ಹೆಲ್ಮೆಟ್‌ಗೆ ಅಪ್ಪಳಿಸಿದ ಕ್ರಿಕೆಟ್ ಚೆಂಡು: ಭಾರೀ ಅಪಾಯದಿಂದ ಪಾರಾದ ರಸೆಲ್

Update: 2019-09-13 09:24 GMT

ಜಮೈಕಾ, ಸೆ.13: ಕೆರಿಬಿಯನ್ ಪ್ರೀಮಿಯರ್ ಲೀಗ್(ಸಿಪಿಎಲ್)ಪಂದ್ಯದಲ್ಲಿ ವೆಸ್ಟ್‌ಇಂಡೀಸ್ ಆಲ್‌ರೌಂಡರ್ ಆ್ಯಂಡ್ರೆ ರಸೆಲ್ ಬ್ಯಾಟಿಂಗ್ ಮಾಡುತ್ತಿದ್ದಾಗ ಕ್ರಿಕೆಟ್ ಚೆಂಡು ಹೆಲ್ಮೆಟ್‌ಗೆ ಜೋರಾಗಿ ಅಪ್ಪಳಿಸಿದ ಆಘಾತಕಾರಿ ಘಟನೆ ನಡೆದಿದೆ.

ಚೆಂಡಿನ ಹೊಡೆತಕ್ಕೆ ಮೈದಾನದಲ್ಲಿ ಕುಸಿದುಬಿದ್ದ ರಸೆಲ್‌ರನ್ನು ಸ್ಟ್ರೆಚರ್‌ನ ಮುಖಾಂತರ ಮೈದಾನದಿಂದ ಹೊರಗೆ ಕರೆದುಕೊಂಡು ಹೋಗಲಾಗಿದ್ದು,ಸದ್ಯಕ್ಕೆ ಅವರು ಯಾವುದೇ ಗಂಭೀರ ಗಾಯವಿಲ್ಲದೆ ಪಾರಾಗಿದ್ದಾರೆ ಎಂದು ಲೀಗ್‌ನ ಆಯೋಜಕರು ತಿಳಿಸಿದ್ದಾರೆ.

ಸೈಂಟ್ ಲೂಸಿಯ ತಂಡದ ವೇಗದ ಬೌಲರ್ ಹಾರ್ಡಸ್ ವಿಲ್‌ಜೊಯೆನ್ ಎಸೆದ ಶಾರ್ಟ್ ಬಾಲ್ ಜಮೈಕಾ ತಂಡದ ಬ್ಯಾಟ್ಸ್‌ಮನ್ ರಸೆಲ್‌ರ ಬಲಕಿವಿಗೆ ಅಪ್ಪಳಿಸಿತ್ತು. 31ರ ಹರೆಯದ ರಸೆಲ್‌ರನ್ನು ಆಸ್ಪತ್ರೆಗೆ ದಾಖಲಿಸಿ ಸ್ಕಾನಿಂಗ್ ಮಾಡಲಾಗಿದ್ದು, ಗಂಭೀರ ಗಾಯವಿಲ್ಲದೇ ಪಾರಾಗಿದ್ದಾರೆ. ವೈದ್ಯರ ಸಲಹೆ ಮೇರೆಗೆ ಟೀಮ್ ಹೊಟೇಲ್‌ಗೆ ತೆರಳಿರುವ ರಸೆಲ್ ಅವರೊಂದಿಗೆ ಅವರ ಪತ್ನಿ, ಜಮೈಕಾ ತಂಡದ ವೈದ್ಯಕೀಯ ತಂಡವಿದೆ.

2014ರಲ್ಲಿ ಸಿಡ್ನಿಯಲ್ಲಿ ಶೀಫೀಲ್ಡ್ ಶೀಲ್ಡ್ ಪಂದ್ಯದ ವೇಳೆ ಬೌನ್ಸರ್ ಎಸೆತವೊಂದು ಆಸ್ಟ್ರೇಲಿಯದ ಫಿಲಿಪ್ ಹ್ಯೂಸ್ ಕುತ್ತಿಗೆ ಭಾಗಕ್ಕೆ ಅಪ್ಪಳಿಸಿದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News