ಝೊಮ್ಯಾಟೊ, ಸ್ವಿಗಿಯಿಂದ ಹೋಟೆಲ್ ಮಾಲಕರಿಗೆ ಸಂಕಷ್ಟ: ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ

Update: 2019-09-08 15:44 GMT

ಬೆಂಗಳೂರು, ಸೆ.8: ಝೊಮ್ಯಾಟೊ ಮತ್ತು ಸ್ವಿಗಿ ಆಹಾರ ಸರಬರಾಜು ಸಂಸ್ಥೆಗಳಿಂದ ಹೋಟೆಲ್ ಮಾಲಕರಿಗೆ ತಾತ್ಕಾಲಿಕವಾಗಿ ಲಾಭ ಸಿಗುತ್ತಿರಬಹುದು. ಆದರೆ, ಭವಿಷ್ಯದಲ್ಲಿ ಈ ಸಂಸ್ಥೆಗಳಿಂದ ಸಂಕಷ್ಟ ಎದುರಾಗಬಹುದು. ಇದನ್ನು ಎದುರಿಸಲು ಸಂಘಟಿತ ಹೋರಾಟ ಅಗತ್ಯವಿದೆ ಎಂದು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ. 

ರವಿವಾರ ಬೆಂಗಳೂರು ಬಂಟರ ಹೋಟೆಲ್ ಮಾಲಕರ ಸಂಘ ನಗರದ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಭವನದಲ್ಲಿ ಆಯೋಜಿಸಿದ್ದ ಬಂಟ ಹೋಟೆಲ್ ಮಾಲಕರ ಪ್ರಥಮ ಸಮ್ಮಿಲನ ‘ಬಂಟರಾತಿಥ್ಯ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದಿನಕಳೆದಂತೆ ಹೋಟೆಲ್ ಮಾಲಕರಿಗೆ ಹೊಸ, ಹೊಸ ಸಮಸ್ಯೆಗಳು ಎದುರಾಗುತ್ತಿವೆ. ಸದ್ಯ, ಝೊಮ್ಯಾಟೊ, ಸ್ವಿಗಿ ಸಂಸ್ಥೆಗಳು ಹೋಟೆಲ್‌ಗಳಿಂದ ಆಹಾರ ಪದಾರ್ಥಗಳನ್ನು ಗ್ರಾಹಕರಿಗೆ ತಲುಪಿಸುವಂತಹ ಕೆಲಸ ಮಾಡುತ್ತಿವೆ. ಕೆಲವೇ ದಿನಗಳಲ್ಲಿ ಈ ಸಂಸ್ಥೆಗಳೇ ಆಹಾರವನ್ನು ಉತ್ಪಾದಿಸಲು ಪ್ರಾರಂಭಿಸುತ್ತಿವೆ. ಇದರಿಂದ ಹೋಟೆಲ್ ಮಾಲಕರು ಗ್ರಾಹಕರಿಲ್ಲದೆ ಸಮಸ್ಯೆ ಎದುರಾಗಬಹುದು ಎಂದು ಅವರು ಎಚ್ಚರಿಸಿದರು.

ಇವತ್ತು ಟಿವಿಎಸ್ ಸೇರಿದಂತೆ ವಾಹನ ತಯಾರಿಕಾ ಕಂಪೆನಿಗಳಲ್ಲಿ ಸಾವಿರಾರು ಉದ್ಯೋಗಿಗಳನ್ನು ತೆಗೆಯಲಾಗುತ್ತಿವೆ. ಇದು ಹೋಟಲ್ ಉದ್ಯಮ ನೆಲಕಚ್ಚುವುದಕ್ಕೆ ಕಾರಣವಾಗಬಹುದು. ಆಗಾಗ ಎದುರಾಗಬಹುದಾದಂತಹ ಇಂತಹ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳುವ ನಿಟ್ಟಿನಲ್ಲಿ ಹೋಟೆಲ್ ಮಾಲಕರು ಸಭೆ ಸೇರಿ ಕೂಲಂಕಷವಾಗಿ ಚರ್ಚಿಸಬೇಕೆಂದು ಅವರು ಹೇಳಿದರು.

ಶಾಸಕ ಎಂ.ಕೃಷ್ಣಪ್ಪ ಮಾತನಾಡಿ, ಬಂಟ ಹಾಗೂ ಒಕ್ಕಲಿಗ ಸಮುದಾಯದ ನಡುವೆ ಹತ್ತಿರದ ಸಾಮ್ಯತೆ ಇದೆ. ಈ ಸಮುದಾಯಗಳು ಕೇವಲ ಹತ್ತು ಮಂದಿ ಇದ್ದರೂ ಯಾವುದೇ ಪ್ರದೇಶದಲ್ಲಿ, ಎಂತಹದ್ದೆ ಸಂದರ್ಭ ಎದುರಾದರು ದಿಟ್ಟತನವಾಗಿ, ಧೈರ್ಯದಿಂದ ಬದುಕಬಲ್ಲರು. ಹೀಗಾಗಿಯೇ ಹೋಟೆಲ್ ಉದ್ಯಮದಲ್ಲಿ ಬಂಟ ಸಮುದಾಯ ದೇಶ, ವಿದೇಶದಲ್ಲಿ ಹೆಸರುವಾಸಿಯಾಗಿದೆ ಎಂದರು.

ಬೆಂಗಳೂರು ಬಂಟರ ಹೋಟೆಲ್ ಮಾಲಕರ ಸಂಘದ ಪ್ರಧಾನ ಸಂಚಾಲಕ ಜಿ.ಕೆ.ಶೆಟ್ಟಿ ಮಾತನಾಡಿ, ಮೂಲತಃ ಕೃಷಿ ಮೂಲದವರಾದ ಬಂಟ ಸಮುದಾಯ ಕಳೆದ 30ವರ್ಷಗಳ ಹಿಂದೆ ಸಣ್ಣ ಹೋಟೆಲ್‌ಗಳನ್ನು ಪ್ರಾರಂಭಿಸಿ, ಇವತ್ತು ಪಂಚತಾರಾ ಹೋಟೆಲ್‌ಗಳನ್ನು ನಡೆಸುತ್ತಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹೋಟೆಲ್ ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಸಮುದಾಯದ ಹಿರಿಯರ ತ್ಯಾಗ, ಪರಿಶ್ರಮದಿಂದಾಗಿ ಬಂಟ ಸಮುದಾಯ ಇವತ್ತು ಹೋಟೆಲ್ ಸೇರಿದಂತೆ ವಿವಿಧ ಉದ್ಯಮಗಳಲ್ಲಿ ಬಹು ಎತ್ತರಕ್ಕೆ ಬೆಳೆದಿದೆ. ಇದನ್ನು ಯುವ ತಲೆಮಾರಿಗೆ ತಲುಪಿಸುವುದು ನಮ್ಮ ಕರ್ತವ್ಯವೆಂದು ತಿಳಿಸಿದರು.

ಹತ್ತಾರು ವರ್ಷಗಳ ಹಿಂದೆ ಮಹಾರಾಷ್ಟ್ರದಲ್ಲಿ ಬಂಟರು ಉದ್ಯಮಗಳನ್ನು ನಡೆಸಲು ಕಷ್ಟವಾಗುತ್ತಿತ್ತು. ಶಿವಸೈನ್ಯದ ಕಾರ್ಯಕರ್ತರಿಂದ ಸಮಸ್ಯೆಯನ್ನು ಎದುರಿಸಬೇಕಾಗುತ್ತಿತ್ತು. ಆ ಸಂದರ್ಭದಲ್ಲಿ ನಮ್ಮ ಹಿರಿಯರು ದಿಟ್ಟತನದಿಂದ ಪ್ರತಿರೋಧ ತೋರಿದ ಪರಿಣಾಮವಾಗಿ ಇವತ್ತು ನಾವು ದೇಶದ ಎಲ್ಲೆಡೆಯು ಉದ್ಯಮಗಳನ್ನು ನಡೆಸಲು ಸಾಧ್ಯವಾಗಿದೆ. ಹೀಗಾಗಿ ನಮ್ಮ ಹಿರಿಯರ ತ್ಯಾಗಗಳನ್ನು ಸ್ಮರಿಸುತ್ತಾ ಸಮಾಜದ ಒಳಿಗಾಗಿ ದುಡಿಯಬೇಕಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆಯ ಅಪರ ನಿರ್ದೇಶಕ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ, ಬೆಂಗಳೂರು ಬಂಟರ ಹೋಟೆಲ್ ಮಾಲಕರ ಸಂಘದ ಗೌರವಾಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಬೆಂಗಳೂರು ಬಂಟರ ಹೋಟೆಲ್ ಮಾಲಕರ ಸಂಘದ ಅಧ್ಯಕ್ಷ ಮಧುಕರ ಎಂ.ಶೆಟ್ಟಿ, ಗೌರ ಕಾರ್ಯದರ್ಶಿ ಸಂತೋಷ ಕುಮಾರ ಶೆಟ್ಟಿ, ರಾಜೀವ ಶೆಟ್ಟಿ, ಶ್ರೀನಿವಾಸ ಶೆಟ್ಟಿ, ಕೊರ್ಗಿ ಗೋಪಾಲ ಶೆಟ್ಟಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News