ಹೆಣ್ಣನ್ನು ಭೋಗದ ವಸ್ತುವನ್ನಾಗಿ ಕಾಣುವ ಪ್ರವೃತ್ತಿ ಬದಲಾಗಬೇಕು: ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡ

Update: 2019-09-08 14:31 GMT

ಬೆಂಗಳೂರು, ಸೆ.8: ಸಮಾಜದಲ್ಲಿ ಪುರುಷರಿಗೆ ಸರಿಸಮಾನಾಗಿ ಬೆಳೆಯುತ್ತಿರುವ ನಡುವೆಯೇ ಹೆಣ್ಣನ್ನು ಭೋಗದ ವಸ್ತುವನ್ನಾಗಿ ಕಾಣುವ ಪ್ರವೃತ್ತಿ ಮುಂದು ವರೆಯುತ್ತಿದ್ದು, ಈ ವ್ಯವಸ್ಥೆ ಬದಲಾಗಬೇಕಿದೆ ಎಂದು ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡ ಅಭಿಪ್ರಾಯಟಪಟ್ಟರು.

ರವಿವಾರ ಚಾಮರಾಜಪೇಟೆಯ ಕಸಾಪದಲ್ಲಿ ಕರ್ನಾಟಕ ಲೇಖಕಿಯರ ಸಂಘ ಆಯೋಜಿಸಿದ್ದ ವರ್ಷದ ಲೇಖಕಿ- ಅಂಕಿತ ಪುಸ್ತಕ ಪುರಸ್ಕಾರ ಕಾರ್ಯಕ್ರಮವಲ್ಲಿ ಮಾತನಾಡಿದ ಅವರು, ಒಂದು ಕಡೆ ಹೆಣ್ಣನ್ನು ವೈಭವೀಕರಿಸಿದರೆ ಮತ್ತೊಂದಡೆ ಹೀಯಾಳಿಸುತ್ತಾರೆ. ಪ್ರಾಚೀನ ಕಾಲದಲ್ಲಿ ಹೆಣ್ಣು ದೇವತೆಗಳಿಕ್ಕಿಂತ ಮಿಗಿಲಾದ ದೇವತೆಯೆಂದು ಹೇಳಿದ್ದರೂ ಸಮಾಜದಲ್ಲಿ ಈಗಲೂ ಹೆಣ್ಣನ್ನು ಕೆಟ್ಟದಾಗಿ ನೋಡುವ ಹೀನ ಸಂಸ್ಕೃತಿಯಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸಮಾಜದಲ್ಲಿ ಮಹಿಳೆಯರಿಗೆ ಆದ್ಯತೆ ನೀಡಿದ ಸಂದರ್ಭದಲ್ಲಿ ರಾಜರಾಮ್ ಮೋಹನ್‌ರಾಯ್ ಹಾಗೂ ಈಶ್ವರ ಚಂದ್ರ ವಿದ್ಯಾಸಾಗರ್ ಅಂದಿನ ದಿನಗಳಲ್ಲಿ ತೆಗೆದುಕೊಂಡು ನಿರ್ಣಯಗಳು ಮಹಿಳೆಯರು ಬೆಳೆಯುವುದಕ್ಕೆ ಅಡಿಪಾಯ ಹಾಕಿಕೊಟ್ಟವು. ನಿತ್ಯ ಕಿರುಕುಳ, ವಿರೋಧಗಳ ನಡುವೆಯೇ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಆಗಾಧ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.

ಲೇಖಕಿಯರು ತಮ್ಮ ಲೇಖನಗಳಲ್ಲಿ ಪುರುಷರನ್ನು ಟೀಕೆ ಮತ್ತು ನಿಂದನೆ ಮಾಡುವುದು ಇದ್ದೇ ಇರುತ್ತದೆ. ಆದರೆ, ಅದನ್ನು ಕ್ರಿಯಾತ್ಮಕವಾಗಿ ಹೇಳುವುದು ಬಹಳ ಮುಖ್ಯವಾಗಿದೆ. ಹೀಗಾಗಿ, ಆರೋಗ್ಯಕರ ಮನಸ್ಸಿನಿಂದ ಕೃತಿಗಳನ್ನು ಪರಿಣಾಮಕಾರಿ ರಚಿಸಿ ಎಂದು ಸಲಹೆ ನೀಡಿದರು.

ಕವಿಯತ್ರಿ ಡಾ.ಎಚ್.ಎಲ್.ಪುಪ್ಪ ಮಾತನಾಡಿ, ಲೇಖಕಿ ವಾಸುಮತಿ ಉಡುಪ ಅವರು ತಮ್ಮ ಕೃತಿಗಳಲ್ಲಿ ಕಾಲಕ್ಕೆ ತಕ್ಕಂತೆ ಪ್ರತಿಕ್ರಿಯೆಗಳು ನೀಡುತ್ತಿರುವುದು ವಿಶೇಷ. ತಮ್ಮ ಜೀವನವನ್ನೇ ಬರೆವಣಿಗೆಗೆ ಮೀಸಲಿಟ್ಟಿರುವ ಇವರು ಈವರೆಗೆ 21 ಕಥಾ ಸಂಕಲನಗಳನ್ನು ರಚಿಸಿದ್ದಾರೆ ಎಂದು ಹೇಳಿದರು.

ಸಮಾರಂಭದಲ್ಲಿ ಸಂಘದ ಅಧ್ಯಕ್ಷೆ ವನಮಾಲಾ ಸಂಪನ್ನಕುಮಾರ, ಲೇಖಕಿ ವಸುಮತಿ ಉಡುಪಿ ಮತ್ತು ಅಂಕಿತ ಪುಸ್ತಕದ ಪ್ರಕಾಶ್ ಕಂಬತ್ತಹಳ್ಳಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News