ಮಳೆ-ಪ್ರವಾಹ: ಜಿಲ್ಲಾಧಿಕಾರಿಗಳ ಜೊತೆ ಮುಖ್ಯಕಾರ್ಯದರ್ಶಿ ವಿಡಿಯೋ ಸಂವಾದ- ಆರ್.ಅಶೋಕ್

Update: 2019-09-11 15:03 GMT

ಬೆಂಗಳೂರು, ಸೆ.11: ರಾಜ್ಯದಲ್ಲಿ ಮಳೆ ಹಾಗೂ ಪ್ರವಾಹದಿಂದ ಅಪಾರ ಪ್ರಮಾಣದ ಹಾನಿಯಾಗಿರುವ ಹಿನ್ನೆಲೆಯಲ್ಲಿ ನಾಳೆ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಸಂವಾದ ನಡೆಸಲಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನೆಗಳು ಬಿದ್ದು ಹೋಗಿರುವ ಜಾಗದಲ್ಲಿ ಮನೆಗಳ ನಿರ್ಮಾಣ ಮಾಡಲಾಗುವುದು. ಮನೆಗಳ ನಿರ್ಮಾಣಕ್ಕಾಗಿ ತಕ್ಷಣವೇ 25 ಸಾವಿರ ರೂ.ಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಜಿಲ್ಲಾಧಿಕಾರಿಗಳ ಪಿಡಿ ಖಾತೆಗಳಲ್ಲಿ 380.44 ಕೋಟಿ ರೂ.ಇದೆ ಎಂದರು.

ನೆರೆ ಹಾಗೂ ಪ್ರವಾಹದಿಂದಾಗಿ ಸುಮಾರು 35 ಸಾವಿರ ಕೋಟಿ ರೂ.ನಷ್ಟವಾಗಿದೆ ಎಂದು ಅಂದಾಜು ವರದಿಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಲಾಗಿದೆ. ಕೇಂದ್ರದ ಅಧ್ಯಯನ ತಂಡ ಬಂದು ಎಲ್ಲ ಪರಿಶೀಲನೆ ಮಾಡಿ ಹೋಗಿದೆ. ಬೆಳಗಾವಿಯಲ್ಲಿ 2,0285 ಕುಟುಂಬಗಳಿಗೆ ತಲಾ 10 ಸಾವಿರ ರೂ.ಪರಿಹಾರ ನೀಡಲಾಗಿದೆ ಎಂದು ಅಶೋಕ್ ತಿಳಿಸಿದರು.

ದೂರುಗಳ ಬಂದ ಹಿನ್ನೆಲೆಯಲ್ಲಿ 1929 ಕುಟುಂಬಗಳಿಗೆ ಪರಿಹಾರ ನೀಡುವುದನ್ನು ತಡೆ ಹಿಡಿಯಲಾಗಿತ್ತು. ಇನ್ನೆರಡು ದಿನಗಳಲ್ಲಿ ಅವರಿಗೆ ಪರಿಹಾರ ನೀಡಲಾಗುವುದು. ಒಂದು ವೇಳೆ ಸುಳ್ಳು ಮಾಹಿತಿ ನೀಡಿ ಯಾರಾದರೂ ಪರಿಹಾರ ಪಡೆದುಕೊಂಡಿದ್ದರೆ ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಬೆಳಗಾವಿ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ಅಶೋಕ್ ತಿಳಿಸಿದರು.

64 ಸಿಸಿ ಪ್ರಕಾರ ನವೆಂಬರ್ ತಿಂಗಳೊಳಗೆ 10 ಸಾವಿರ ಜನರಿಗೆ ನೋಂದಣಿ ಪತ್ರ ನೀಡಲು ಉದ್ದೇಶಿಸಲಾಗಿದೆ. ಬೆಂಗಳೂರಿನಲ್ಲೇ 15,590 ಅರ್ಜಿಗಳು ಬಾಕಿಯಿವೆ. ಬೆಂಗಳೂರಿನಲ್ಲಿ ಸಮಾವೇಶ ಆಯೋಜಿಸಿ ನೋಂದಣಿ ಪತ್ರಗಳನ್ನು ವಿತರಿಸಲು ಉದ್ದೇಶಿಸಲಾಗಿದೆ. ಸರಳವಾಗಿ ನೋಂದಣಿ ಮಾಡಿಕೊಳ್ಳುವ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News