ಜೆಡಿಎಸ್‌ನ್ನು ‘ಬಿ ಟೀಮ್’ ಎಂದು ಕರೆದರೆ ಇನ್ನು ಸಹಿಸಲಾಗದು: ದೇವೇಗೌಡ ಎಚ್ಚರಿಕೆ

Update: 2019-09-12 12:47 GMT

: ಮಾಜಿ ಪ್ರಧಾನಿ ದೇವೇಗೌಡ

ಉಪಚುನಾವಣೆಯಲ್ಲಿ ನಮ್ಮ ಶಕ್ತಿಯ ಸಮರ್ಥ ಬಳಕೆ: 

ಬೆಂಗಳೂರು, ಸೆ. 12: ತೆರವಾಗಿರುವ 17 ಕ್ಷೇತ್ರಗಳ ಉಪಚುನಾವಣೆಯಲ್ಲಿ ನಮ್ಮ ಶಕ್ತಿಯನ್ನೂ ಸಮರ್ಥವಾಗಿ ಬಳಸಿಕೊಳ್ಳಲಾಗುವುದು ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಇಂದಿಲ್ಲಿ ತಿಳಿಸಿದ್ದಾರೆ.

ಗುರುವಾರ ಇಲ್ಲಿನ ಜೆಪಿ ಭವನದಲ್ಲಿ ಜೆಡಿಎಸ್ ಅಧಿಕೃತ ವೆಬ್‌ಸೈಟ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, 17 ಕ್ಷೇತ್ರಗಳಲ್ಲೂ ನಾವು ಸ್ಪರ್ಧಿಸಬೇಕೆಂದು ಏನಿಲ್ಲ. ಹಿಂದೆ ಕಾಂಗ್ರೆಸ್‌ಗೆ ಗುಂಡ್ಲುಪೇಟೆ, ನಂಜನಗೂಡು ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದ್ದೆವು. ಜೆಡಿಎಸ್‌ನವರನ್ನೇ ಅಭ್ಯರ್ಥಿಗಳನ್ನಾಗಿ ಮಾಡಿ ಗೆಲ್ಲಿಸಿಕೊಂಡಿದ್ದರು ಎಂದು ಸ್ಮರಿಸಿದರು.

ಅವರೇ ನಿರ್ಧರಿಸಬೇಕು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರೆಸುವ ಬಗ್ಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಏನು ನಿರ್ಧಾರ ಕೈಗೊಳ್ಳುವರೋ ಗೊತ್ತಿಲ್ಲ. ಅವರ ಜತೆ ಚರ್ಚಿಸಿದ ಬಳಿಕ ಮೈತ್ರಿ ಮುಂದುವರೆಸುವ ಬಗ್ಗೆ ನಿರ್ಧಾರ ಮಾಡುತ್ತೇನೆ ಎಂದು ದೇವೇಗೌಡ ಸ್ಪಷ್ಟಣೆ ನೀಡಿದರು.

ಮೈತ್ರಿ ಬಗ್ಗೆ ಸ್ಥಳೀಯ ಕಾಂಗ್ರೆಸ್ ಮುಖಂಡರ ಭಾವನೆ ಏನು ಎಂಬುದು ಗೊತ್ತಿಲ್ಲ. ಅವರ ಪಕ್ಷದ ನಾಯಕರು ಒಂದು ತೀರ್ಮಾನಕ್ಕೆ ಬಂದರೆ ಅದಕ್ಕೆ ನಮ್ಮ ಸಹಮತ ಇರುತ್ತದೆ ಎಂದ ಅವರು, ಇನ್ನು ಮುಂದೆ ನಮ್ಮ ಪಕ್ಷವನ್ನು ‘ಬಿ ಟೀಮ್’ ಎಂದು ಕರೆದರೆ ಸಹಿಸುವುದಿಲ್ಲ. ಕಳೆದ ಚುನಾವಣೆಯಲ್ಲಿ ಏನೇ ಪ್ರಯತ್ನಪಟ್ಟರು ಅದು ಯಶಸ್ವಿಯಾಗಲಿಲ್ಲ ಟೀಕಿಸಿದರು.

ಪ್ರಜ್ವಲ್ ಸ್ಪರ್ಧೆ ಇಲ್ಲ:

ಯುವಕನೊಬ್ಬನನ್ನು ಸಂಸತ್‌ಗೆ ಕಳುಹಿಸಿದ್ದು, ನಾನು ಇಲ್ಲೆ ಇದ್ದು ಪಕ್ಷ ಸಂಘಟನೆ ಮಾಡುತ್ತೇನೆ. ಉಪಚುನಾವಣೆಗೆ ಪ್ರಜ್ವಲ್ ರೇವಣ್ಣ ಸ್ಪರ್ಧಿಸುವುದಿಲ್ಲ ಎಂದು ದೇವೇಗೌಡ ಸ್ಪಷ್ಟಪಡಿಸಿದರು. ನಾನಿಂದು ಹುಣಸೂರಿಗೆ ತೆರಳುತ್ತಿದ್ದೇನೆ. ಈಗಾಗಲೇ ನನ್ನ ಮನೆಯಲ್ಲಿ ಹುಣಸೂರಿನ ಹಳೆ ಸ್ನೇಹಿತರ ಜೊತೆ ಸಭೆ ಮಾಡಿದ್ದೇನೆ. ಅವರೆಲ್ಲರೂ ಒಂದು ಮಾತು ಹೇಳಿದ್ದಾರೆ. ಪ್ರತಿಬಾರಿ ಹೊರಗಿನ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ. ನಾವೂ ಅವರನ್ನು ಗೆಲ್ಲಿಸುತ್ತೇವೆ. ನಂತರ ಅವರು ಪಕ್ಷಕ್ಕೆ ದ್ರೋಹ ಮಾಡಿ ಹೋಗುತ್ತಾರೆ ಎಂದು ಅಲ್ಲಿನ ಕಾರ್ಯಕರ್ತರು ಹೇಳಿದ್ದಾರೆ.

ಕೆಲವರು ಪ್ರಜ್ವಲ್ ನಿಲ್ಲಿಸಿ ನನ್ನನ್ನು ಪಾರ್ಲಿಮೆಂಟ್‌ಗೆ ಹೋಗುವಂತೆ ಸಲಹೆ ನೀಡಿದ್ದಾರೆ. ಅದಕ್ಕೆ ನಾನು ಅವರಿಗೆ ಹೇಳಿದ್ದೇನೆ, ಒಬ್ಬ ಯುವಕ ಸಂಸತ್‌ಗೆ ಹೋಗಿದ್ದಾನೆ. ಹೀಗಾಗಿ ನಾನು ಪಕ್ಷ ಸಂಘಟನೆ ಮಾಡುವೆ. ಸ್ಥಳೀಯರೆ ಸಭೆ ನಡೆಸಿ ಸಮರ್ಥ ಅಭ್ಯರ್ಥಿಯ ಹೆಸರನ್ನು ನೀಡಲಿದ್ದಾರೆ ಎಂದರು.

ಯಾರೂ ಸ್ಪರ್ಧಿಸಲ್ಲ: ಉಪಚುನಾವಣೆ, ಸಾರ್ವತ್ರಿಕ ಚುನಾವಣೆಯಾಗಲಿ, ಕ್ಷೇತ್ರದಲ್ಲೇ ಯಾರಾದರೊಬ್ಬರನ್ನು ಅಭ್ಯರ್ಥಿಯಾಗಿ ಮಾಡುತ್ತೇವೆ. ಈಗಾಗಲೇ ಕುಮಾರಸ್ವಾಮಿ ಕೆ.ಆರ್.ಪೇಟೆ ಕ್ಷೇತ್ರಕ್ಕೆ ಹೋಗಿಬಂದಿದ್ದಾರೆ. ಸ್ಥಳೀಯರು ಸೂಚಿಸುವ ವ್ಯಕ್ತಿಯನ್ನೆ ಅಲ್ಲಿ ಅಭ್ಯರ್ಥಿಯನ್ನಾಗಿ ಮಾಡುತ್ತೇವೆ ಎಂದು ತಿಳಿಸಿದರು.

ಪ್ರತಿಭಟನೆ ಬೆಂಬಲಿಸಿದ್ದೆವು: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ಖಂಡಿಸಿ ಒಕ್ಕಲಿಗರ ಸಂಘಟನೆಗಳ ಒಕ್ಕೂಟಗಳು ನಡೆಸಿದ ಪ್ರತಿಭಟನೆಗೆ ನಾವು ಬೆಂಬಲ ನೀಡಿದ್ದೆವು. ಡಿ.ಕೆ.ಶಿವಕುಮಾರ್‌ಗೆ ನಮ್ಮ ಬೆಂಬಲವಿದೆ ಎಂದು ಅವರು ತಿಳಿಸಿದರು.

ಕುಮಾರಸ್ವಾಮಿ ಅವರು ಈಗಾಗಲೇ ಡಿಕೆಶಿ ತಾಯಿಯನ್ನು ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ. ನಿನ್ನೆ ನಡೆದ ಪ್ರತಿಭಟನೆಯಲ್ಲಿ ನಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು ಎಂದು ದೇವೇಗೌಡ ಇದೇ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದರು.

ಮಹಾಲಕ್ಷ್ಮಿ ಲೇಔಟ್ ಉಪಚುನಾವಣೆಗೆ ಈಗಾಗಲೇ 5 ಸುತ್ತಿನ ಮಾತುಕತೆ ನಡೆಸಿದ್ದು, ಅನರ್ಹ ಶಾಸಕರು ನಮ್ಮ ಕಾರ್ಯಕರ್ತರಿಗೆ ತೊಂದರೆ ಕೊಡುತ್ತಿದ್ದಾರೆಂದು ಆರೋಪಿಸಿದ ಅವರು, ಭಯ ಹುಟ್ಟಿಸುತ್ತೇನೆಂದು ಅವರೇನಾದರೂ ಭಾವಿಸಿದ್ದರೆ ಅದು ಆಗುವುದಿಲ್ಲ. ಸರಕಾರ ನಮ್ಮ ಕಾರ್ಯಕರ್ತರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಕೋರಿದರು.

ನಿಮಗೆ ಒಳ್ಳೆಯ ಔತಣ ನೀಡುವೆ..

‘ಜಿ.ಟಿ.ದೇವೇಗೌಡ ಅವರ ಬಗ್ಗೆ ನಾನೂ ಏನೂ ಮಾತನಾಡುವುದಿಲ್ಲ. ನಮ್ಮ ಪಕ್ಷಕ್ಕೆ ಸ್ವಾಭಿಮಾನ ಇದೆ, ಶಕ್ತಿ ಇದೆ, ದೈವ ಶಕ್ತಿ ಇದೆ. ನಿಮ್ಮ ಕಣ್ಣಮುಂದೆ ಈ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡುತ್ತೇನೆ. ಅಲ್ಲಿಯವರೆಗೂ ನನಗೆ ದೇವರು ಆಯಸ್ಸು ಕೊಟ್ಟಿದ್ದಾನೆ. ನೀವು ಇನ್ನು ಚಿಕ್ಕವರು. ನನಗೀಗ 86 ವರ್ಷ. ನಿಮ್ಮ ಎದುರು ನಮ್ಮ ಪಕ್ಷ ಒಂದು ದಿನ ಅಧಿಕಾರಕ್ಕೆ ಬರುತ್ತೆ. ಆಗ ನಿಮ್ಮನ್ನು ಕರೆದು ಒಳ್ಳೆಯ ಔತಣ ಏರ್ಪಡಿಸುತ್ತೇನೆ’

-ಎಚ್.ಡಿ.ದೇವೇಗೌಡ ಜೆಡಿಎಸ್ ವರಿಷ್ಠ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News