ಎಪ್ರಿಲ್-ಜೂನ್ ಅವಧಿಯಲ್ಲಿ ಸಾರ್ವಜನಿಕ ರಂಗದ ಬ್ಯಾಂಕುಗಳಲ್ಲಿ 31,800 ಕೋಟಿ ರೂ. ವಂಚನೆ ಎಂದ ಆರ್ ಬಿಐ

Update: 2019-09-10 10:51 GMT

ಭೋಪಾಲ್, ಸೆ.10: ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಸಾರ್ವಜನಿಕ ರಂಗದ ಬ್ಯಾಂಕುಗಳಲ್ಲಿ 31,800 ಕೋಟಿ ರೂ. ಒಳಗೊಂಡ 2,480 ವಂಚನೆ ಪ್ರಕರಣಗಳು ನಡೆದಿವೆ ಎಂದು ಮಧ್ಯ ಪ್ರದೇಶದ ನೀಮುಚ್ ಪಟ್ಟಣದ ಆರ್ ಟಿಐ ಕಾರ್ಯಕರ್ತ ಚಂದ್ರಶೇಖರ್ ಗೌಡ್ ಆರೋಪಿಸಿದ್ದಾರೆ.

ಎಪ್ರಿಲ್ ನಿಂದ ಜೂನ್ ತನಕ ಸಾರ್ವಜನಿಕ ರಂಗದ ಬ್ಯಾಂಕುಗಳಿಗೆ ಸಂಬಂಧಿಸಿದಂತೆ ದಾಖಲಾಗಿರುವ ವಂಚನೆ ಪ್ರಕರಣಗಳ ಮಾಹಿತಿ ಕೇಳಿ ತಾವು ಆರ್‍ ಟಿಐ ಅರ್ಜಿ ಸಲ್ಲಿಸಿದ್ದಾಗಿ ಹೇಳಿದ ಅವರು ಬ್ಯಾಂಕ್ ವಂಚನೆ ಪ್ರಕರಣಗಳಿಂದ ಉಂಟಾಗಿರುವ ನಷ್ಟದ ವಿವರಗಳನ್ನೂ ಕೇಳಿದ್ದಾಗಿ ಅವರು ಹೇಳಿದ್ದಾರೆ.

ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ (ಎಪ್ರಿಲ್ 1ರಿಂದ ಜೂನ್ 30ರ ತನಕ) ಒಟ್ಟು 18 ಸಾರ್ವಜನಿಕ ರಂಗದ ಬ್ಯಾಂಕುಗಳಲ್ಲಿ 31,893.63 ಕೋಟಿ ರೂ. ಒಳಗೊಂಡ 2,480 ವಂಚನೆ ಪ್ರಕರಣಗಳು ದಾಖಲಾಗಿವೆ ಎಂದು ಆರ್‍ ಬಿಐ ತನ್ನ ಉತ್ತರದಲ್ಲಿ ತಿಳಿಸಿತ್ತೆಂದು ಅವರು ಮಾಹಿತಿ ನೀಡಿದ್ದಾರೆ.

ಒಟ್ಟು 1,197 ಪ್ರಕರಣಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಸಂಬಂಧಿಸಿದ್ದಾಗಿದ್ದರೆ, 99 ಪ್ರಕರಣಗಳು ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಾಗೂ 381 ಪ್ರಕರಣಗಳು ಅಲಹಾಬಾದ್ ಬ್ಯಾಂಕ್‍ನಿಂದ ವರದಿಯಾಗಿದ್ದವು ಎಂದು ಆರ್‍ ಬಿಐ ಮಾಹಿತಿ ತಿಳಿಸಿದೆಯೆನ್ನಲಾಗಿದೆ.

ಈ ಬ್ಯಾಂಕುಗಳಿಗೆ ಉಂಟಾಗಿರುವ ನಷ್ಟದ ಬಗ್ಗೆಯೂ ಮಾಹಿತಿ ಕೇಳಿದ್ದರೂ ಈ ಮಾಹಿತಿ ತನ್ನ ಬಳಿಯಿಲ್ಲ ಎಂದು ಆರ್‍ ಬಿಐ ಹೇಳಿದೆ ಎಂದು ಚಂದ್ರಶೇಖರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News