ಚೀನಾದ ಏಕಪಕ್ಷಿಯ ನೀತಿಗಳಿಂದ ಅಗಾಧ ವ್ಯಾಪಾರ ಕೊರತೆ: ವಿದೇಶ ಸಚಿವ ಎಸ್. ಜೈಶಂಕರ್

Update: 2019-09-09 16:58 GMT

ಸಿಂಗಾಪುರ, ಸೆ. 9: ಚೀನಾ ಏಕಪಕ್ಷೀಯ ವ್ಯಾಪಾರ ನೀತಿಗಳನ್ನು ಅನುಸರಿಸುತ್ತಿದೆ ಎಂದು ಸೋಮವಾರ ಆರೋಪಿಸಿರುವ ಭಾರತದ ವಿದೇಶ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ಅಖಿಲ ಏಶ್ಯ ಮುಕ್ತ ವ್ಯಾಪಾರ ಒಪ್ಪಂದಕ್ಕಾಗಿ ನಡೆಸಲಾಗುತ್ತಿರುವ ಮಾತುಕತೆಗಳು ಮುನ್ನಡೆಯುವ ಸಾಧ್ಯತೆ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.

ಸಿಂಗಾಪುರದಲ್ಲಿ ನಡೆದ ಸಂವಾದವೊಂದರಲ್ಲಿ ಮಾತನಾಡಿದ ಸಚಿವರು, ‘‘ಚೀನಾದ ನ್ಯಾಯೋಚಿತವಲ್ಲದ ಮಾರುಕಟ್ಟೆ ಪ್ರವೇಶ ಹಾಗೂ ರಕ್ಷಣಾತ್ಮಕ ನೀತಿಗಳ ಬಗ್ಗೆ ಭಾರತ ಸಂಶಯ ಹೊಂದಿದೆ ಎಂದರು. ಚೀನಾದ ಈ ನೀತಿಗಳು ಉಭಯ ದೇಶಗಳ ನಡುವೆ ಗಮನಾರ್ಹ ವ್ಯಾಪಾರ ಕೊರತೆಯನ್ನು ಸೃಷ್ಟಿಸಿವೆ ಎಂದರು.

2019ರ ಮಾರ್ಚ್‌ನಲ್ಲಿ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಚೀನಾದೊಂದಿಗಿನ ಭಾರತದ ವ್ಯಾಪಾರ ಕೊರತೆ 53.6 ಬಿಲಿಯ ಡಾಲರ್ (ಸುಮಾರು 3.84 ಲಕ್ಷ ಕೋಟಿ ರೂಪಾಯಿ) ಆಗಿತ್ತು.

‘‘ಚೀನಾದೊಂದಿಗಿನ ಸಂಬಂಧವು ನಿಶ್ಚಿತವಾಗಿಯೂ ಭಾರತದ ಅತ್ಯಂತ ದೊಡ್ಡ ಕಳವಳವಾಗಿದೆ. ಯಾಕೆಂದರೆ, ನಾವು ಚೀನಾದೊಂದಿಗೆ ಅಗಾಧ ವ್ಯಾಪಾರ ಕೊರತೆಯನ್ನು ಹೊಂದಿದ್ದೇವೆ’’ ಎಂದು ಭಾರತದ ವಿದೇಶ ಸಚಿವರು ಹೇಳಿದರು. ಪ್ರಾದೇಶಿಕ ಸಮಗ್ರ ಆರ್ಥಿಕ ಭಾಗೀದಾರಿಕೆ (ಆರ್‌ಸಿಇಪಿ)ಗಾಗಿ ಪ್ರಸಕ್ತ ನಡೆಯುತ್ತಿರುವ ಮಾತುಕತೆಗಳ ಬಗ್ಗೆ ಕೇಳಲಾದ ಪ್ರಶ್ನೆಯೊಂದಕ್ಕೆ ಅವರು ಈ ರೀತಿಯಾಗಿ ಉತ್ತರಿಸಿದರು.

ವರ್ಷಾಂತ್ಯದಲ್ಲಿ ಆರ್‌ಸಿಇಪಿ?

ಈ ವರ್ಷದ ಕೊನೆಯ ವೇಳೆಗೆ ಪ್ರಾದೇಶಿಕ ಸಮಗ್ರ ಆರ್ಥಿಕ ಭಾಗೀದಾರಿಕೆ (ಆರ್‌ಸಿಇಪಿ) ಅಸ್ತಿತ್ವಕ್ಕೆ ಬರುವ ವಿಶ್ವಾಸವನ್ನು ಸಂಧಾನಕಾರರು ವ್ಯಕ್ತಪಡಿಸಿದ್ದಾರೆ.

ಆರ್‌ಸಿಇಪಿಯಲ್ಲಿ ಆಗ್ನೇಯ ಏಶ್ಯದ ಸಂಘಟನೆ ‘ಆಸಿಯಾನ್’ನ ಎಲ್ಲ 10 ದೇಶಗಳು (ಇಂಡೋನೇಶ್ಯ, ಥಾಯ್ಲೆಂಡ್, ಮಲೇಶ್ಯ, ಸಿಂಗಾಪುರ, ಫಿಲಿಪ್ಪೀನ್ಸ್, ವಿಯೆಟ್ನಾಮ್, ಮ್ಯಾನ್ಮಾರ್, ಬ್ರೂನೈ, ಲಾವೋಸ್ ಮತ್ತು ಕಾಂಬೋಡಿಯ) ಹಾಗೂ ಜಪಾನ್, ದಕ್ಷಿಣ ಕೊರಿಯ, ಆಸ್ಟ್ರೇಲಿಯ, ನ್ಯೂಝಿಲ್ಯಾಂಡ್, ಭಾರತ ಮತ್ತು ಚೀನಾ ದೇಶಗಳಿವೆ.

ಕಳೆದ ವಾರಾಂತ್ಯದಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಮಾತುಕತೆಗಳ ಬಳಿಕ, ಈ ವರ್ಷದ ಅಂತ್ಯದ ವೇಳೆಗೆ ಒಪ್ಪಂದವೊಂದನ್ನು ತಲುಪುವ ವಿಶ್ವಾಸವನ್ನು ಸಂಘಟನೆಯ ಎಲ್ಲ 16 ದೇಶಗಳು ವ್ಯಕ್ತಪಡಿಸಿವೆ. ಆದರೆ, ಈ ಗುರಿಯನ್ನು ತಲುಪಲು ಸಾಧ್ಯವೇ ಎನ್ನುವುದು ಪ್ರಶ್ನಾರ್ಥಕ ಚಿಹ್ನೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News