ಚಂದ್ರಯಾನದಲ್ಲಿ ಯಶಸ್ಸು 60 ಶೇಕಡ ಮಾತ್ರ: ‘ನಾಸಾ’ ಅಂಕಿಅಂಶ

Update: 2019-09-07 16:27 GMT

ವಾಶಿಂಗ್ಟನ್, ಸೆ. 7: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಮಹತ್ವಾಕಾಂಕ್ಷೆಯ ಚಂದ್ರಯಾನ-2ರ ‘ವಿಕ್ರಮ್’ ಲ್ಯಾಂಡರ್ ಶನಿವಾರ ಮುಂಜಾನೆ ಚಂದ್ರನ ಅಂಗಳದಲ್ಲಿ ಕಾಲೂರುವ ಕೊನೆಯ ಕ್ಷಣದಲ್ಲಿ, ಅದರ ಜೊತೆಗಿನ ಸಂಪರ್ಕ ಕಡಿತಗೊಂಡ ಬಳಿಕ ಜಾಗತಿಕ ಭಾರತೀಯ ಸಮುದಾಯ ನಿರಾಶೆಯ ಮಡುವಿನಲ್ಲಿ ಮುಳುಗಿದೆ. ಆದರೆ, ಕಳೆದ ಆರು ದಶಕಗಳ ಅವಧಿಯಲ್ಲಿ ನಡೆದ ಚಂದ್ರಯಾನಗಳು ಯಶಸ್ವಿಯಾದ ಪ್ರಮಾಣ ಕೇವಲ 60 ಶೇಕಡ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ದ ಅಂಕಿಅಂಶಗಳು ಹೇಳುತ್ತವೆ.

ಈ ಅವಧಿಯಲ್ಲಿ 109 ಚಂದ್ರಯಾನಗಳನ್ನು ಕೈಗೊಳ್ಳಲಾಗಿದೆ ಹಾಗೂ ಈ ಪೈಕಿ 61 ಮಾತ್ರ ಯಶಸ್ವಿಯಾಗಿವೆ ಹಾಗೂ ಉಳಿದ 48 ವಿಫಲವಾಗಿವೆ.

2018 ಫೆಬ್ರವರಿಯಲ್ಲಿ ಇಸ್ರೇಲ್ ಕೂಡ ತನ್ನ ಚಂದ್ರ ಶೋಧಕ ನೌಕೆ ‘ಬೆರೆಶೀಟ್’ನ್ನು ಉಡಾಯಿಸಿತ್ತು. ಆದರೆ ಅದು ಎಪ್ರಿಲ್‌ನಲ್ಲಿ ಚಂದ್ರನ ಮೇಲ್ಮೈಗೆ ಅಪ್ಪಳಿಸಿತು.

1958 ರಿಂದ 2019ರವರೆಗೆ ಭಾರತ, ಅಮೆರಿಕ, ಯುಎಸ್‌ಎಸ್‌ಆರ್ (ಈಗಿನ ರಶ್ಯ), ಜಪಾನ್, ಐರೋಪ್ಯ ಒಕ್ಕೂಟ, ಚೀನಾ ಮತ್ತು ಇಸ್ರೇಲ್ ದೇಶಗಳು ಆರ್ಬಿಟರ್‌ಗಳು, ಲ್ಯಾಂಡರ್‌ಗಳು ಮತ್ತು ಪ್ಲೈಬೈಗಳು ಸೇರಿದಂತೆ ವಿವಿಧ ಉದ್ದೇಶದ ಚಂದ್ರಯಾನಗಳನ್ನು ಕೈಗೊಂಡಿವೆ.

ಮೊದಲ ಚಂದ್ರಯಾನ ಕೈಗೊಂಡದ್ದು ಅಮೆರಿಕ 1958 ಆಗಸ್ಟ್ 17ರಂದು. ಆದರೆ, ‘ಪಯನಿಯರ್ 0’ ರಾಕೆಟ್‌ನ ಉಡಾವಣೆ ವಿಫಲವಾಯಿತು.

ಮೊದಲ ಯಶಸ್ವಿ ಚಂದ್ರಯಾನವನ್ನು ಕೈಗೊಂಡದ್ದು ಯುಎಸ್‌ಎಸ್‌ಆರ್ 1959 ಜನವರಿ 4ರಂದು. ಅದರ ‘ಲೂನಾ 1’ ಯೋಜನೆ ಮೊದಲ ‘ಮೂನ್ ಫ್ಲೈಬೈ’ ಕೂಡ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News