ಜಾಗತಿಕ ಅಗ್ರ 300 ವಿವಿ ಪಟ್ಟಿಯಿಂದ ಭಾರತ ಔಟ್

Update: 2019-09-12 03:49 GMT

ಹೊಸದಿಲ್ಲಿ, ಸೆ.12: ಕಳೆದ ಏಳು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಜಾಗತಿಕ 300 ಅಗ್ರ ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿ ಭಾರತದ ಯಾವುದೇ ವಿವಿ ಸ್ಥಾನ ಪಡೆಯಲು ವಿಫಲವಾಗಿದೆ. ಆದರೆ ಅಗ್ರ ವಿವಿಗಳ ಪೈಕಿ ಭಾರತದ 56 ಉನ್ನತ ಶಿಕ್ಷಣ ಸಂಸ್ಥೆಗಳು ಸ್ಥಾನ ಪಡೆದಿವೆ. 2018ರಲ್ಲಿ 49 ವಿವಿಗಳು ಈ ಪಟ್ಟಿಯಲ್ಲಿ ಸೇರಿದ್ದವು.

ಇದೇ ಮೊಟ್ಟಮೊದಲ ಬಾರಿಗೆ ಪಟ್ಟಿಯಲ್ಲಿ ಸೇರಿರುವ ರೋಪರ್ ಐಐಟಿ ಅತ್ಯಧಿಕ ಅಂಕಗಳನ್ನು ಪಡೆದು 350 ಅಗ್ರ ವಿವಿಗಳ ಪೈಕಿ ಸ್ಥಾನ ಪಡೆದಿದೆ. ಇದು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಜತೆಗೆ ದೇಶದ ಅಗ್ರಸ್ಥಾನ ಹಂಚಿಕೊಂಡಿದೆ. ಟೈಮ್ಸ್ ಹೈಯರ್ ಎಜ್ಯುಕೇಶನ್ (ಟಿಎಚ್‌ಇ) ವಿಶ್ವ ವಿವಿ ರ್ಯಾಂಕಿಂಗ್ 2020ರಲ್ಲಿ ಭಾರತದ ಆರು ವಿವಿಗಳು ಅಗ್ರ 500ರಲ್ಲಿ ಸ್ಥಾನ ಪಡೆದಿವೆ. ಕಳೆದ ವರ್ಷ ಐದು ವಿವಿಗಳು ಈ ಪಟ್ಟಿಯಲ್ಲಿದ್ದವು. ಒಟ್ಟಾರೆಯಾಗಿ ಆಕ್ಸ್‌ಫರ್ಡ್ ವಿವಿ ಸತತ ನಾಲ್ಕನೇ ವರ್ಷವೂ ಅಗ್ರಸ್ಥಾನ ಉಳಿಸಿಕೊಂಡಿದೆ.

92 ದೇಶಗಳ 1,300 ವಿವಿಗಳ ಪಟ್ಟಿಯಲ್ಲಿ ಭಾರತ ಅತಿಹೆಚ್ಚು ಪ್ರಾತಿನಿಧ್ಯ ಇರುವ ಐದನೇ ದೇಶವಾಗಿ ಹೊರಹೊಮ್ಮಿದೆ. ಇದೇ ಮೊದಲ ಬಾರಿಗೆ ಮೌಲ್ಯಮಾಪನಕ್ಕೆ ಒಳಪಟ್ಟ ಎಲ್ಲ 10 ಭಾರತೀಯ ವಿವಿಗಳು 1,300 ವಿವಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಕಳೆದ ವರ್ಷ 251-300ರ ಪಟ್ಟಿಯಲ್ಲಿದ್ದ ಬೆಂಗಳೂರಿನ ಐಐಎಸ್‌ಸಿ ಈ ಬಾರಿ 301-350ರ ಪಟ್ಟಿಗೆ ಕುಸಿಯಲು ಪ್ರಮುಖ ಕಾರಣವೆಂದರೆ, ಸಂಶೋಧನಾ ಪರಿಸರ ಸುಧಾರಣೆ, ಬೋಧನಾ ವಾತಾವರಣ ಮತ್ತು ಉದ್ಯಮ ಆದಾಯ ಕ್ಷೇತ್ರದಲ್ಲಿ ಅಂಕ ಪಡೆಯಲು ವಿಫಲವಾಗಿರುವುದು.

ಉಳಿದಂತೆ ಇಂಧೋರ್ ಐಐಟಿ, ಮುಂಬೈ ಐಐಟಿ, ದಿಲ್ಲಿ ಐಐಟಿ ಹಾಗೂ ಖರಗಪುರ ಐಐಟಿಗಳು 401-500ರ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಜಾಗತಿಕವಾಗಿ ಬ್ರಿಟನ್‌ನ ಆಕ್ಸ್‌ಫರ್ಡ್ ವಿವಿ ಒಂದನೇ ರ್ಯಾಂಕ್ ಉಳಿಸಿಕೊಂಡಿದೆ. ಕಳೆದ ವರ್ಷ 5ನೇ ಸ್ಥಾನದಲ್ಲಿದ್ದ ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಈ ಬಾರಿ 2ನೇ ಸ್ಥಾನಕ್ಕೆ ನೆಗೆದಿದೆ. ಕ್ಯಾಂಬ್ರಿಡ್ಜ್ ವಿವಿ 2ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಕುಸಿದಿದ್ದರೆ, ಸ್ಟಾನ್‌ಫೋರ್ಡ್ ವಿವಿ ಹಾಗೂ ಮೆಸೆಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ತಲಾ ಒಂದು ಸ್ಥಾನ ಇಳಿಕೆ ಕಂಡು ಕ್ರಮವಾಗಿ 4 ಮತ್ತು 5ನೇ ಸ್ಥಾನದಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News