ಬಿಎಸ್‌ವೈ ಬೆಂಗಳೂರು ಪರಿವೀಕ್ಷಣೆ ನಾಟಕ: ಮಾಜಿ ಸಿಎಂ ಕುಮಾರಸ್ವಾಮಿ

Update: 2019-09-08 12:54 GMT

ಬೆಂಗಳೂರು, ಸೆ. 8: ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಮಂತ್ರಿಗಳು ನೆರೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಬೀದಿಗೆ ಬಿದ್ದಿರುವ ಬಡ ಕುಟುಂಬಗಳೊಂದಿಗೆ ಕುಳಿತು ಪರಿಹಾರ ಕಾರ್ಯಗಳ ಪರಿಶೀಲನೆ ಮಾಡಬೇಕಾದ ಈ ಸಂದರ್ಭದಲ್ಲಿ ‘ಬೆಂಗಳೂರು ನಗರ ಪರಿವೀಕ್ಷಣೆ’ ಎಂಬ ನಾಟಕ ಆಡುತ್ತಿದ್ದಾರೆ’ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟೀಕಿಸಿದ್ದಾರೆ.

ರವಿವಾರ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ‘ರಾಜ್ಯದಲ್ಲಿ ನೆರೆ ಸಂತ್ರಸ್ತರ ಬದುಕು ಮೂರಾಬಟ್ಟೆಯಾಗಿದೆ. ಪ್ರಧಾನಿ ಮೋದಿ ಬೆಂಗಳೂರಿಗೆ ಬಂದರೂ ಅವರನ್ನು ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆಗೆ ಕರೆದೊಯ್ಯಲು ಸಾಧ್ಯವಾಗಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

‘ಇನ್ನೊಂದೆಡೆ ಕೇಂದ್ರ ಸರಕಾರದಿಂದ ಪರಿಹಾರ ಧನವನ್ನು ಗಟ್ಟಿ ಧ್ವನಿಯಲ್ಲಿ ಕೇಳಲು ಸಾಧ್ಯವಾಗದಷ್ಟು ಮುಖ್ಯಮಂತ್ರಿ ಯಡಿಯೂರಪ್ಪನವರು ದುರ್ಬಲರಾಗಿರೋದು ನಮ್ಮ ರಾಜ್ಯದ ದುರ್ದೈವ ಎಂದು ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ಲೇವಡಿ ಮಾಡಿದ್ದಾರೆ.

‘ಚಂದ್ರಯಾನ-2 ವೀಕ್ಷಿಸಲು ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬಂದು ವಿಜ್ಞಾನಿಗಳಿಗೆ ಆತ್ಮಸ್ಥೈರ್ಯ ತುಂಬಿದ್ದು ಸ್ವಾಗತಾರ್ಹ. ಆದರೆ, ನೆರೆಯಿಂದ ತತ್ತರಿಸಿ ಬೀದಿಗೆ ಬಿದ್ದಿರುವ ಸಾವಿರಾರು ಕುಟುಂಬಗಳು, ಮಕ್ಕಳನ್ನು ತಿರುಗಿಯೂ ನೋಡದೆ, ಕೇಂದ್ರದಿಂದ ಯಾವುದೇ ಪರಿಹಾರವನ್ನೂ ಘೋಷಿಸದೆ ಹಾಗೆಯೇ ತೆರಳಿದ್ದು ನೋವಿನ ವಿಚಾರ’ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News