ರಾಮಕೃಷ್ಣನಗರ ಆಟದ ಮೈದಾನ ರಕ್ಷಿಸುವಂತೆ ಡಿಸಿಎಂಗೆ ಮನವಿ

Update: 2019-09-12 14:31 GMT

ಬೆಂಗಳೂರು, ಸೆ.12: ಇಲ್ಲಿನ ರಾಮಕೃಷ್ಣನಗರದಲ್ಲಿರುವ ಮಕ್ಕಳ ಆಟದ ಮೈದಾನವನ್ನು ಕಾನೂನು ಬಾಹಿರವಾಗಿ ಸಂಘ ಸಂಸ್ಥೆಗಳಿಗೆ ಹಂಚಿಕೆ ಮಾಡಿರುವುದನ್ನು ವಾಪಸ್ ಪಡೆದು, ಆಟದ ಮೈದಾನವಾಗಿಯೆ ಉಳಿಸಿಕೊಳ್ಳುವಂತೆ ಸೂಕ್ತ ಕ್ರಮವಹಿಸುವಂತೆ ರಾಮಕೃಷ್ಣನಗರ ಮಕ್ಕಳ ಆಟದ ಮೈದಾನ ರಕ್ಷಣಾ ಸಮಿತಿ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್‌ಗೆ ಮನವಿ ಪತ್ರ ಸಲ್ಲಿಸಿದರು. 

ಸರಕಾರದ ಹಿಡಿತದಲ್ಲಿದ್ದ ಆಟದ ಮೈದಾನವನ್ನು ಕೆಲವು ಭ್ರಷ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಮ್ಮ ಸ್ವಾರ್ಥಕ್ಕಾಗಿ ಕೆಲವು ಖಾಸಗಿ ಸಂಸ್ಥೆಗಳಿಗೆ ಹಂಚಿಕೆ ಮಾಡಿದ್ದಾರೆ. ಇದರಿಂದ ವಿದ್ಯಾರ್ಥಿಗಳು, ಕ್ರೀಡಾಪಟುಗಳು ಹಾಗೂ ಸುತ್ತಮುತ್ತಲ ನಾಗರಿಕರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆಟದ ಮೈದಾನ ರಕ್ಷಣಾ ಸಮಿತಿಯ ಸದಸ್ಯರು ಆರೋಪಿಸಿದ್ದಾರೆ.

ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ನೇತೃತ್ವದಲ್ಲಿ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್‌ರನ್ನು ಭೇಟಿ ಮಾಡಿದ ಆಟದ ಮೈದಾನ ರಕ್ಷಣಾ ಸಮಿತಿಯ ಸದಸ್ಯರು, ಸಾವಿರಾರು ವಿದ್ಯಾರ್ಥಿ, ಯುವಜನತೆಯ ಹಿತಕ್ಕಿಂತ ಕೇವಲ ಮೂರು ಸಂಘ-ಸಂಸ್ಥೆಗಳ ಹಿತ ಮುಖ್ಯವಲ್ಲ. ಈ ಪ್ರಕರಣವನ್ನು ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದರು.

ನಾವು ಆಟವಾಡಲು ಮೈದಾನವನ್ನು ಉಳಿಸಿಕೊಡಿಯೆಂದು ಇಲ್ಲಿನ ಸಾವಿರಾರು ವಿದ್ಯಾರ್ಥಿಗಳು, ಕ್ರೀಡಾಪಟುಗಳು ಹಾಗೂ ಸಾರ್ವಜನಿಕರು ನೂರಾರು ದಿನಗಳಿಂದ ಧರಣಿ ನಡೆಸುತ್ತಾ ಬರುತ್ತಿದ್ದಾರೆ. ಆದರೆ, ಇದನ್ನು ಯಾವ ಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸದೇ ಇರುವುದು ನೋವಿನ ಸಂಗತಿಯಾಗಿದೆ. ಆದರೂ ನ್ಯಾಯ ಸಿಗುವವರೆಗೆ ಹೋರಾಟವನ್ನು ಮುಂದುವರೆಸುತ್ತೇವೆಂದು ನಟ ಚೇತನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News