ಐಎಂಎ ವಂಚನೆ ಪ್ರಕರಣ: ಮನ್ಸೂರ್ ಖಾನ್ ಸೇರಿ 8 ಮಂದಿ ಸಿಬಿಐ ವಶಕ್ಕೆ

Update: 2019-09-12 14:23 GMT

ಬೆಂಗಳೂರು, ಸೆ.12: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಮನ್ಸೂರ್ ಖಾನ್ ಸೇರಿದಂತೆ ಎಂಟು ಆರೋಪಿಗಳನ್ನು 5 ದಿನಗಳ ಕಾಲ ಸಿಬಿಐ ವಶಕ್ಕೆ ಪಡೆದಿದೆ.

ಐಎಂಎ ಹಗರಣದ ತನಿಖೆ ಚುರುಕುಗೊಳಿಸಿದ ಸಿಬಿಐ ತಂಡ, ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ತಮಗೆ ಒಪ್ಪಿಸುವಂತೆ ಎರಡು ದಿನಗಳ ಹಿಂದಷ್ಟೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 20 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿ ಮನವಿ ಮಾಡಿದ್ದರು.

ಗುರುವಾರ ನಗರದ ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಆರೋಪಿಗಳಾದ ಮನ್ಸೂರ್ ಖಾನ್, ನಿಝಾಮುದ್ದೀನ್, ನಾಸೀರ್ ಹುಸೇನ್, ನವೀದ್ ಅಹ್ಮದ್, ವಸೀಂ, ಅಶ್ರನ್ ಖಾನ್ ಹಾಗೂ ಆಪ್ಸರ್ ಪಾಷಾ, ದಾದಾಪೀರ್ ಎಂಬುವರನ್ನು ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ, ಮನ್ಸೂರ್ ಖಾನ್ ಸೇರಿ ಒಟ್ಟು ಎಂಟು ಆರೋಪಿಗಳನ್ನು ಐದು ದಿನಗಳ ಕಾಲ ಸಿಬಿಐ ವಶಕ್ಕೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ರಾಜಕಾರಣಿಗಳಿಗೆ ಸಮನ್ಸ್?: ಐ ಮಾನಿಟರಿ ಅಡ್ವೈಸರಿ (ಐಎಂಎ) ಬಹುಕೋಟಿ ಹಗರಣ ಸಂಬಂಧ ವಿಚಾರಣೆ ನಡೆಸುತ್ತಿರುವ ಸಿಬಿಐ, ಶೀಘ್ರದಲ್ಲಿಯೇ ರಾಜ್ಯದ ಪ್ರಮುಖ ರಾಜಕಾರಣಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಬಂಧನಕ್ಕೆ ಒಳಗಾಗಿರುವ ಐಎಂಎ ಮುಖ್ಯಸ್ಥ ಮನ್ಸೂರ್ ಖಾನ್ ವಿಚಾರಣೆಯ ಸಮಯದಲ್ಲಿ ನಾನು ಹಲವು ರಾಜಕಾರಣಿಗಳಿಗೆ ಹಣ ನೀಡಿದ್ದೆ ಎಂದು ಆರೋಪಿಸಿರುವ ಹಿನ್ನಲೆ, ಸಿಬಿಐ ವಿಚಾರಣೆ ನಡೆಸಲಿದೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News