ಭಾರತದ ಆರ್ಥಿಕ ಪ್ರಗತಿ ನಿರೀಕ್ಷೆಗಿಂತಲೂ ದುರ್ಬಲ: ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ

Update: 2019-09-13 17:45 GMT

ವಿಶ್ವಸಂಸ್ಥೆ, ಸೆ.13: ಕಾರ್ಪೊರೇಟ್ ಮತ್ತು ಪರಿಸರ ನಿಯಂತ್ರಣದ ಅನಿಶ್ಚಿತತೆ ಮುಂತಾದ ಕಾರಣಗಳಿಂದ ಭಾರತದ ಆರ್ಥಿಕ ಅಭಿವೃದ್ಧಿ ನಿರೀಕ್ಷೆಗಿಂತಲೂ ಅತೀ ಕಡಿಮೆ ಪ್ರಮಾಣದಲ್ಲಿದೆ ಎಂದು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್) ಗುರುವಾರ ಹೇಳಿದೆ.

ಆಗಸ್ಟ್ 30ರಂದು ಬಿಡುಗಡೆಗೊಳಿಸಿರುವ ಅಂಕಿಅಂಶದ ಪ್ರಕಾರ , ಎಪ್ರಿಲ್‌ನಿಂದ ಜೂನ್‌ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಶೇ.5ಕ್ಕೆ ಕುಸಿದಿದ್ದು ಕಳೆದ 6 ವರ್ಷದಲ್ಲೇ ಇದು ಅತ್ಯಂತ ಕನಿಷ್ಟವಾಗಿದೆ. ಕಲ್ಲಿದ್ದಲು, ಕಚ್ಛಾ ತೈಲ, ನೈಸರ್ಗಿಕ ಅನಿಲ, ರಿಫೈನರಿ ಉತ್ಪನ್ನಗಳು, ರಸಗೊಬ್ಬರ, ಸ್ಟೀಲ್, ಸಿಮೆಂಟ್ ಮತ್ತು ವಿದ್ಯುಚ್ಛಕ್ತಿ - ಈ ಎಂಟು ಪ್ರಮುಖ ಕ್ಷೇತ್ರಗಳಲ್ಲಿ ಅಭಿವೃದ್ಧಿ ದರ ಜುಲೈಯಲ್ಲಿ ಶೇ.2.1ಕ್ಕೆ ಕುಸಿದಿದೆ(ಕಳೆದ ವರ್ಷದ ಇದೇ ಅವಧಿಯಲ್ಲಿ ಶೇ.7.3 ಅಭಿವೃದ್ಧಿ ದರ ದಾಖಲಾಗಿತ್ತು) ಎಂದು ವಾಣಿಜ್ಯ ಸಚಿವಾಲಯದ ಹೇಳಿಕೆ ತಿಳಿಸಿದೆ.

ಭಾರತದ ಇತ್ತೀಚಿನ ಜಿಡಿಪಿಯು ಅಭಿವೃದ್ಧಿಯ ಮಂದಗತಿಯನ್ನು ತೋರಿಸುತ್ತದೆ. ಇದು ನಿರೀಕ್ಷೆಗಿಂತ ಅತೀ ಕಡಿಮೆಯಾಗಿದೆ ಎಂದು ಐಎಂಎಫ್ ವಕ್ತಾರ ಗೆರ್ರಿ ರೈಸ್ ಹೇಳಿದ್ದಾರೆ. ಉತ್ಪಾದನೆಯಲ್ಲಿ ಆಗಿರುವ ಕುಸಿತ ಮತ್ತು ಒಟ್ಟು ಬಳಕೆಯಲ್ಲಿ ಆಗಿರುವ ಕುಸಿತದಿಂದ ಭಾರತದ ಜಿಡಿಪಿ ಶೇ.5ಕ್ಕೆ ಕುಸಿದಿದೆ. ಇದಕ್ಕೆ ಕಾರ್ಪೊರೇಟ್ ಮತ್ತು ಪರಿಸರ ನಿಯಂತ್ರಣದ ಅನಿಶ್ಚಿತತೆಯ ಜೊತೆಗೆ ಭಾರತದ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ನಿಧಾನಗತಿಯ ನಿರ್ವಹಣೆ ಈ ಕುಸಿತಕ್ಕೆ ಕಾರಣವಾಗಿದೆ ಎಂದವರು ವಿಶ್ಲೇಷಿಸಿದ್ದಾರೆ. ಜಿಡಿಪಿ ಅಂಕಿ ಅಂಶವನ್ನು ತಾನು ಪರಿಶೀಲಿಸುತ್ತಿದ್ದೇನೆ. ಮುಂಬರುವ ಜಾಗತಿಕ ಆರ್ಥಿಕ ವರದಿಯಲ್ಲಿ ಈ ವೌಲ್ಯಮಾಪನವನ್ನು ನವೀಕರಿಸಲಾಗುತ್ತದೆ ಎಂದು ಐಎಂಎಫ್ ತಿಳಿಸಿದೆ.

2019-20ರಲ್ಲಿ ಭಾರತದ ಅಭಿವೃದ್ಧಿ ದರ ಶೇ.7.3ರಷ್ಟಾಗಲಿದೆ ಎಂದು ಐಎಂಎಫ್ ಎಪ್ರಿಲ್‌ನಲ್ಲಿ ಮುನ್ಸೂಚನೆ ನೀಡಿತ್ತು. ಬಳಿಕ ಜುಲೈಯಲ್ಲಿ ಇದನ್ನು ಪರಿಷ್ಕರಿಸಿ, ಅಭಿವೃದ್ಧಿ ದರ ಶೇ.7ಕ್ಕೆ ಕುಸಿಯುವ ನಿರೀಕ್ಷೆಯಿದೆ ಎಂದು ತಿಳಿಸಿತ್ತು. ಭಾರತದ ಆರ್ಥಿಕತೆ 2019ರಲ್ಲಿ ಶೇ.7ರ ದರದಲ್ಲಿ ಮತ್ತು 2020ರಲ್ಲಿ ಶೇ.7.2ರ ದರದಲ್ಲಿ ಪ್ರಗತಿ ಹೊಂದಲಿದೆ ಎಂದು ಐಎಂಎಫ್ ತಿಳಿಸಿತ್ತು. ಆದರೆ ದೇಶೀಯ ಬೇಡಿಕೆ ಕುಸಿದಿರುವುದು ಆರ್ಥಿಕ ಅಭಿವೃದ್ಧಿಯ ಮೇಲೆ ಪರಿಣಾಮ ಬೀರಿದೆ. ಆರ್ಥಿಕ ಅಭಿವೃದ್ಧಿ ಕುಸಿಯುತ್ತಿರುವ ಬಗ್ಗೆ ಭಾರತ ಗಮನ ಹರಿಸಬೇಕಾಗಿದೆ ಎಂದು ಐಎಂಎಫ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News