ನೆರೆ ಸಂತ್ರಸ್ತರಿಗೆ ಜಮೀಯತ್ ಉಲಮಾದಿಂದ ಅಗತ್ಯ ನೆರವು: ಮುಹೀಬ್ಬುಲ್ಲಾ ಖಾನ್ ಅಮಿರಿ

Update: 2019-09-12 12:57 GMT

ಬೆಂಗಳೂರು, ಸೆ.12: ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಸುರಿದ ಭಾರಿ ಮಳೆ ಹಾಗೂ ಪ್ರವಾಹ ಪರಿಸ್ಥಿತಿಯಿಂದಾಗಿ ಲಕ್ಷಾಂತರ ಜನ ಬಾಧಿತರಾಗಿದ್ದಾರೆ. ಅವರಿಗೆ ಅಗತ್ಯ ನೆರವು ಒದಗಿಸಲು ಜಮೀಯತ್ ಉಲಮಾ ರಾಜ್ಯ ಘಟಕ ಪ್ರಯತ್ನಿಸುತ್ತಿದೆ ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮುಹೀಬ್ಬುಲ್ಲಾ ಖಾನ್ ಅಮಿರಿ ತಿಳಿಸಿದರು.

ಗುರುವಾರ ಶಿವಾಜಿನಗರದಲ್ಲಿರುವ ಜಮೀಯತ್ ಉಲಮಾ ಕರ್ನಾಟಕ ಸಂಘಟನೆಯ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕು ಒಂದರಲ್ಲೇ ಸುಮಾರು 4500 ಮನೆಗಳು ನಾಶವಾಗಿವೆ. ನಮ್ಮ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಮೌಲಾನ ಸಯ್ಯದ್ ಅರ್ಶದ್ ಮದನಿ ಸೂಚನೆಯನ್ನು ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.

ನೆರೆ ಸಂತ್ರಸ್ತರಿಗೆ ರೇಷನ್, ಬಟ್ಟೆಗಳು, ಕಂಬಳಿಗಳು, ಪಾತ್ರೆಗಳು ಹಾಗೂ ಔಷಧಿಗಳು ಸೇರಿದಂತೆ 42 ಲಕ್ಷ ರೂ.ಗಳ ವಸ್ತುಗಳನ್ನು ಒದಗಿಸಲಾಗಿದೆ. ಮನೆಗಳನ್ನು ಕಳೆದುಕೊಂಡಿರುವವರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಅಲ್ಲಿ ಮನೆಗಳ ನಿರ್ಮಾಣ ಹಾಗೂ ದುರಸ್ತಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ಹೇಳಿದರು.

ಹಾಸನ, ಸಕಲೇಶಪುರದಲ್ಲಿ 12-13 ಲಕ್ಷ ರೂ.ಗಳನ್ನು ಖರ್ಚು ಮಾಡಲಾಗಿದೆ. ಹಾಸನದಲ್ಲಿ 6 ಮನೆಗಳನ್ನು ನಿರ್ಮಿಸಲು ಪ್ರಯತ್ನ ಮಾಡುತ್ತಿದ್ದೇವೆ. ಗದಗದಲ್ಲಿ 13-14 ಲಕ್ಷ ರೂ.ಗಳ ಪರಿಹಾರ ಕಾರ್ಯ ಕೈಗೊಳ್ಳಲಾಗಿದೆ ಎಂದು ಮುಹೀಬ್ಬುಲ್ಲಾ ಖಾನ್ ಅಮಿರಿ ತಿಳಿಸಿದರು. 2018ರಲ್ಲಿ ಕೇರಳದಲ್ಲಿ ಭೀಕರ ಜಲಪ್ರಳಯವಾಗಿತ್ತು. ಅಲ್ಲಿನ ಜಮೀಯತ್ ಉಲಮಾ ಹಿಂದ್‌ನ ರಾಜ್ಯ ಘಟಕದ ವತಿಯಿಂದ 60 ಹೊಸ ಮನೆಗಳು ಹಾಗೂ 114 ಮನೆಗಳ ದುರಸ್ತಿ ಕಾರ್ಯವನ್ನು ಕೇವಲ 7 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಿ, ಫಲಾನುಭವಿಗಳಿಗೆ ಮನೆಗಳ ಕೀಲಿ ಕೈಗಳನ್ನು ಹಸ್ತಾಂತರಿಸಲಾಗಿತ್ತು ಎಂದು ಅವರು ಹೇಳಿದರು.

ಅಲ್ಲದೇ, ಇದೇ ತಿಂಗಳ 8ರಂದು ಹೊಸದಾಗಿ ಎಂಟು ಮನೆಗಳನ್ನು ವಯನಾಡ್ ಸೇರಿದಂತೆ ಇತರೆ ಪ್ರದೇಶಗಳಲ್ಲಿ ನಿರ್ಮಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಯಿತು. ಕೇರಳದ ಜಲಪ್ರಳಯದ ವೇಳೆ ಸುಮಾರು 3.86 ಕೋಟಿ ರೂ.ಖರ್ಚು ಮಾಡಿ ಸಂತ್ರಸ್ತರಿಗೆ ನೆರವು ಒದಗಿಸಲಾಗಿತ್ತು ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಮೀಯತ್ ಉಲಮಾ ರಾಜ್ಯಾಧ್ಯಕ್ಷ ಮೌಲಾನ ಅಬ್ದುಲ್ ರಹೀಮ್ ರಶೀದಿ, ರಾಜ್ಯ ಕಾರ್ಯಕಾರಣಿ ಸದಸ್ಯ ಹಾಫಿಝ್ ಎಲ್.ಮುಹಮ್ಮದ್ ಫಾರೂಕ್ ಹಾಗೂ ಬೆಂಗಳೂರು ಜಿಲ್ಲಾಧ್ಯಕ್ಷ ಮೌಲಾನ ಸಲಾಹುದ್ದೀನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News