ ಲ್ಯಾಂಡಿಂಗ್‌ನ್ನು ವೀಕ್ಷಿಸುತ್ತ ಮೋದಿಯವರು ಕುಳಿತಿದ್ದ ಗ್ಯಾಲರಿಯತ್ತ ತೆರಳಿದ್ದರು. ಅವರು ಇತರ ಕೆಲವು ವಿಜ್ಞಾನಿಗಳೊಂದಿಗೆ ಸೇರಿಕೊಂಡು ಮೋದಿಯವರಿಗೆ ಮಾಹಿತಿ ನೀಡುತ್ತಿರುವುದು ಕಂಡು ಬಂದಿತ್ತು. ಪ್ರಧಾನಿಯವರು ‘ಸರಿ ಹಾಗಾದರೆ’ ಎಂದು ಹೇಳಿದಂತೆ ಆಂಗಿಕ ಹಾವಭಾವ ಮತ್ತು ಇತರ ವಿಜ್ಞಾನಿಗಳು ಶಿವನ್ ಅವರ ಬೆನ್ನನ್ನು ಮೆಲ್ಲನೆ ತಟ್ಟುತ್ತಿದ್ದುದು ಅಲ್ಲಿ ನೆರೆದಿದ್ದವರಲ್ಲಿ ಹೆಚ್ಚಿನ ಆಶೆಯನ್ನೇನೂ ಮೂಡಿಸಿರಲಿಲ್ಲ.

ಕೆಲವು ನಿಮಿಷಗಳ ಬಳಿಕ ಮೈಕ್ರೋಫೋನ್ ಅನ್ನು ಕೈಗೆತ್ತಿಕೊಂಡ ಶಿವನ್ ‘ಇಸ್ರೋ ವಿಕ್ರಮ ಲ್ಯಾಂಡರ್ ಜೊತೆಗಿನ ಸಂಪರ್ಕವನ್ನು ಕಳೆದುಕೊಂಡಿದೆ ’ ಎಂಬ ಯಾರೂ ಕೇಳಲು ಬಯಸಿರದಿದ್ದ ಅತ್ಯಂತ ನಿರಾಶಾದಾಯಕ ಮಾಹಿತಿಯನ್ನು ದೃಢಪಡಿಸಿದರು.

ಚಂದ್ರಯಾನ-2ರ ಹಿಂದಿತ್ತು 16,500 ಜನರ ಸಮರ್ಪಿತ ತಂಡದ ಪರಿಶ್ರಮ

ಚಂದ್ರನ ಮೇಲ್ಮೈನಿಂದ ಕೇವಲ 2.1 ಕಿ.ಮೀ.ಎತ್ತರದಲ್ಲಿರುವಾಗ ಭೂಮಿಯೊಂದಿಗೆ ಸಂಪರ್ಕವನ್ನು ಕಳೆದುಕೊಂಡ ವಿಕ್ರಮ ಲ್ಯಾಂಡರ್‌ನ ಸಾಫ್ಟ್ ಲ್ಯಾಂಡಿಂಗ್ ವಿಫಲಗೊಂಡಿರಬಹುದು,ಆದರೆ ಚಂದ್ರಯಾನ-2 ಯೋಜನೆಯ ಬೃಹತ್ ಪ್ರಮಾಣ ಮತ್ತು ಸವಾಲನ್ನು ಎದುರಿಸುವ ಅದರ ಎದೆಗಾರಿಕೆ ದೇಶದ ಈ ಮಹತ್ವಾಕಾಂಕ್ಷಿ ಯೋಜನೆಯ ಹಿಂದಿದ್ದ 16,500 ಪುರುಷರು ಮತ್ತು ಮಹಿಳೆಯರ ಪ್ರತಿಭೆ ಮತ್ತು ದೃಢನಿರ್ಧಾರಗಳಿಗೆ ಸಾಕ್ಷಿಯಾಗಿದೆ.

ಇಸ್ರೋ ಅಧ್ಯಕ್ಷರಾಗಿರುವ ಕೆ.ಶಿವನ್ ಅವರು ಚಂದ್ರಯಾನ-2ರ ನೇತೃತ್ವನ್ನು ವಹಿಸಿಕೊಂಡಿದ್ದರೆ,ಯೋಜನಾ ನಿರ್ದೇಶಕಿ ಮುತ್ತಯ್ಯ ವನಿತಾ ಅವರು ಇಡೀ ಚಂದ್ರಯಾನ ಯೋಜನೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು. ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರ್ ಆಗಿರುವ ಅವರು ಕಳೆದ ಮೂರು ದಶಕಗಳಿಗೂ ಹೆಚ್ಚು ಸಮಯದಿಂದ ಇಸ್ರೋದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಯೋಜನೆಯ ಸಂಪೂರ್ಣ ಹೊಣೆಗಾರಿಕೆಯನ್ನು ಮಹಿಳೆಯೊಬ್ಬರು ವಹಿಸಿಕೊಂಡಿದ್ದು ಇಸ್ರೋದ ಇತಿಹಾಸದಲ್ಲಿ ಇದೇ ಮೊದಲ ಬಾರಿಯಾಗಿದೆ.

 ಚಂದ್ರಯಾನ-2ರ ಮಿಷನ್ ಡೈರೆಕ್ಟರ್ ಆಗಿದ್ದ ಇನ್ನೋರ್ವ ಮಹಿಳಾ ವಿಜ್ಞಾನಿ ರಿತು ಕರಿಧಾಲ್ ಅವರು ಮಂಗಳಗ್ರಹಕ್ಕೆ ಮಂಗಳಯಾನದ ಪಥನಿರ್ದೇಶನದಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು.

ಆರ್ಬಿಟರ್ ಸುರಕ್ಷಿತ:ಇಸ್ರೋ

ಚಂದ್ರಯಾನ-2 ಆರ್ಬಿಟರ್ ಅಥವಾ ಕಕ್ಷೆಗಾಮಿಯು ಚಂದ್ರನ ಕಕ್ಷೆಯಲ್ಲಿ ಸುಭದ್ರ ಮತ್ತು ಸುರಕ್ಷಿತವಾಗಿದ್ದು, ಸಹಜವಾಗಿ ಕಾರ್ಯಾಚರಿಸುತ್ತಿದೆ ಎಂದು ಇಸ್ರೋ ತಿಳಿಸಿದೆ.

2,379 ಕೆ.ಜಿ.ತೂಕದ ಆರ್ಬಿಟರ್ ಒಂದು ವರ್ಷದ ಕಾರ್ಯ ಜೀವಿತಾವಧಿಯನ್ನು ಹೊಂದಿದೆ. ಅದರಲ್ಲಿರುವ ದೂರಸಂವೇದಕಗಳು ಚಂದ್ರನಿಂದ 100 ಕಿ.ಮೀ.ಅಂತರದ ಕಕ್ಷೆಯಿಂದ ಅಧ್ಯಯನವನ್ನು ನಡೆಸಲಿವೆ. ಚಂದ್ರನ ಮೇಲ್ಮೈನ ಮ್ಯಾಪಿಂಗ್ ಮತ್ತು ಚಂದ್ರನ ಬಾಹ್ಯ ವಾತಾವರಣದ ಅಧ್ಯಯನಕ್ಕಾಗಿ ಆರ್ಬಿಟರ್‌ನಲ್ಲಿ ಎಂಟು ವೈಜ್ಞಾನಿಕ ಸಾಧನಗಳನ್ನು ಅಳವಡಿಸಲಾಗಿದೆ.

ಇಸ್ರೋ ಸೆ.2ರಂದು ರೋವರ್ ಪ್ರಜ್ಞಾನ್‌ನ್ನು ತನ್ನಲ್ಲಿರಿಸಿಕೊಂಡಿದ್ದ ಲ್ಯಾಂಡರ್ ವಿಕ್ರಮ ಅನ್ನು ಚಂದ್ರಯಾನ 2 ಆರ್ಬಿಟರ್‌ನಿಂದ ಯಶಸ್ವಿಯಾಗಿ ಪ್ರತ್ಯೇಕಗೊಳಿಸಿತ್ತು.

ಚಂದ್ರಯಾನ-2ರ ಶೇ.5ರಷ್ಟನ್ನು ಮಾತ್ರ ಕಳೆದುಕೊಂಡಿದ್ದೇವೆ:ಇಸ್ರೋ

ಚಂದ್ರನ ಮೇಲೆ ಇಳಿಯವ ಭಾರತದ ಮೊದಲ ಪ್ರಯತ್ನ ವಿಫಲವಾಗಿರಬಹುದು,ಆದರೆ ಮಹತ್ವಾಕಾಂಕ್ಷೆಯ ಚಂದ್ರಯಾನ-2 ವೈಫಲ್ಯ ಕಂಡಿದೆ ಎನ್ನುವಂತಿಲ್ಲ. ಲ್ಯಾಂಡರ್ ವಿಕ್ರಮ ಮತ್ತು ರೋವರ್ ಪ್ರಜ್ಞಾನ್ ಸೇರಿದಂತೆ ಅಭಿಯಾನದ ಶೇ.5ರಷ್ಟು ಭಾಗದಲ್ಲಿ ಮಾತ್ರ ನಾವು ವಿಫಲಗೊಂಡಿದ್ದೇವೆ. ಆದರೆ ಉಳಿದ ಶೇ.95 ಭಾಗವಾಗಿರುವ ಚಂದ್ರಯಾನ-2 ಆರ್ಬಿಟರ್ ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ಸುತ್ತುತ್ತಿದೆ. ಆರ್ಬಿಟರ್ ಚಂದ್ರನ ಹಲವಾರು ಚಿತ್ರಗಳನ್ನು ತೆಗೆಯಲಿದೆ ಮತ್ತು ಇನ್ನೊಂದು ವರ್ಷದವರೆಗೂ ಇಸ್ರೋಕ್ಕೆ ರವಾನಿಸುತ್ತಿರುತ್ತದೆ. ಲ್ಯಾಂಡರ್‌ನ ಸ್ಥಿತಿಗತಿಯನ್ನು ತಿಳಿದುಕೊಳ್ಳಲು ಅದರ ಚಿತ್ರವನ್ನೂ ಆರ್ಬಿಟರ್ ಸೆರೆ ಹಿಡಿಯಲಿದೆ ಎಂದು ಇಸ್ರೋದ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News