ಭಾರತ-ನೇಪಾಳ ಪೈಪ್‌ಲೈನ್‌ಗೆ ಚಾಲನೆ: ಮೋದಿ, ಕೆ.ಪಿ. ಶರ್ಮ ಒಲಿಯಿಂದ ಜಂಟಿ ಉದ್ಘಾಟನೆ

Update: 2019-09-10 14:37 GMT

ಕಠ್ಮಂಡು, ಸೆ. 10: ಭಾರತ ಮತ್ತು ನೇಪಾಳಗಳ ನಡುವಿನ ಪೆಟ್ರೋಲಿಯಂ ಪೈಪ್‌ಲೈನ್ ಮಂಗಳವಾರ ಉದ್ಘಾಟನೆಗೊಂಡಿದೆ. ಎರಡು ದೇಶಗಳ ನಡುವೆ ಪೆಟ್ರೋಲಿಯಂ ಪೈಪ್‌ಲೈನ್ ಹಾದು ಹೋಗಿರುವುದು ದಕ್ಷಿಣ ಏಶ್ಯದಲ್ಲೇ ಮೊದಲನೆಯದಾಗಿದೆ.

ಸುತ್ತಲೂ ನೆಲಾವೃತವಾಗಿರುವ ನೇಪಾಳಕ್ಕೆ ತನ್ನ ಇಂಧನ ಅವಶ್ಯಕತೆಗಳನ್ನು ಪೂರೈಸಲು ಹಾಗೂ ಇಂಧನ ಸಾಗಾಟದ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಲು ಈ ಪೈಪ್‌ಲೈನ್ ನೆರವಾಗಲಿದೆ.

60 ಕಿ.ಮೀ.ಗಿಂತಲೂ ಹೆಚ್ಚಿನ ಉದ್ದದ ಮೋತಿಹಾರಿ-ಆಮ್‌ಲೇಖ್‌ಗಂಜ್ ತೈಲ ಪೈಪ್‌ಲೈನ್‌ನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ನೇಪಾಳ ಪ್ರಧಾನಿ ಕೆ.ಪಿ. ಶರ್ಮ ಒಲಿ ವೀಡಿಯೊ ಲಿಂಕ್ ಮೂಲಕ ಜಂಟಿಯಾಗಿ ಉದ್ಘಾಟಿಸಿದರು.

ಭಾರತದ 324 ಕೋಟಿ ರೂಪಾಯಿ ನೆರವಿನೊಂದಿಗೆ ಪೈಪ್‌ಲೈನನ್ನು ನಿರ್ಮಿಸಲಾಗಿದೆ.

ಯೋಜನೆಯನ್ನು ಉದ್ಘಾಟಿಸಿದ ನೇಪಾಳ ಪ್ರಧಾನಿ ಒಲಿ, ಈ ಪೈಪ್‌ಲೈನ್ ನೇಪಾಳದ ದೊಡ್ಡ ಸಾಧನೆಯಾಗಿದೆ ಎಂದು ಹೇಳಿದರು.

‘‘ನಮ್ಮ ಜನರ ಅಭಿವೃದ್ಧಿ, ಸಮೃದ್ಧಿ ಮತ್ತು ಸಂತೋಷಕ್ಕಾಗಿ ನಾವು (ಭಾರತ ಮತ್ತು ನೇಪಾಳ) ಒಂದೇ ರೀತಿಯ ಮುನ್ನೋಟಗಳನ್ನು ಹೊಂದಿದ್ದೇವೆ. ಇದನ್ನು ಸಾಕಾರಗೊಳಿಸಲು ಸದೃಢ ರಾಜಕೀಯ ಬದ್ಧತೆ ಮತ್ತು ಪ್ರಬಲ ಇಚ್ಛಾಶಕ್ತಿಯನ್ನು ಹೊಂದಿದ್ದೇವೆ’’ ಎಂದರು.

60 ಕಿ.ಮೀ.ಗೂ ಅಧಿಕ ಉದ್ದದ ಪೆಟ್ರೋಲಿಯಂ ಪೈಪ್‌ಲೈನ್ ಮೂಲಕ, ಮೊದಲ ಹಂತದಲ್ಲಿ, ಬಿಹಾರದ ಮೋತಿಹಾರ್ ನಗರದಿಂದ ನೇಪಾಳಕ್ಕೆ ಡೀಸೆಲ್ ಸಾಗಿಸಲು ನೇಪಾಳದ ಅಧಿಕಾರಿಗಳು ನಿರ್ಧರಿಸಿದ್ದಾರೆ. ನೇಪಾಳದ ಭಾಗದಲ್ಲಿ ಪೈಪ್‌ಲೈನ್‌ಗೆ ಭದ್ರತೆ ನೀಡಲು ನೇಪಾಳ ಸೇನೆಯು ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ.

ಪ್ರಸಕ್ತ ಪೆಟ್ರೋಲಿಯಂ ಉತ್ಪನ್ನಗಳನ್ನು ಟ್ಯಾಂಕರ್‌ಗಳ ಮೂಲಕ ಭಾರತದಿಂದ ನೇಪಾಳಕ್ಕೆ ಸಾಗಿಸಲಾಗುತ್ತಿದೆ. ಈ ವ್ಯವಸ್ಥೆಯು 1973ರಿಂದಲೂ ಚಾಲ್ತಿಯಲ್ಲಿದೆ.

ಪೆಟ್ರೋಲಿಯಂ ಉತ್ಪನ್ನಗಳ ಸಾಗಾಟ ಖರ್ಚಿನಲ್ಲಿ ವಾರ್ಷಿಕ 200 ಕೋಟಿ ನೇಪಾಳಿ ರೂಪಾಯಿ (ಸುಮಾರು 125 ಕೋಟಿ ಭಾರತೀಯ ರೂಪಾಯಿ) ಉಳಿಸುವ ನಿರೀಕ್ಷೆಯನ್ನು ನೇಪಾಳ್ ತೈಲ ನಿಗಮ ಹೊಂದಿದೆ. ಅದೂ ಅಲ್ಲದೆ, ಪೆಟ್ರೋಲಿಯ ಉತ್ನನ್ನಗಳ ಸೋರಿಕೆಯನ್ನು ಕಡಿಮೆ ಮಾಡುವ ಮೂಲಕ ಹೆಚ್ಚುವರಿಯಾಗಿ ಕೋಟ್ಯಂತರ ರೂಪಾಯಿಯನ್ನು ಉಳಿಸಬಹುದಾಗಿದೆ ಎಂಬುದಾಗಿಯೂ ಅದು ಹೇಳಿದೆ.

23 ವರ್ಷಗಳ ಯೋಜನೆ!

ಮೋತಿಹಾರಿ-ಆಮ್‌ಲೇಖ್‌ಗಂಜ್ ತೈಲ ಪೈಪ್‌ಲೈನ್ ಯೋಜನೆಯನ್ನು ಮೊದಲ ಬಾರಿಗೆ 1996ರಲ್ಲಿ ಪ್ರಸ್ತಾಪಿಸಲಾಗಿತ್ತು. ಆದರೆ, ಅದಕ್ಕೆ ನಿಜವಾದ ಚಾಲನೆ ದೊರೆತಿದ್ದು ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ ನೇಪಾಳಕ್ಕೆ ನೀಡಿದ ಭೇಟಿಯ ವೇಳೆ.

ಯೋಜನೆಯನ್ನು ಜಾರಿಗೊಳಿಸುವುದಕ್ಕಾಗಿ ಎರಡು ಸರಕಾರಗಳು 2015 ಆಗಸ್ಟ್‌ನಲ್ಲಿ ಒಪ್ಪಂದವೊಂದಕ್ಕೆ ಸಹಿ ಹಾಕಿದವು.

2015ರಲ್ಲಿ ನೇಪಾಳದಲ್ಲಿ ಸಂಭವಿಸಿದ ಭೂಕಂಪ ಮತ್ತು ದಕ್ಷಿಣ ಗಡಿಯಲ್ಲಿನ ಪೂರೈಕೆ ತಡೆಯಿಂದಾಗಿ ಯೋಜನೆಯ ಜಾರಿ ವಿಳಂಬಗೊಂಡಿತು. ಯೋಜನೆ ಕಾಮಗಾರಿ ಕೊನೆಗೂ ಕಳೆದ ವರ್ಷದ ಎಪ್ರಿಲ್‌ನಲ್ಲಿ ಆರಂಭಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News