ಸಂವಿಧಾನ-ಪ್ರಜಾಪ್ರಭುತ್ವದ ಮೌಲ್ಯಗಳು ನಾಶವಾಗುತ್ತಿವೆ: ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರಾಧ್ಯಕ್ಷ ಸಾದತುಲ್ಲಾ ಹುಸೈನಿ

Update: 2019-09-12 17:19 GMT

ಬೆಂಗಳೂರು, ಸೆ.12: ನಮ್ಮ ದೇಶವು ಒಂದು ಕಡೆ ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ವಿವಿಧ ರಂಗಗಳಲ್ಲಿ ಯಶಸ್ಸನ್ನು ದಾಖಲಿಸುತ್ತಿದ್ದೇವೆ. ಅದೇ ಮತ್ತೊಂದೆಡೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅವನತಿಯ ಅಂಚಿಗೆ ತಳ್ಳುತ್ತಿರುವುದನ್ನು ಕಾಣುತ್ತಿದ್ದೇವೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಅಧ್ಯಕ್ಷ ಸಯ್ಯದ್ ಸಾದತುಲ್ಲಾ ಹುಸೈನಿ ತಿಳಿಸಿದರು.

ಗುರುವಾರ ನಗರದ ದಾರುಸ್ಸಲಾಮ್ ಸಭಾಂಗಣದಲ್ಲಿ ಪ್ರಮುಖ ಮುಸ್ಲಿಂ ಸಂಘಟನೆಗಳ ಪ್ರತಿನಿಧಿಗಳ ಜೊತೆ ನಡೆದ ಸಮಾಲೋಚನಾ ಸಭೆಯ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ತ್ರಿವಳಿ ತಲಾಕ್ ನಿಷೇಧ ಕಾನೂನು, ಯುಎಪಿಎ ವಿಶೇಷಾಧಿಕಾರ ಕಾಯ್ದೆ, ಸಂವಿಧಾನದ 370ನೇ ವಿಧಿ ರದ್ದು ಸೇರಿದಂತೆ ಇನ್ನಿತರ ವಿಧೇಯಕಗಳನ್ನು ಸಂಸತ್ತಿನಲ್ಲಿ ಸಮರ್ಪಕವಾಗಿ ಚರ್ಚಿಸದೆ ಅಂಗೀಕರಿಸಿರುವುದನ್ನು ನೋಡಿದರೆ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸುವುದು ಹೇಗೆ ಎಂಬ ಚಿಂತನೆ ಕಾಡುತ್ತಿದೆ ಎಂದು ಅವರು ಹೇಳಿದರು.

ಸಂವಿಧಾನದ ವಿಧಿ 370 ರದ್ದುಗೊಳಿಸುತ್ತಿರುವಾಗ ಇಡೀ ಕಾಶ್ಮೀರವನ್ನು ಕತ್ತಲೆಯಲ್ಲಿಟ್ಟು, ರಾಜಕೀಯ ನೇತಾರರನ್ನು ಗೃಹ ಬಂಧನದಲ್ಲಿರಿಸಿ, ಯಾರು ಯಾರೊಂದಿಗೂ ಸಂಪರ್ಕ ಸಾಧಿಸದಂತೆ ಕಡಿವಾಣ ಹಾಕಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯ ಲಕ್ಷಣವಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಗುಂಪು ಹತ್ಯೆಗಳ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ. ಯಾವುದೇ ನಾಗರಿಕ ಸಮಾಜ ಇಂತಹ ಬೆಳವಣಿಗೆಯನ್ನು ಒಪ್ಪುವುದಿಲ್ಲ. ಆದುದರಿಂದ, ಕೇಂದ್ರ ಸರಕಾರ ಗುಂಪು ಹತ್ಯೆಗಳಿಗೆ ಕಡಿವಾಣ ಹಾಕಲು ಸಮಗ್ರವಾದ ಕಾನೂನು ಜಾರಿಗೆ ತರಬೇಕು. ಇಂತಹ ಪ್ರಕರಣದ ಆರೋಪಿಗಳಿಗೆ ಕಾನೂನಿನ ಚೌಕಟ್ಟಿನಲ್ಲಿ ಕಠಿಣವಾದ ಶಿಕ್ಷೆಕೊಡಿಸಬೇಕು ಎಂದು ಸಾದತುಲ್ಲಾ ಹುಸೈನಿ ಆಗ್ರಹಿಸಿದರು.

ದೇಶದ ಆರ್ಥಿಕತೆ ಇಂದು ಗಂಭೀರ ಪರಿಸ್ಥಿತಿ ಎದುರಿಸುತ್ತಿದೆ. ಜಿಡಿಪಿ ಕುಸಿತ, ನಿರುದ್ಯೋಗ ಏರಿಕೆ, ಉತ್ಪಾದನೆ ಕಡಿತ, ರೈತರನ್ನು ನಿರ್ಲಕ್ಷಿಸಿ ಕಾರ್ಪೋರೇಟ್ ಸಂಸ್ಥೆಗಳಿಗೆ ಬೆಂಬಲ ನೀಡಲಾಗುತ್ತಿದೆ. ಆರ್‌ಬಿಐನ ದುರ್ಬಳಕೆ ಇದೆಲ್ಲವೂ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು.

ನ್ಯಾಯಾಂಗ, ಸಿಬಿಐ, ಜಾರಿ ನಿರ್ದೇಶನಾಲಯ, ಆರ್‌ಬಿಐ, ಚುನಾವಣಾ ಆಯೋಗ, ಲೋಕಪಾಲ್, ಸಿವಿಸಿ ಮುಂತಾದ ಸಾಂವಿಧಾನಿಕ ಹಾಗೂ ಸ್ವಾಯತ್ತ ಸಂಸ್ಥೆಗಳ ಸ್ವಾತಂತ್ರಕ್ಕೆ ಧಕ್ಕೆ ತರಬಾರದು. ಸಮಾಜದ ಎಲ್ಲ ವರ್ಗಗಗಳಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸೌಹಾರ್ದತೆಯ ವಾತಾವರಣ ನಿರ್ಮಾಣ ಮಾಡುವ ಪ್ರಯತ್ನಗಳು ನಡೆಯಬೇಕು ಎಂದು ಸಾದತುಲ್ಲಾ ಹುಸೈನಿ ಹೇಳಿದರು.

ದೇಶದ ಬಹುತ್ವ ಹಾಗೂ ವೈವಿದ್ಯತೆಯಲ್ಲಿ ಏಕತೆಯ ತತ್ವಗಳನ್ನು ಗುರುತಿಸಿ ಗೌರವಿಸಬೇಕು. ಕೋಮುವಾದಿ, ಭೌತಿಕವಾದಿ ಹಾಗೂ ಪ್ರತಿಗಾಮಿ ಕುತಂತ್ರಗಳಿಗೆ ಬಲಿಯಾಗಬಾರದು. ಕೋಮುಸೌಹಾರ್ದತೆಗಾಗಿ ಎಲ್ಲರೂ ಸಂಘಟಿತರಾಗಿ ಕೆಲಸ ಮಾಡಬೇಕು. ಮಾನವೀಯತೆ, ವಿಶ್ವ ಭ್ರಾತೃತ್ವ, ಶಾಂತಿ, ನ್ಯಾಯದ ಸಂಬಂಧಗಳನ್ನು ಗಟ್ಟಿಗೊಳಿಸಬೇಕು.

ಪತ್ರಿಕಾಗೋಷ್ಠಿಯಲ್ಲಿ ಜಮಾತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಡಾ.ಬೆಳಗಾಮಿ ಮುಹಮ್ಮದ್ ಸಾದ್, ಮುಸ್ಲಿಮ್ ಮುತ್ತಹಿದ ಮಹಝ್ ರಾಜ್ಯ ಸಂಚಾಲಕ ಮಸೂದ್ ಅಬ್ದುಲ್ ಖಾದಿರ್, ಮಜ್ಲಿಸುಲ್ ಉಲಮಾ ರಾಜ್ಯ ಸಂಚಾಲಕ ಮೌಲಾನ ವಹೀದುದ್ದೀನ್, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉಪಾಧ್ಯಕ್ಷ ಮುಖಂಡ ಅಕ್ಬರ್ ಅಲಿ, ಮುಖಂಡ ಲಯೀಖ್ ಉಲ್ಲಾ ಖಾನ್ ಮನ್ಸೂರಿ ಉಪಸ್ಥಿತರಿದ್ದರು.

ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮುಸ್ಲಿಂ ಸಂಘಟನೆಗಳು ‘ಸಾಮಾನ್ಯ ಕನಿಷ್ಠ ಕಾರ್ಯಕ್ರಮ’ ತತ್ವದಡಿ ಪರಸ್ಪರ ಒಂದಾಗಬೇಕು. ಶಾಂತಿ ಬಯಸುವ ಹಾಗೂ ನ್ಯಾಯಪರ ಆಲೋಚನೆ ಮಾಡುವ ವ್ಯಕ್ತಿಗಳು, ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಬಲಿಷ್ಠ ಸಮಾಜ ಕಟ್ಟುವ ಅವಶ್ಯಕತೆಯಿದೆ. ನಿರಾಶೆ ಮತ್ತು ಹತಾಶೆಯಿಂದ ಹೊರಬಂದು ತಮ್ಮ ಹಕ್ಕುಗಳು ಹಾಗೂ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಪ್ರಗತಿಗಾಗಿ ರಚನಾತ್ಮಕ ಪ್ರಜಾತಾಂತ್ರಿಕ ಪ್ರಯತ್ನಗಳಲ್ಲಿ ತೊಡಗಿಸಿಕೊಳ್ಳುವಂತೆ ಮುಸ್ಲಿಂ ಯುವಕರಿಗೆ ಮಾರ್ಗದರ್ಶನ ಮಾಡಬೇಕಿದೆ.

-ಸಯ್ಯದ್ ಸಾದತುಲ್ಲಾ ಹುಸೈನಿ, ರಾಷ್ಟ್ರೀಯ ಅಧ್ಯಕ್ಷ, ಜಮಾಅತೆ ಇಸ್ಲಾಮಿ ಹಿಂದ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News