ಬದುಕಿನ ಇನ್ನಿಂಗ್ಸ್ ಮುಗಿಸಿದ ಪಾಕ್ ಸ್ಪಿನ್ ಮಾಂತ್ರಿಕ

Update: 2019-09-07 04:20 GMT

ಲಾಹೋರ್, ಸೆ.7: ಪಾಕಿಸ್ತಾನದ ಖ್ಯಾತ ಲೆಗ್‌ಸ್ಪಿನ್ನರ್ ಅಬ್ದುಲ್ ಖಾದಿರ್ ತೀವ್ರ ಹೃದಯಾಘಾತದಿಂದ ಶುಕ್ರವಾರ ನಿಧರಾದರು. ಖಾದಿರ್‌ಗೆ 63 ವರ್ಷ ವಯಸ್ಸಾಗಿತ್ತು.

ಇವರು ಪತ್ನಿ, ನಾಲ್ವರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್‌ಮನ್ ಉಮರ್ ಅಕ್ಮಲ್ ಜತೆ ಖಾದಿರ್ ಪುತ್ರಿಯ ವಿವಾಹವಾಗಿತ್ತು. ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್, ಉಮರ್ ಅಕ್ಮಲ್ ಅವರ ಸಹೋದರ ಕಮ್ರಾನ್ ಅಕ್ಮಲ್, ಖಾದಿರ್ ಸಾವಿನ ಸುದ್ದಿಯನ್ನು ದೃಢಪಡಿಸಿದ್ದಾರೆ. ಹೃದಯಾಘಾತಕ್ಕೀಡಾದ ಖಾದಿರ್ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆ ವೇಳೆಗೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.

67 ಟೆಸ್ಟ್ ಹಾಗೂ 104 ಏಕದಿನ ಕ್ರಿಕೆಟ್ ಪಂದ್ಯ ಆಡಿರುವ ಖಾದಿರ್, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 368 ವಿಕೆಟ್ ಪಡೆದಿದ್ದರು. ಸೆಪ್ಟೆಂಬರ್ 15ರಂದು ಅವರು 64ನೇ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿತ್ತು.

"ಖಾದರ್ ಅವರ ಮ್ಯಾಜಿಕ್ ಲೆಗ್‌ಸ್ಪಿನ್ ಹಾಗೂ ಅವರ ಕಲಾತ್ಮಕತೆ, ಪಾಕಿಸ್ತಾನ ಮಾತ್ರವಲ್ಲದೇ ಇಡೀ ಕ್ರಿಕೆಟ್ ಜಗತ್ತಿನ ಯುವ ಲೆಗ್‌ಸ್ಪಿನ್ ಬೌಲರ್‌ಗಳ ಪೀಳಿಗೆಗೆ ಸ್ಫೂರ್ತಿದಾಯಕವಾಗಿತ್ತು. ಅವರ ಸಾವು ಪಾಕಿಸ್ತಾನ ಕ್ರಿಕೆಟ್‌ಗೆ ತುಂಬಲಾರದ ನಷ್ಟ" ಎಂದು ಪಾಕಿಸ್ತಾನದ ಮಾಜಿ ಲೆಗ್‌ಬ್ರೇಕ್ ಬೌಲರ್ ಡ್ಯಾನಿಷ್ ಕನೇರಿಯಾ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ನೀತಿಗಳ ಕಟು ಟೀಕಾಕಾರಗಾಗಿಯೇ ಕೊನೆಯ ವರೆಗೂ ಉಳಿದಿದ್ದ ಖಾದಿರ್, 2009ರಲ್ಲಿ ಪಾಕಿಸ್ತಾನ ಕ್ರಿಕೆಟ್ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಅವರು ಆಯ್ಕೆ ಮಾಡಿದ್ದ ತಂಡ ಇಂಗ್ಲೆಂಡಿನಲ್ಲಿ ನಡೆದ ಐಸಿಸಿ ವಿಶ್ವ ಟಿ-20 ಕಪ್ ಗೆದ್ದಿತ್ತು. ಅದರೆ ವೇಗದ ಬೌಲರ್ ಶುಹೈಬ್ ಅಖ್ತರ್ ಅವರನ್ನು ಆಯ್ಕೆ ಮಾಡದಿರುವ ಬಗ್ಗೆ ಅಂದಿನ ಪಿಸಿಬಿ ಅಧ್ಯಕ್ಷ ಇಜಾಝ್ ಬಟ್ ಅವರ ಜತೆಗಿನ ವೈಮನಸ್ಸಿನಿಂದಾಗಿ ಅರ್ಧದಲ್ಲೇ ಹುದ್ದೆ ತ್ಯಜಿಸಿದ್ದರು.

ಪಾಕಿಸ್ತಾನಕ್ಕೆ ವಿಶ್ವಕಪ್ ಗೆದ್ದುಕೊಟ್ಟ ಇಂದಿನ ಪಾಕಿಸ್ತಾನಿ ಪ್ರಧಾನಿ ಇಮ್ರಾನ್‌ಖಾನ್ ನಾಯಕರಾಗಿದ್ದ ಅವಧಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದ ಇವರು, ಫೈಸಲಾಬಾದ್‌ನಲ್ಲಿ ವೆಸ್ಟ್‌ ಇಂಡೀಸ್ ವಿರುದ್ಧ 56 ರನ್‌ಗಳಿಗೆ 9 ವಿಕೆಟ್ ಕಿತ್ತದ್ದು ಜೀವನಶ್ರೇಷ್ಠ ಸಾಧನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News