90 ಬೀದಿನಾಯಿಗಳ ಮಾರಣಹೋಮ

Update: 2019-09-09 14:25 GMT

 ಬುಲ್ಡಾನಾ,ಸೆ.9: ಕಾಲುಗಳು ಮತ್ತು ಬಾಯಿ ಕಟ್ಟಿಹಾಕಿದ ಸ್ಥಿತಿಯಲ್ಲಿರುವ ಕನಿಷ್ಠ 90 ನಾಯಿಗಳ ಕಳೇಬರಗಳು ಬುಲ್ಡಾನಾ ಜಿಲ್ಲೆಯ ಗಿಲ್ಡಾ-ಸವಾಲದಬಾರಾ ರಸ್ತೆಯ ಪಕ್ಕದ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿವೆ. ನೂರಕ್ಕೂ ಅಧಿಕ ನಾಯಿಗಳನ್ನು ಐದು ಪ್ರತ್ಯೇಕ ಸ್ಥಳಗಳಲ್ಲಿ ಎಸೆಯಲಾಗಿದ್ದು,ಇನ್ನೂ ಉಸಿರಾಡುತ್ತಿದ್ದ ಕೆಲವು ನಾಯಿಗಳನ್ನು ಅಧಿಕಾರಿಗಳು ರಕ್ಷಿಸಿದ್ದಾರೆ.

ನಾಯಿಗಳ ಕಳೇಬರಗಳು ಕೊಳೆತು ದುರ್ವಾಸನೆ ಬೀರತೊಡಗಿದ ಬಳಿಕ ಗ್ರಾಮಸ್ಥರು ಸ್ಥಳೀಯ ಪೊಲೀಸರಿಗೆ ದೂರಿದ್ದರು. ಪೊಲೀಸರು ಮುನ್ಸಿಪಲ್ ಅಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ ನಾಯಿಗಳ ಕಳೇಬರಗಳನ್ನು ಎಸೆಯಲಾಗಿದ್ದು ಬೆಳಕಿಗೆ ಬಂದಿತ್ತು.

ಐಪಿಸಿ ಮತ್ತು ಪ್ರಾಣಿಗಳಿಗೆ ಕ್ರೌರ್ಯ ತಡೆ ಕಾಯ್ದೆಯಡಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು,ನಗರ ಪ್ರದೇಶ ವ್ಯಾಪ್ತಿಯಲ್ಲಿ ಈ ನಾಯಿಗಳನ್ನು ಹಿಡಿದು ಕೊಂದು,ಬಳಿಕ ಅರಣ್ಯದಲ್ಲಿ ಎಸೆಯಲಾಗಿದೆ ಎಂದು ಶಂಕಿಸಿದ್ದಾರೆ.

ಮರಣೋತ್ತರ ಪರೀಕ್ಷೆಯ ಬಳಿಕವೇ ನಾಯಿಗಳ ಸಾವಿಗೆ ನಿಖರ ಕಾರಣ ತಿಳಿದುಬರಬೇಕಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News