ಮನುಷ್ಯ ಸತ್ತ 1 ವರ್ಷಕ್ಕೂ ಹೆಚ್ಚು ಕಾಲ ದೇಹದಲ್ಲಿ ಚಲನೆ: ಆಸ್ಟ್ರೇಲಿಯಾ ವಿಜ್ಞಾನಿ

Update: 2019-09-13 10:41 GMT

ಸಿಡ್ನಿ, ಸೆ.13: ಮನುಷ್ಯರು ಸತ್ತ ನಂತರವೂ ಅವರ ಕಳೇಬರಗಳು ಒಂದು ವರ್ಷಕ್ಕೂ ಹೆಚ್ಚು ಕಾಲ ಚಲನೆಗಳಿರುತ್ತವೆ ಎಂಬುದನ್ನು ಆಸ್ಟ್ರೇಲಿಯಾದ ವಿಜ್ಞಾನಿ ಅಲಿಸನ್ ವಿಲ್ಸನ್ ಪ್ರತಿಪಾದಿಸಿದ್ದಾರೆ.

ಸುಮಾರು 17 ತಿಂಗಳುಗಳಿಗೂ ಹೆಚ್ಚಿನ ಕಾಲ ಕಳೇಬರವೊಂದನ ಚಲನೆಗಳನ್ನು ಅಭ್ಯಸಿಸಿ ಹಾಗೂ ಅದರ ಛಾಯಾಚಿತ್ರಗಳನ್ನು ತೆಗೆದಿರುವ ಈಕೆ ಮನುಷ್ಯರು ಮೃತಪಟ್ಟು ಒಂದು ವರ್ಷದ ತನಕ  ನಿಜಾರ್ಥದಲ್ಲಿ ಅವರ ದೇಹ ಶಾಂತಿಯಿಂದಿರುವುದಿಲ್ಲ ಎಂದರು. ಒಂದು ಪ್ರಕರಣದಲ್ಲಿ ಮೃತದೇಹದ ತೀರಾ ಸನಿಹದಲ್ಲಿದ್ದ ಕೈಗಳು ಒಂದು ಬದಿಗೆ ಚಾಚಿಕೊಂಡಿದ್ದವು. ದೇಹ ಕೊಳೆತು ಹೋಗುವ ಹಂತದಲ್ಲಿ ಈ ಚಲನೆಗಳು ನಡೆಯುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.

ತಮ್ಮ ಅಧ್ಯಯನದ ಭಾಗವಾಗಿ ಒಂದು ನಿರ್ದಿಷ್ಟ ಕಳೇಬರವನ್ನು ಪರೀಕ್ಷಿಸಲು ಅವರು ಪ್ರತಿ ತಿಂಗಳು ಕೈನ್ರ್ಸ್ ನಿಂದ ಸಿಡ್ನಿಗೆ ಆಗಮಿಸುತ್ತಿದ್ದರು. ಸಿಡ್ನಿಯ ಹೊರವಲಯದಲ್ಲಿರುವ ರಹಸ್ಯ ಸ್ಥಳವೊಂದರಲ್ಲಿರುವ `ಬಾಡಿ ಫಾರ್ಮ್' ಎಂದೇ ಕರೆಯಲ್ಪಡುವ ಆಸ್ಟ್ರೇಲಿಯನ್ ಫೆಸಿಲಿಟಿ ಫಾರ್ ಟೆಫೊನೋಮಿಕ್ ಎಕ್ಸ್‍ಪರಿಮೆಂಟಲ್ ರಿಸರ್ಚ್ ನಲ್ಲಿ ಅವರು ತಮ್ಮ ಈ ಅಧ್ಯಯನ ಕೈಗೊಂಡಿದ್ದು, ಅಲ್ಲಿ ಸಂಗ್ರಹಿಸಿಡಲಾಗಿರುವ 70 ಕಳೇಬರಗಳ ಪೈಕಿ ಒಂದನ್ನು ವಿಲ್ಸನ್ ಅಧ್ಯಯನ ನಡೆಸಿದ್ದಾರೆ. ಮರಣೋತ್ತರ ಚಲನೆಗಳನ್ನು ಗಮನಿಸಿ ಅಧ್ಯಯನ ನಡೆಸಲೆಂದೇ ಈ ಕೇಂದ್ರ ಕಾರ್ಯಾಚರಿಸುತ್ತಿದೆ.

ವಿಲ್ಸನ್ ಅವರ ಅಧ್ಯಯನದ ವಿವರಗಳು ಇತ್ತೀಚೆಗೆ `ಫೊರೆನ್ಸಿಕ್ ಸಾಯನ್ಸ್ ಇಂಟರ್‍ನ್ಯಾಷನಲ್: ಸಿನರ್ಜಿ'ಯಲ್ಲಿ ಪ್ರಕಟಗೊಂಡಿತ್ತು. ವ್ಯಕ್ತಿಯೊಬ್ಬ ಮೃತಪಟ್ಟ ಸಮಯವನ್ನು ಅಂದಾಜಿಸಲು ಸಾಮಾನ್ಯವಾಗಿ ಬಳಕೆಯಾಗುವ ವಿಧಾನವನ್ನು ಇನ್ನಷ್ಟು ಸುಧಾರಿಸಲು ಟೈಮ್ ಲ್ಯಾಪ್ಸ್ ಕ್ಯಾಮರಾ ಬಳಸಿ ವಿಲ್ಸನ್ ಮತ್ತವರ ಸಹೋದ್ಯೋಗಿಗಳು ಅಧ್ಯಯನ ನಡೆಸುತ್ತಿದ್ದಾಗ ಮೃತದೇಹಗಳ ಚಲನೆ ಅವರ ಗಮನಕ್ಕೆ ಬಂದಿತ್ತು.

ಈ ಅಧ್ಯಯನದಿಂದ ಪೊಲೀಸರಿಗೆ ವ್ಯಕ್ತಿಯೊಬ್ಬ ಮೃತಪಟ್ಟ ನಿಖರ ಸಮಯವನ್ನು ಅಂದಾಜಿಸಲು ಸಹಾಯವಾಗುವ ಸಾಧ್ಯತೆಯಿದೆ ಹಾಗೂ ಸಾವಿನ ಕಾರಣವನ್ನು ತಪ್ಪಾಗಿ ಅಂದಾಜಿಸುವ ಸಾಧ್ಯತೆಯನ್ನೂ ಕಡಿಮೆಯಾಗಿಸಲಿದೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News