ಪತ್ರಕರ್ತರು ಉದ್ಯಮಿಗಳಾಗಲು ಅವಕಾಶ-ಸವಾಲು ಎರಡೂ ಇವೆ: ಸಚಿವ ಸುರೇಶ್‌ ಕುಮಾರ್

Update: 2019-09-12 17:17 GMT

ಬೆಂಗಳೂರು, ಸೆ.12: ಪತ್ರಕರ್ತರು ಉದ್ಯಮಿಗಳಾಗಿ ರೂಪಗೊಳ್ಳಲು ಉತ್ತಮ ಅವಕಾಶ ಹಾಗೂ ಸವಾಲುಗಳೆರಡೂ ಇವೆ. ಈ ಬಗ್ಗೆ ಕೂಲಂಕಷವಾಗಿ ಚರ್ಚಿಸುವ ಮೂಲಕ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಗುರುವಾರ ಕರ್ನಾಟಕ ಪತ್ರಕರ್ತರ ಸಹಕಾರ ಸಂಘ ಮತ್ತು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ನಗರದ ಎಫ್‌ಕೆಸಿಸಿಐನ ಸರ್‌ಎಂವಿ ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಕರ್ತರು ಮತ್ತು ಉದ್ಯಮ ಕುರಿತ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬದಲಾದ ಸನ್ನಿವೇಶದಲ್ಲಿ ಪತ್ರಕರ್ತರು ಕಾರ್ಯಒತ್ತಡ, ಕೆಲಸದ ಅನಿಶ್ಚಿತತೆ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇವೆಲ್ಲವುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಗಂಭೀರವಾದ ಚರ್ಚಿಯ ಅಗತ್ಯವಿದೆ. ಹಾಗೂ ಪತ್ರಕರ್ತರು ಸ್ವಾವಲಂಬಿ ಜೀವನಕ್ಕೆ ಸರಕಾರದಿಂದ ಯಾವ ಸಹಾಯಬೇಕೆಂಬುದನ್ನು ನಿಖರವಾಗಿ ತಿಳಿದರೆ, ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಮಗ್ನರಾಗಬಹುದೆಂದು ಅವರು ತಿಳಿಸಿದರು.

ಇಲ್ಲಿಯವರೆಗೂ ಪತ್ರಕರ್ತರೆಂದರೆ ನಿರ್ಭೀತರಾಗಿ, ನಿಸ್ವಾರ್ಥವಾಗಿ ಸತ್ಯಾಂಶವನ್ನು ಬಯಲಿಗೆಳೆಯವವರು ಎಂದೇ ಭಾವಿಸಲಾಗಿದೆ. ಆದರೆ, ಪತ್ರಕರ್ತರು ಉದ್ಯಮಿಗಳಾಗಲು ಚಿಂತನೆ ನಡೆಸಲು ಪ್ರಾರಂಭಿಸುವ ತಕ್ಷಣದಿಂದಲೇ ಲಾಭ-ನಷ್ಟದ ಲೆಕ್ಕಾಚಾರ ಪ್ರಾರಂಭವಾಗುತ್ತದೆ. ಪ್ರತಿ ಸುದ್ದಿಯನ್ನು ಉತ್ಪನ್ನವಾಗಿಯೇ ನೋಡುವಂತಹ ಮನಸ್ಥಿತಿ ರೂಪಿತಗೊಳ್ಳುತ್ತದೆ. ಈ ಬದಲಾವಣೆಯನ್ನು ಹೇಗೆ ನೋಡಬೇಕೆಂಬುದನ್ನು ವಿಶ್ಲೇಷಿಸಬೇಕಾದ ಅಗತ್ಯವಿದೆ ಎಂಂದು ಅವರು ಹೇಳಿದರು.

ಮಾಜಿ ಎಫ್‌ಕೆಸಿಸಿ ಅಧ್ಯಕ್ಷ ತಲ್ಲಂ ವೆಂಕಟೇಶ್ ಮಾತನಾಡಿ, ಮಾಧ್ಯಮವು ಸೇವಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಈ ಕ್ಷೇತ್ರದಲ್ಲಿ ಶೇ.60ರಷ್ಟು ಉದ್ಯೋಗವಕಾಶಗಳಿವೆ. ಇದನ್ನು ಸದುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಪತ್ರಕರ್ತರು ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕೆಂದು ಆಶಿಸಿದರು.

ಉತ್ತಮ ಸಂವಹನ ಹಾಗೂ ಸಮಯ ನಿರ್ವಹಣೆಯನ್ನು ಹಾಗೂ ತಮ್ಮ ಕೆಲಸದಲ್ಲಿ ಪರಿಣತಿಯನ್ನು ಪಡೆಯುವವರು ಉದ್ಯಮಿಗಳಾಗಿ ರೂಪಗೊಳ್ಳಲು ಹೆಚ್ಚಿನ ಅವಕಾಶ ಇರುತ್ತದೆ. ಹೀಗಾಗಿ ಪತ್ರಕರ್ತರು ತಮ್ಮ ಮಾಧ್ಯಮ ಕ್ಷೇತ್ರದಲ್ಲಿ ಬಹುಮುಖಿ ಪ್ರೌಢಿಮೆಯನ್ನು ಬೆಳೆಸಿಕೊಳ್ಳುವ ಮೂಲಕ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬಹುದೆಂದು ಅವರು ಹೇಳಿದರು.

ಎಫ್‌ಕೆಸಿಸಿ ಅಧ್ಯಕ್ಷ ಜನಾರ್ದನ್ ಮಾತನಾಡಿ, ಪತ್ರಕರ್ತರು ಉದ್ಯಮಿಗಳಾಗಿ ಪರಿವರ್ತನೆಗೊಳ್ಳಲು ಉತ್ತಮ ಅವಕಾಶವಿದೆ. ತಮ್ಮ ಬರವಣಿಗೆ ಹಾಗೂ ಕ್ರಿಯಾಶೀಲ ಚಿಂತನೆಗಳು ಸಿನೆಮಾ, ಪುಟ ವಿನ್ಯಾಸ, ಸಾಕ್ಷಚಿತ್ರ ನಿರ್ಮಾಣ, ಸಂಕಲನ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಕಾರ್ಯಾಗಾರದಲ್ಲಿ ಎಂಎಸ್‌ಎನಿ ಹೆಚ್ಚುವರಿ ನಿರ್ದೇಶಕ ಹೊನ್ನಮಾನೆ, ಕರ್ನಾಟಕ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಆರ್.ರಾಜು ಮಾತನಾಡಿದರು. ಈ ವೇಳೆ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಎಂ.ಎಸ್.ರಾಜೇಂದ್ರ ಕುಮಾರ್, ಉಪಾಧ್ಯಕ್ಷ ಲಕ್ಷ್ಮಿನಾರಾಯಣ, ಖಜಾಂಚಿ ಯತಿರಾಜು, ನಿರ್ದೇಶಕ ರಾಘವೇಂದ್ರ ಮತ್ತಿತರರಿದ್ದರು.

ನಷ್ಟಕ್ಕೆ ಜಿಎಸ್‌ಟಿಯೇ ಕಾರಣ

ಇವತ್ತು ರಿಯಲ್‌ಎಸ್ಟೇಟ್ ಉದ್ಯಮ, ವಾಹನ ತಯಾರಿಕಾ ಕಂಪೆನಿಗಳು ಸೇರಿದಂತೆ ವಿವಿಧ ಉದ್ಯಮ ವಲಯಗಳು ನಷ್ಟ ಅನುಭವಿಸಲು ಜಿಎಸ್‌ಟಿ ಹೆಚ್ಚಳವೇ ಕಾರಣವಾಗಿದೆ. ಆರ್ಥಿಕ ಶಿಸ್ತು ಹಾಗೂ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಜಿಎಸ್‌ಟಿ ಉತ್ತಮವಾಗಿದೆ. ಹೀಗಾಗಿಯೇ ಜಿಎಸ್‌ಟಿ ಪರವಾಗಿ ಸಾವಿರಾರು ವಿಚಾರ ಸಂಕಿರಣಗಳನ್ನು ಆಯೋಜಿಸಿ ಜಾಗೃತಿ ಮೂಡಿಸಿದ್ದೇವೆ. ಆದರೆ, ಜಿಎಸ್‌ಟಿ ವಿಪರೀತವಾಗಿ ಹೆಚ್ಚಳ ಮಾಡಿರುವುದು ಸರಿಯಲ್ಲ. ಕೇಂದ್ರ ಸರಕಾರ ಕೂಡಲೇ ಜಿಎಸ್‌ಟಿ ಪ್ರಮಾಣವನ್ನು ತಗ್ಗಿಸುವಂತಹ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

-ಜನಾರ್ದನ, ಅಧ್ಯಕ್ಷ, ಎಫ್‌ಕೆಸಿಸಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News