ಜೈಶ್ ಮುಖ್ಯಸ್ಥ ಮಸೂದ್ ಅಝರ್‌ ಜೈಲಿನಿಂದ ಬಿಡುಗಡೆ ?

Update: 2019-09-09 03:54 GMT

ಹೊಸದಿಲ್ಲಿ: ಭಾರತ- ಪಾಕಿಸ್ತಾನ ಗಡಿಯಲ್ಲಿ ರಾಜಸ್ಥಾನ ಬಳಿ ಪಾಕಿಸ್ತಾನ ಹೆಚ್ಚುವರಿ ಸೇನೆ ನಿಯೋಜಿಸುತ್ತಿದೆ ಎಂಬ ಮಾಹಿತಿಯ ಬೆನ್ನಲ್ಲೇ ಪಾಕಿಸ್ತಾನ ಕುಖ್ಯಾತ ಉಗ್ರ, ಜೈಶ್ ಎ ಮೊಹ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್‌ನನ್ನು ರಹಸ್ಯವಾಗಿ ಜೈಲಿನಿಂದ ಬಿಡುಗಡೆ ಮಾಡಲಾಗಿದೆ ಎಂಬ ಆತಂಕಕಾರಿ ಮಾಹಿತಿ ಗುಪ್ತಚರ ವಿಭಾಗಕ್ಕೆ ಲಭ್ಯವಾಗಿದೆ.

ಪಾಕಿಸ್ತಾನ ದೊಡ್ಡ ಕಾರ್ಯಾಚರಣೆಗೆ ಮುಂದಾಗಿದೆ ಎಂದು ಕೂಡಾ ಸರ್ಕಾರವನ್ನು ಎಚ್ಚರಿಸಿದೆ.

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದುಪಡಿಸಿದ ಭಾರತದ ಕ್ರಮಕ್ಕೆ ಪ್ರತೀಕಾರವಾಗಿ ಸಿಯಾಲ್‌ಕೋಟ್- ಜಮ್ಮು ಮತ್ತು ರಾಜಸ್ಥಾನ ವಲಯದಲ್ಲಿ ಪಾಕಿಸ್ತಾನ ದೊಡ್ಡ ಕಾರ್ಯಾಚರಣೆಗೆ ಮುಂದಾಗಿದೆ ಎಂಬ ಮಾಹಿತಿ ಲಭಿಸಿದೆ. ಇದಕ್ಕೆ ಪೂರ್ವಭಾವಿಯಾಗಿ ರಾಜಸ್ಥಾನ ಗಡಿಯಲ್ಲಿ ಹೆಚ್ಚುವರಿ ಸೇನೆಯನ್ನು ನಿಯೋಜಿಸುತ್ತಿದೆ ಎಂದು ಗುಪ್ತಚರ ಮೂಲಗಳು ಹೇಳಿವೆ.

ಆಯಾ ಭಾಗದಲ್ಲಿ ನಿಯೋಜಿಸಿರುವ ಗಡಿಭದ್ರತಾ ಪಡೆ ಮುಖ್ಯಸ್ಥರಿಗೆ ಮತ್ತು ಜಮ್ಮು ಹಾಗೂ ರಾಜಸ್ಥಾನ ವಲಯದ ಸೇನಾ ಘಟಕಗಳಿಗೆ ಈ ಮಾಹಿತಿ ನೀಡಿ, ಪಾಕಿಸ್ತಾನ ಸೇನೆಯ ಯಾವುದೇ ಅಚ್ಚರಿಯ ನಡೆ ಬಗ್ಗೆ ಎಚ್ಚರ ವಹಿಸಿ ಸಜ್ಜಾಗಿರುವಂತೆ ಸೂಚಿಸಲಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಭಾರತದ ಜಮ್ಮು ಕಾಶ್ಮೀರ ಕ್ರಮಕ್ಕೆ ಪ್ರತಿಯಾಗಿ ಸಾಧ್ಯವಿರುವಷ್ಟು ಪ್ರಬಲವಾಗಿ ಪಾಕಿಸ್ತಾನ ಪ್ರತಿಕ್ರಿಯಿಸಲಿದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಎಚ್ಚರಿಸಿದ್ದರು. ಯಾವುದೇ ಅಹಿತಕರ ಘಟನೆಗಳು ಸಂಭವಿಸಿದರೆ, ಜಾಗತಿಕ ಸಮುದಾಯ ಅದಕ್ಕೆ ಹೊಣೆಯಾಗಬೇಕಾಗುತ್ತದೆ ಎಂದು ಇಮ್ರಾನ್ ಹೇಳಿದ್ದರು.

ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಎದುರಾಗಿರುವ ನಡುವೆಯೇ ಪಾಕಿಸ್ತಾನ, ಭಯೋತ್ಪಾದಕ ಚಟುವಟಿಕೆಗಳ ಯೋಜನೆ ರೂಪಿಸಲು ಜೈಶ್ ಮುಖ್ಯಸ್ಥ ಮಸೂದ್ ಅಝರ್‌ನನ್ನು ರಹಸ್ಯವಾಗಿ ಬಿಡುಗಡೆ ಮಾಡಿದೆ. ಇತರ ಉಗ್ರ ಸಂಘಟನೆಗಳು ಕೂಡಾ ಇಂಥ ಕಾರ್ಯಾಚರಣೆಗೆ ಸಿದ್ಧತೆ ನಡೆಸುತ್ತಿವೆ ಎಂದು ಗುಪ್ತಚರ ವಿಭಾಗ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News