ರಾಜ ಭವನಗಳಲ್ಲಿ ರಾಜಕಾರಣಿಗಳು

Update: 2019-09-10 18:28 GMT

ಕೇಂದ್ರ-ರಾಜ್ಯ ಸಂಬಂಧಗಳ ಕುರಿತು ಸರ್ಕಾರಿಯಾ ಆಯೋಗವು ಮಾಡಿರುವ ಶಿಫಾರಸುಗಳಲ್ಲಿ ಒಂದು ಮುಖ್ಯ ಶಿಫಾರಸು: ರಾಜಕೀಯವಾಗಿ ಸಕ್ರಿಯವಾಗಿರುವ ವ್ಯಕ್ತಿಗಳನ್ನು ರಾಜ್ಯಪಾಲರನ್ನಾಗಿ ನೇಮಿಸಲೇಬಾರದು. ಆದರೆ, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಸರಕಾರಗಳು, ಪಕ್ಷಭೇದವಿಲ್ಲದೆ ಈ ಶಿಫಾರಸನ್ನು ಉಲ್ಲಂಘಿಸುತ್ತಲೇ ಬಂದಿದೆ. ನರೇಂದ್ರ ಮೋದಿಯವರ ಸರಕಾರವೂ ಇಂತಹ ಹಲವಾರು ನೇಮಕಾತಿಗಳನ್ನು ಮಾಡಿದೆ. ತಮಿಳುನಾಡು ಬಿಜೆಪಿ ಅಧ್ಯಕ್ಷೆ ತಮಿಳ್ ಸಾಯಿ ಸೌಂದರ್ ರಾಜನ್ ಅವರನ್ನು ತೆಲಂಗಾಣದ ರಾಜ್ಯಪಾಲರನ್ನಾಗಿ ನೇಮಕ ಮಾಡಿರುವುದು ಇದಕ್ಕೆ ಇತ್ತೀಚಿನ ಉದಾಹರಣೆ.

ಸಂವಿಧಾನವು ಒಬ್ಬ ವ್ಯಕ್ತಿಯನ್ನು ರಾಜ್ಯಪಾಲರನ್ನಾಗಿ ನೇಮಿಸುವುದಕ್ಕೆ ಯಾವುದೇ ಅರ್ಹತೆಗಳನ್ನು ನಿಗದಿಪಡಿಸಿಲ್ಲ. ರಾಜ್ಯಪಾಲರಾಗಿ ನಿಯುಕ್ತರಾಗುವ ವ್ಯಕ್ತಿ 35 ವರ್ಷ ವಯಸ್ಸನ್ನು ಪೂರ್ಣಗೊಳಿಸಿರುವ, ಭಾರತದ ನಾಗರಿಕರಾಗಿರಬೇಕೆಂದಷ್ಟೇ ಸಂವಿಧಾನದ 157ನೇ ವಿಧಿ ಹೇಳುತ್ತದೆ.

ಸರ್ಕಾರಿಯಾ ಆಯೋಗವು ರಾಜ್ಯಪಾಲರ ನೇಮಕಾತಿಗೆ ನಾಲ್ಕು ಪೂರ್ವ ಷರತ್ತುಗಳನ್ನು ವಿಧಿಸಿದೆ: ರಾಜ್ಯಪಾಲರಾಗಿ ನೇಮಕವಾಗುವ ವ್ಯಕ್ತಿ ಜೀವನದ ಯಾವುದಾದರೂ ಕ್ಷೇತ್ರದಲ್ಲಿ ಒಬ್ಬ ಪ್ರಸಿದ್ಧ ವ್ಯಕ್ತಿಯಾಗಿರಬೇಕು; ರಾಜ್ಯದ ಹೊರಗಿನವರಾಗಿರಬೇಕು; ನೇಮಕವಾಗಿರುವ ಮೊದಲು ಸ್ವಲ್ಪ ಸಮಯವಾದರೂ ಸಕ್ರಿಯ ರಾಜಕಾರಣದಲ್ಲಿ ತೊಡಗಿದ್ದವರಾಗಬಾರದು ಮತ್ತು ಸ್ಥಳೀಯ ರಾಜಕಾರಣದೊಂದಿಗೆ ತೀರಾ ನಿಕಟ ಸಂಪರ್ಕವಿರದ ಗಣ್ಯ ವ್ಯಕ್ತಿಯಾಗಿರಬೇಕು. ಪ್ರಧಾನಿಯವರು ರಾಜ್ಯದ ಮುಖ್ಯಮಂತ್ರಿ, ಭಾರತದ ಉಪರಾಷ್ಟ್ರಪತಿ ಹಾಗೂ ಲೋಕಸಭೆಯ ಸ್ಪೀಕರ್ ಜತೆ ಸಮಾಲೋಚನೆ ನಡೆಸಿದ ಬಳಿಕವೇ ರಾಜ್ಯಪಾಲರನ್ನು ನೇಮಿಸಬೇಕು. ವಿಶೇಷ ಸಂದರ್ಭಗಳಲ್ಲಿ ರಾಜ್ಯಪಾಲರನ್ನು ಅವರ ಹುದ್ದೆಯಿಂದ ವಜಾಗೊಳಿಸಿದಲ್ಲಿ ಅಥವಾ ರಾಜ್ಯಪಾಲರು ರಾಜೀನಾಮೆ ನೀಡಿದ್ದಲ್ಲಿ ಸರಕಾರ ಸಂಸತ್ತಿನ ಎರಡೂ ಸಭೆಗಳಲ್ಲಿ ಒಂದು ಹೇಳಿಕೆಯನ್ನು ಮಂಡಿಸಿ ಇದಕ್ಕೆ ಕಾರಣವಾದ ಸಂದರ್ಭಗಳನ್ನು ವಿವರಿಸಬೇಕು. ರಾಜಭವನದ ಘನತೆಯನ್ನು ಉಳಿಸಿಕೊಳ್ಳುವುದಕ್ಕಾಗಿ ರಾಜ್ಯಪಾಲರೊಬ್ಬರು ತನ್ನ ಅಧಿಕಾರಾವಧಿ ಮುಗಿದ ಬಳಿಕವೂ ಕೇಂದ್ರ ಅಥವಾ ರಾಜ್ಯ ಸರಕಾರದ ಯಾವುದೇ ನೇಮಕಾತಿಗೆ ಅರ್ಹರಾಗಕೂಡದು. ದ್ವಿತೀಯ ಅವಧಿಗೆ ರಾಜ್ಯಪಾಲರಾಗಿ ಅಥವಾ ಭಾರತದ ಉಪರಾಷ್ಟ್ರಪತಿ ಅಥವಾ ರಾಷ್ಟ್ರಪತಿಯಾಗಿಯಷ್ಟೇ ಅವರು ಹುದ್ದೆಯನ್ನು ಅಲಂಕರಿಸಬಹುದು ಎಂದೂ ಆಯೋಗ ಹೇಳಿದೆ.

ಆಯೋಗದ ಶಿಫಾರಸುಗಳು ಎರಡು ಮುಖ್ಯ ಅಂಶಗಳನ್ನು ಆಧರಿಸಿದ್ದವು: ಆಳುವ ಪಕ್ಷದ ಅತೃಪ್ತ ಹಾಗೂ ಪಕ್ಷದಿಂದ ನಿರುಪಯೋಗಿ ಎಂದು ಪರಿಗಣಿಸಿ ಬದಿಗೆ ಸರಿಸಲಾದ ರಾಜಕಾರಣಿಗಳು ರಾಜ್ಯಪಾಲ ಹುದ್ದೆಗೆ ನೇಮಕಗೊಳ್ಳುವುದು ಮತ್ತು ಇಂತಹ ವ್ಯಕ್ತಿಗಳು ಹುದ್ದೆಯಲ್ಲಿರುವಾಗ ಕೇಂದ್ರ ಸರಕಾರದ ಏಜೆಂಟರಂತೆ ಕಾರ್ಯ ನಿರ್ವಹಿಸುವುದು. ಎರಡನೆಯದಾಗಿ ಸಾಮರ್ಥ್ಯ, ಪ್ರಾಮಾಣಿಕತೆ, ನಿಷ್ಪಕ್ಷಪಾತಿತನ ಹಾಗೂ ಮುತ್ಸದ್ದಿತನ ಹೊಂದಿರುವ ರಾಜ್ಯಪಾಲರ ಸಂಖ್ಯೆ ಕಡಿಮೆಯಾಗುತ್ತಿರುವುದು. ಭಾರತದ ಮೊದಲ ಪ್ರಧಾನಿ ಜವಾಹರ ಲಾಲ್ ನೆಹರೂ ಅವರ ಆಡಳಿತಾವಧಿಯಲ್ಲಿ ಅತ್ಯುತ್ತಮ ವ್ಯಕ್ತಿತ್ವದ ಹಲವು ಮಂದಿ ರಾಜ್ಯಪಾಲರ ಹುದ್ದೆಗೆ ನೇಮಕಗೊಂಡಿದ್ದರು. ವ್ಯಂಗ್ಯವೆಂದರೆ, 1959ರಲ್ಲಿ ನೆಹರೂ ಅವರ ಆಡಳಿತದಲ್ಲೇ ಕೇರಳದಲ್ಲಿ ಇಎಂಎಸ್ ನಂಬೂದರಿಪಾಡ್‌ರವರ ಚುನಾಯಿತ ಸರಕಾರವನ್ನು ಅಂದಿನ ಅಲ್ಲಿಯ ರಾಜ್ಯಪಾಲ ರಾಮಕೃಷ್ಣರಾವ್‌ರವರ ಶಿಫಾರಸಿನ ಮೇರೆಗೆ ವಜಾಗೊಳಿಸಿ ರಾಷ್ಟ್ರಪತಿ ಆಡಳಿತವನ್ನು ಹೇರಲಾಯಿತು. ಅಂದಿನ ಕೇಂದ್ರ ಗೃಹ ಸಚಿವ ಗೋವಿಂದ ವಲ್ಲಭ್ ಪಂತ್ ‘‘ಕೇರಳ ಸರಕಾರ ಕಾನೂನು ವ್ಯವಸ್ಥೆಯನ್ನು ರದ್ದುಪಡಿಸಿದೆ’’ ಎಂದು ಆಪಾದಿಸಿದ್ದರಾದರೂ, ಅಂದಿನ ಕಾಂಗ್ರೆಸ್ ಅಧ್ಯಕ್ಷೆ ಇಂದಿರಾ ಗಾಂಧಿಯವರ ಒತ್ತಾಯದ ಮೇರೆಗೆ ‘‘ರಾಜ್ಯ ಸಭೆಯನ್ನು ವಿಸರ್ಜಿಸಲಾಗಿದೆ; ನೆಹರೂರವರು ಇದಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ.’’ ಎಂದು ಮೊರಾರ್ಜಿ ದೇಸಾಯಿಯವರು ಸಂಸತ್ತಿನಲ್ಲಿ ಹೇಳಿದ್ದರು.

ಅಂದಿನ ಲಾಗಾಯಿತು, ತಮ್ಮ ರಾಜಕೀಯ ಯಜಮಾನರನ್ನು ಖುಷಿಪಡಿಸಲಿಕ್ಕಾಗಿ ರಾಜ್ಯಪಾಲರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುವ ಹಲವಾರು ಪ್ರಕರಣ ಪ್ರಕರಣಗಳು ನಡೆದಿವೆ. 1966-1977ರ ನಡುವೆ ಪ್ರಧಾನಿ ಇಂದಿರಾ ಗಾಂಧಿ ಅವರು ವಿವಿಧ ರಾಜ್ಯಗಳಲ್ಲಿ 39 ಬಾರಿ ರಾಷ್ಟ್ರಪತಿ ಆಡಳಿತ ಹೇರಿದ್ದರು. 1977ರಲ್ಲಿ ಅಧಿಕಾರಕ್ಕೆ ಬಂದ ಜನತಾ ಪಕ್ಷ ತನ್ನ ಮೂರು ವರ್ಷಕ್ಕಿಂತಲೂ ಕಡಿಮೆ ಆಡಳಿತಾವಧಿಯಲ್ಲಿ ಕಾಂಗ್ರೆಸ್ ಆಡಳಿತವಿದ್ದ ಒಂಬತ್ತು ರಾಜ್ಯ ಸರಕಾರಗಳನ್ನು ವಜಾಗೊಳಿಸಿತ್ತು. ರಾಜ್ಯಪಾಲರ ಅಧಿಕಾರದ ದುರ್ಬಳಕೆ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದ ವರೆಗೂ ಮುಂದುವರಿಯುತ್ತಲೇ ಬಂದಿದೆ. 2018ರಲ್ಲಿ ಬಹುಮತ ಇಲ್ಲದಿದ್ದರೂ ಕರ್ನಾಟಕದ ರಾಜ್ಯಪಾಲ ವಜುಭಾಯಿ ವಾಲಾ ಅವರು ಬಿ.ಎಸ್. ಯಡಿಯೂರಪ್ಪನವರಿಗೆ ಸರಕಾರ ರಚಿಸಲು ಆಹ್ವಾನ ನೀಡಿದ್ದು ಅಂತಹ ಅಧಿಕಾರ ದುರ್ಬಳಕೆಯ ಹಲವು ಉದಾಹರಣೆಗಳಲ್ಲಿ ಒಂದು.

ಇವೆಲ್ಲ ವಿಕೃತಿಗಳಿಗೆ ರಾಜಕಾರಣದಿಂದ ದೂರವಿರದ ವ್ಯಕ್ತಿಗಳನ್ನು ರಾಜ್ಯಪಾಲರನ್ನಾಗಿ ನೇಮಿಸುವುದೇ ಹಲವು ಕಾರಣಗಳಲ್ಲಿ ಒಂದು ಕಾರಣವಾಗಿದೆ. 2004ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ ಅಂದು ಮುಖ್ಯಮಂತ್ರಿಯಾಗಿದ್ದ ಎಸ್. ಎಂ. ಕೃಷ್ಣರನ್ನು ಮಹಾರಾಷ್ಟ್ರದ ರಾಜ್ಯಪಾಲರನ್ನಾಗಿ ನೇಮಿಸಲಾಯಿತು. ಅವರ ಅವಧಿಯ ಮಧ್ಯಭಾಗದಲ್ಲಿ ರಾಜ್ಯಸಭಾ ಸದಸ್ಯರಾಗಲು ಅವರು ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದರು. ಬಳಿಕ ಅವರು ವಿದೇಶ ವ್ಯವಹಾರ ಸಚಿವರಾದರು.

ದಿಲ್ಲಿಯಲ್ಲಿ ಬಿಜೆಪಿಯ ಹೀನಾಯ ಸೋಲಿಗೆ ಕಾರಣರಾದ ಕಿರಣ್ ಬೇಡಿಯವರನ್ನು 2016ರಲ್ಲಿ ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕ ಮಾಡಲಾಯಿತು. ಇನ್ನೂ ಇತ್ತೀಚೆಗೆ ಕುಮ್ಮನಂ ರಾಜಶೇಖರನ್ ಮಿಜೋರಂನ ತನ್ನ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿ ಕೇರಳದ ತಿರುವಂತಪುರದಿಂದ 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು. ರಾಜ್ಯಪಾಲರಾಗಿ ನೇಮಕಗೊಳ್ಳುವ ಮೊದಲು ರಾಜಶೇಖರನ್ ಕೇರಳ ಬಿಜೆಪಿಯ ಮುಖ್ಯಸ್ಥರಾಗಿದ್ದರು. ರಾಜಕಾರಣಿಗಳು ರಾಜ ಭವನಗಳಲ್ಲಿ ರಾಜ್ಯಪಾಲರಾಗಿ ತಳವೂರುವ ಪ್ರವೃತ್ತಿಯೊಂದಿಗೆ ಬಹುತೇಕ ರಾಜ್ಯಪಾಲರು, ಸಂಯುಕ್ತ ಭಾರತದ ಪ್ರತಿನಿಧಿಗಳಾಗುವ ಬದಲಾಗಿ ಕೇಂದ್ರ ಸರಕಾರದ ಸೇವಕರಾಗಿದ್ದಾರೆ. ರಾಜ್ಯಪಾಲರ ಉನ್ನತ ಸ್ಥಾನದ ಪಾವಿತ್ರ್ಯ ಮತ್ತು ಘನತೆಯನ್ನು ಮರಳಿ ಪಡೆಯುವುದು ಸರ್ಕಾರಿಯಾ ಆಯೋಗದ ಶಿಫಾರಸುಗಳನ್ನು ಅಕ್ಷರಶಃ ಅನುಷ್ಠಾನಗೊಳಿಸಿದಾಗ ಮಾತ್ರ ಸಾಧ್ಯವಾದೀತು. ಆದರೆ ಎಲ್ಲ ರಾಜಕೀಯ ಪಕ್ಷಗಳು ತಮ್ಮ ಕೈಗೊಂಬೆಗಳನ್ನು ರಾಜ್ಯಪಾಲರನ್ನಾಗಿ ನೇಮಿಸುವ ತರಾತುರಿಯಲ್ಲಿರುವಾಗ ಈ ಅನುಷ್ಠಾನ ತುಂಬ ದೂರದ, ಸಾಧ್ಯವಾಗದ ಮಾತು ಅನ್ನಿಸುತ್ತದೆ.

(ಲೇಖಕರು ಬೆಂಗಳೂರಿನಲ್ಲಿ ನೆಲೆಸಿರುವ ಓರ್ವ ರಾಜಕೀಯ ವಿಶ್ಲೇಷಕರು)
ಕೃಪೆ: ದಿ ಡೆಕ್ಕನ್ ಹೆರಾಲ್ಡ್

Writer - ಎಂ. ಗೌತಮ್ ಮಾಚಯ್ಯ

contributor

Editor - ಎಂ. ಗೌತಮ್ ಮಾಚಯ್ಯ

contributor

Similar News