×
Ad

ಎಲ್ಲ ಕಾಲೇಜುಗಳಲ್ಲೂ ರೋಬೋಟಿಕ್ ತಂತ್ರಜ್ಞಾನ ಕಾರ್ಯಾಗಾರಕ್ಕೆ ಸಿದ್ಧತೆ

Update: 2019-09-07 21:59 IST

ಬೆಂಗಳೂರು, ಸೆ.7: ಭವಿಷ್ಯದ ಉತ್ಕೃಷ್ಟ ತಂತ್ರಜ್ಞಾನವೆಂದೇ ಬಿಂಬಿತವಾಗುತ್ತಿರುವ ರೊಬೋಟಿಕ್ ಶಿಕ್ಷಣದ ಬಗ್ಗೆ ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಹಮ್ಮಿಕೊಳ್ಳಲು ಈಸ್ಟ್ ವೆಸ್ಟ್ ಸಂಸ್ಥೆ ಮುಂದಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಡಾ.ಪುರುಷೋತ್ತಮ್, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ರೊಬೋಟಿಕ್ ತಂತ್ರಜ್ಞಾನವನ್ನು ಶಿಕ್ಷಣಕ್ಕೆ ಅಳವಡಿಸುವ ಅವಶ್ಯಕತೆ ಇದೆ. ಕಳೆದ ಆ.31ರಂದು ನಗರದ ಮಾಗಡಿ ರಸ್ತೆಯಲ್ಲಿರುವ ಈಸ್ಟ್ ವೆಸ್ಟ್ ಕಾಲೇಜಿನ 1,800ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಒಂದು ದಿನದ ರೊಬೋಟಿಕ್ ತರಬೇತಿ ಕಾರ್ಯಾಗಾರ ನಡೆಸಿ ಅದನ್ನು ಗಿನ್ನಿಸ್ ವಿಶ್ವದಾಖಲೆಗೆ ನಿರ್ಮಿಸಲಾಗಿತ್ತು. ಈಸ್ಟ್‌ವೆಸ್ಟ್ ಕಾಲೇಜಿನ ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿ ಗಿನ್ನಿಸ್ ದಾಖಲೆ ಮಾಡುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ ಎಂದು ತಿಳಿಸಿದರು.

ನಮ್ಮ ಈಗಿನ ಶಿಕ್ಷಣ ಬೋಧನಾ ವ್ಯವಸ್ಥೆ ತೀರಾ ಹಳೆಯದಾಗಿದ್ದು, ಇದಕ್ಕೆ ಆಧುನಿಕ ಸ್ಪರ್ಶ ಕೊಡಬೇಕಾಗಿದೆ. ಪ್ರತೀ ವರ್ಷ ವಿಶ್ವವಿದ್ಯಾನಿಲಯಗಳಿಂದ ಕಲಿತು ಹೊರಬರುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ಜಗತ್ತಿನಲ್ಲಿ ಆಗುತ್ತಿರುವ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ವಿದ್ಯಾರ್ಥಿಗಳಿಗೆ ತಿಳಿಸಿ ತರಬೇತುಗೊಳಿಸಲು ನಮ್ಮ ಪಠ್ಯ ಕ್ರಮಗಳನ್ನು ಪರಿಷ್ಕರಣೆ ಮಾಡುತ್ತಿರಲೇಬೇಕು ಎಂದರು.

ಭವಿಷ್ಯದಲ್ಲಿ ರೋಬೋಟಿಕ್ ವ್ಯವಸ್ಥೆಯನ್ನು ಆವರಿಸಲಿದೆ. ಮನೆಯ ಗೇಟ್ ಕಾಯುವುದರಿಂದ ಹಿಡಿದು ದೇಶದ ಗಡಿ ಕಾಯುವ ತನಕ ರೋಬೋಟಿಕ್ ತಂತ್ರಜ್ಞಾನ ವಿಸ್ತರಿಸಲಿದೆ. ದೇಶ ಈಗಿನಿಂದಲೇ ರೋಬೋಟಿಕ್ ತಂತ್ರಜ್ಞಾನದ ಕುರಿತು ಹೆಚ್ಚು ಸಂಶೋಧನೆ ನಡೆಸಿ ಆವಿಷ್ಕರಿಸಿದರೆ ಅಮೆರಿಕಾ, ಚೀನಾ, ಜಪಾನ್, ಜರ್ಮನಿ, ಫ್ರಾನ್ಸ್, ಬ್ರಿಟನ್ ಹಾಗೂ ಕೊರಿಯಾ ಮುಂತಾದ ದೇಶಗಳನ್ನು ತಂತ್ರಜ್ಞಾನದಲ್ಲಿ ಹಿಂದಿಕ್ಕುವ ಅವಕಾಶವಿದೆ. ಮುಂದೆ ರೋಬೋಟಿಕ್ ತಂತ್ರಜ್ಞಾನಕ್ಕೆ ಜಾಗತಿಕ ಮಟ್ಟದಲ್ಲಿ ದೊಡ್ಡ ಮಾರುಕಟ್ಟೆಯೂ ಸೃಷ್ಟಿಯಾಗಲಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News