ಒಕ್ಕಲಿಗರಿಗೆ ಅನ್ಯಾಯವಾದರೆ ಸಮುದಾಯ ಬಂಡಾಯ ಏಳುವುದು ನಿಶ್ಚಿತ: ನಂಜಾವಧೂತ ಸ್ವಾಮೀಜಿ ಎಚ್ಚರಿಕೆ

Update: 2019-09-11 15:16 GMT

ಬೆಂಗಳೂರು, ಸೆ.11: ಒಕ್ಕಲಿಗ ಸಮುದಾಯದವರಿಗೆ ಅನ್ಯಾಯವಾದರೆ ನಮ್ಮ ಸಮುದಾಯ ಬಂಡಾಯ ಏಳುವುದು ನಿಶ್ಚಿತ. ಇಂದು ನಡೆದಿರುವ ಪ್ರತಿಭಟನೆ ಸಾಂಕೇತಿಕವಷ್ಟೇ ಎಂದು ನಂಜಾವಧೂತ ಸ್ವಾಮೀಜಿ ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿರುವುದನ್ನು ಖಂಡಿಸಿ ಒಕ್ಕಲಿಗ ಸಂಘಟನೆಗಳು, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಾನೂನಿಗೆ ಸದಾ ಗೌರವ ನೀಡುತ್ತಿದ್ದ ಡಿಕೆಶಿ ಅವರನ್ನು ನಡೆಸಿಕೊಂಡ ಕ್ರಮ ಸರಿ ಇಲ್ಲ. ಅವರಿಗೂ ಉದ್ಯಮಿ ಸಿದ್ದಾರ್ಥ ಅವರಿಗೆ ಒದಗಿದ ಗತಿ ಆಗಬಾರದು. ಸಮಾಜ ಅವರೊಂದಿಗೆ ಇದೆ ಎಂಬುದನ್ನು ನೆನಪಿಸಲು ಈ ಬೃಹತ್ ಪ್ರತಿಭಟನಾ ಸಭೆ ನಡೆಯುತ್ತಿದೆ ಎಂದು ಸ್ವಾಮೀಜಿ ನುಡಿದರು.

ಡಿ.ಕೆ.ಶಿವಕುಮಾರ್‌ರನ್ನು ಬಿಡುಗಡೆ ಮಾಡಿ ತರುತ್ತೇವೆ ಎಂಬ ಹುಂಬತನ ನಮಗಿಲ್ಲ. ಡಿಕೆಶಿ ಅಪರಾಧಿ ಎಂದಾದರೆ ಅದಕ್ಕೆ ಕಾನೂನಿದೆ. ಆದರೆ ಅವರನ್ನು ನಡೆಸಿಕೊಂಡ ರೀತಿ ಸರಿಯಿಲ್ಲ. ಶಿಕ್ಷೆಗೆ ಒಳಗಾದವರಿಗೂ ಪೆರೋಲ್ ಮೇಲೆ ಬಿಡುಗಡೆಗೆ ಅವಕಾಶವಿರುತ್ತದೆ. ಆದರೆ ತನ್ನ ತಂದೆಗೆ ಎಡೆಯಿಟ್ಟು ಬರುತ್ತೇನೆ ಎಂದ ಡಿಕೆಶಿಗೆ ಅವಕಾಶ ನೀಡದ್ದನ್ನು ಕೇಳಿದಾಗ, ನನಗೆ ಪುಣ್ಯಕೋಟಿಯ ನೆನಪಾಯಿತು ಎಂದು ನುಡಿದರು.

ಬಿಜೆಪಿ ಒಕ್ಕಲಿಗರಿಗೆ ಅನ್ಯಾಯ ಮಾಡುತ್ತಿದೆ. ಸಮುದಾಯ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದೆ. ಚೆನ್ನೈನಲ್ಲಿ ಕನ್ನಡದ ಹೋರಾಟಗಾರರನ್ನು ಬಂಧನ ಮಾಡಿದಾಗ ಎಲ್ಲರಿಗೂ ಶ್ಯೂರಿಟಿ ಕೊಟ್ಟು ಜಾಮೀನು ಕೊಡಿಸಿದವರು ಡಿ.ಕೆ.ಶಿವಕುಮಾರ್. ಹುಲಿ ಯಾವತ್ತಿದ್ದರೂ ಹುಲಿಯೇ. ಬೋನಿಗೆ ಹಾಕಿದರೂ ಅಥವಾ ಪಂಜರಕ್ಕೆ ಹಾಕಿದರೂ ಹುಲಿಯೇ ಎಂದು ಅವರು ವ್ಯಾಖ್ಯಾನಿಸಿದರು.

ಕನ್ನಡ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣ ಗೌಡ ಕಾವೇರಿ ಹೋರಾಟದ ವೇಳೆ ಡಿಕೆಶಿ ತಮ್ಮ ಸ್ವಂತ ದುಡ್ಡಿನಿಂದ ರಕ್ಷಣಾ ವೇದಿಕೆ ಹೋರಾಟಗಾರರಿಗೆ ಜಾಮೀನು ಕೊಡಿಸಿದರು. ಅವರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಹೋರಾಟದಲ್ಲಿ ನಾರಾಯಣಗೌಡ ಪಾಲ್ಗೊಂಡಿದ್ದಾರೆ ಎಂದು ನಂಜಾವದೂತ ಸ್ವಾಮೀಜಿ ತಿಳಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News