ಭಾರತ-ಪಾಕ್ ನಡುವೆ ಆಕಸ್ಮಿಕ ಯುದ್ಧದ ಸಾಧ್ಯತೆ: ಪಾಕ್ ವಿದೇಶಾಂಗ ಸಚಿವ

Update: 2019-09-13 10:49 GMT

ಇಸ್ಲಾಮಾಬಾದ್, ಸೆ.13:  ಜಮ್ಮು ಕಾಶ್ಮಿರದಲ್ಲಿನ ಪರಿಸ್ಥಿತಿಯಿಂದಾಗಿ `ಆಕಸ್ಮಿಕ ಯುದ್ಧದ' ಅಪಾಯವಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಹೇಳಿದ್ದಾರೆ.

ಜಿನೇವಾದಲ್ಲಿ ನಡೆದ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ಅಧಿವೇಶನದಲ್ಲಿ ಭಾಗವಹಿಸಿದ್ದ ಸಂದರ್ಭ ಸುದ್ದಿಗಾರರ ಜತೆ ಮಾತನಾಡಿದ ಅವರು “ಭಾರತ ಮತ್ತು ಪಾಕಿಸ್ತಾನ ದೇಶಗಳೆರಡಕ್ಕೂ ಸಂಘರ್ಷದ ಪರಿಣಾಮಗಳ ಬಗ್ಗೆ ಅರಿವಿದೆ'' ಎಂದು ತಾವು ನಂಬಿದ್ದಾಗಿ ಹೇಳಿದರು. ಅದೇ ಸಮಯ `ಆಕಸ್ಮಿಕ ಯುದ್ಧ' ನಡೆಯುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು, ಈಗಿನ ಪರಿಸ್ಥಿತಿ ಮುಂದುವರಿದರೆ ಏನೂ ಆಗಬಹುದು'' ಎಂದು ಅವರು ಎಚ್ಚರಿಸಿದರು.

ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಲು ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಮಿಷೆಲ್ ಬಚಿಲೆಟ್  ಆಸಕ್ತರಾಗಿದ್ದಾರೆ ಎಂದೂ ಅವರು ಹೇಳಿದರು. ತಾವು ಮಿಷೆಲ್ ಅವರನ್ನು ಭೇಟಿಯಾಗಿ ಭಾರತದ ಕಾಶ್ಮೀರ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಭೇಟಿ ನೀಡಲು ಅವರಿಗೆ ಹೇಳಿದ್ದಾಗಿ ಮಾಹಿತಿ ನೀಡಿದರು.

“ಅವರು ಅಲ್ಲಿಗೆ ಭೇಟಿ ನೀಡಿ ತಮ್ಮ ನಿಷ್ಪಕ್ಷಪಾತ ವರದಿ ನೀಡಿದರೆ ಅಲ್ಲಿನ ಪರಿಸ್ಥಿತಿಯೇನೆಂದು ಜಗತ್ತಿಗೆ ತಿಳಿಯಲಿದೆ'' ಎಂದ  ಖುರೇಷಿ ಉದ್ವಿಗ್ನತೆ ಶಮನಕ್ಕಾಗಿ ದ್ವಿಪಕ್ಷೀಯ ಮಾತುಕತೆಗಳ ಸಾಧ್ಯತೆಯನ್ನು ಅಲ್ಲಗಳೆದರು. “ಇಂತಹ ಒಂದು ವಾತಾವರಣದಲ್ಲಿ ಹಾಗೂ  ಭಾರತದ ಈಗಿನ ಮನೋಸ್ಥಿತಿಯಲ್ಲಿ ದ್ವಿಪಕ್ಷೀಯ ಮಾತುಕತೆಗೆ ಆಸ್ಪದವನ್ನು ನಾನು ಕಾಣುತ್ತಿಲ್ಲ” ಎಂದು ಅವರು ಹೇಳಿದರು.

“ಈ ವಿಷಯದ ಪರಿಹಾರಕ್ಕಾಗಿ ತೃತೀಯ ಸಂಧಾನಕಾರನ ಅಗತ್ಯವಿರಬಹುದು, ಈ ಪ್ರದೇಶದಲ್ಲಿ ಅಮೆರಿಕಾಗೆ ಸಾಕಷ್ಟು ಪ್ರಭಾವವಿರುವುದರಿಂದ  ಅದು ಪ್ರಮುಖ ಪಾತ್ರ ವಹಿಸಬಹುದು'' ಎಂದು ಖುರೇಷಿ ಹೇಳಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News