ಎಲಿವೇಟೆಡ್ ಕಾರಿಡಾರ್ ಯೋಜನೆಯಲ್ಲಿ ಸಾವಿರಾರು ಕೋಟಿ ರೂ. ಭ್ರಷ್ಟಾಚಾರ: ಎನ್.ಆರ್.ರಮೇಶ್ ಆರೋಪ

Update: 2019-09-11 14:59 GMT

ಬೆಂಗಳೂರು, ಸೆ.11: ರಾಜಧಾನಿಯಲ್ಲಿ ಹೆಚ್ಚುತ್ತಿರುವ ವಾಹನ ಸಂಚಾರ ದಟ್ಟಣೆ ತಪ್ಪಿಸಲು ಸಮ್ಮಿಶ್ರ ಸರಕಾರ ಕೈಗೆತ್ತಿಕೊಂಡ ಎಲಿವೇಟೆಡ್ ಕಾರಿಡಾರ್ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಆರೋಪಿಸಿದ್ದಾರೆ.

ಬುಧವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಗರಕ್ಕೆ ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಮೂಲಕ ಆಗಮಿಸುವ ವಾಹನಗಳ ಸಂಚಾರಕ್ಕೆ ಆರು ಪಥದ, 87.87 ಕಿ.ಮೀ. ಉದ್ದದ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದ್ದು, 17 ಸಾವಿರ ಕೋಟಿ ರೂ.ಗೆ ವಿವರವಾದ ಹಣಕಾಸು ವರದಿ(ಡಿಎಫ್‌ಆರ್)ಗೂ ಅನುಮೋದನೆ ಪಡೆಯಲಾಗಿತ್ತು. ಆದರೆ, ಏಕಾಏಕಿ 26,960 ಕೋಟಿ ರೂ.ಗೆ ಏರಿಕೆ ಮಾಡಿದ್ದು, ಈ ಯೋಜನೆಯ ಅನುಷ್ಠಾನದ ಹೆಸರಿನಲ್ಲಿ ಸಾವಿರಾರು ಕೋಟಿ ರೂ. ಲೂಟಿ ಮಾಡಲಾಗಿದೆ ಎಂದು ಆರೋಪಿಸಿದರು.

ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆ, ಕಂಟೋನ್‌ಮೆಂಟ್, ಹೊಸೂರು ರಸ್ತೆ, ಸಿಲ್ಕ್ ಬೋರ್ಡ್ ಜಂಕ್ಷನ್ ಪ್ರದೇಶಗಳ ಹೊರವಲಯ ಹೆದ್ದಾರಿಗಳೊಂದಿಗೆ ಸಂಪರ್ಕ ಕಲ್ಪಿಸಲು 6,855 ಕೋಟಿ ರೂ. ವೆಚ್ಚದ ಒಂದನೇ ಹಂತ ಯೋಜನೆಗೆ ಮೂರು ಪ್ಯಾಕೇಜ್‌ಗಳಿಗೆ ಟೆಂಡರ್ ಆಹ್ವಾನಿಸಿ ಒಂದೇ ಕಂಪನಿಗೆ ಟೆಂಡರ್ ಆಗುವಂತೆ ಸಂಚು ನಡೆಸಲಾಗಿದೆ. ಇದರಿಂದ ಅರ್ಹ ಬಿಡ್‌ದಾರರಿಗೆ ಮೋಸವಾಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ನೀಡಲಾಗಿದೆ ಎಂದರು.

ರಾಜ್ಯ ಸರಕಾರ 87.87 ಕಿ.ಮೀ. ಉದ್ದದ ಎಲಿವೇಟೆಡ್ ಕಾರಿಡಾರ್ ನಿರ್ಮಾಣದ ಕ್ರಿಯಾಯೋಜನೆಯನ್ನು ಮತ್ತೊಮ್ಮೆ ತಯಾರಿಸಬೇಕು. 9,960 ಕೋಟಿ ರೂ. ಏರಿಕೆ ಮಾಡಿ ಅನುಮೋದನೆ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇನ್ನು, ಈ ಭ್ರಷ್ಟಾಚಾರ ಆರೋಪದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ, ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಜನೀಶ್ ಗೋಯೆಲ್, ಹಣಕಾಸು ಇಲಾಖೆಯ ಕಾರ್ಯದರ್ಶಿ ಪಿ.ಸಿ.ಜಾಫರ್ ಮೇಲೆ ಎಸಿಬಿ, ಲೋಕಾಯುಕ್ತ, ಬಿಎಂಟಿಎಫ್‌ನಲ್ಲಿ ವಂಚನೆ, ಅಧಿಕಾರ ದುರುಪಯೋಗ, ಭ್ರಷ್ಟಾಚಾರ, ಸಾರ್ವಜನಿಕರ ಹಣ ಲೂಟಿ ಸಂಚು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಹೇಳಿದರು.

ಕಾನೂನು ಬಾಹಿರ

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್) ಈ ಕಾಮಗಾರಿಯ ಹೊಣೆ ಹೊತ್ತಿದ್ದು, ಒಂದು ಬಾರಿ ಡಿಎಫ್‌ಆರ್‌ಗೆ ಅನುಮೋದನೆ ದೊರೆತ ನಂತರ ಯಾವುದೇ ಕಾರಣಕ್ಕೂ ಬದಲಾಯಿಸುವಂತಿಲ್ಲ. ಆದರೂ, 9,960 ಕೋಟಿ ರೂ. ಏರಿಕೆ ಮಾಡಿರುವುದು ಕಾನೂನು ಬಾಹಿರವಾಗಿದೆ.

-ಎನ್.ಆರ್.ರಮೇಶ್, ಬಿಜೆಪಿ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News