ಕಾಶ್ಮೀರ ವಿಷಯದಲ್ಲಿ ಜಗತ್ತು ಭಾರತವನ್ನು ನಂಬುತ್ತಿದೆ: ಪಾಕ್ ಸಚಿವ

Update: 2019-09-13 14:00 GMT

ಇಸ್ಲಾಮಾಬಾದ್, ಸೆ. 13: ಕಾಶ್ಮೀರ ಕುರಿತ ತನ್ನ ವಾದಕ್ಕೆ ಅಂತರ್‌ರಾಷ್ಟ್ರೀಯ ಬೆಂಬಲವನ್ನು ಗಳಿಸಲು ಪಾಕಿಸ್ತಾನ ವಿಫಲವಾಗಿದೆ ಎಂದು ಆ ದೇಶದ ಆಂತರಿಕ ಸಚಿವ ಬ್ರಿಗೇಡಿಯರ್ (ನಿವೃತ್ತ) ಇಜಾಝ್ ಅಹ್ಮದ್ ಶಾ ಹೇಳಿದ್ದಾರೆ. ಇಸ್ಲಾಮಾಬಾದ್‌ನ ಎಲ್ಲ ಪ್ರಯತ್ನಗಳ ಹೊರತಾಗಿಯೂ, ‘ಜಗತ್ತು ಭಾರತವನ್ನು ನಂಬುತ್ತಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪಾಕಿಸ್ತಾನದ ಸುದ್ದಿ ಚಾನೆಲ್ ‘ಹಮ್ ನ್ಯೂಸ್’ಗೆ ಗುರುವಾರ ನೀಡಿದ ಸಂದರ್ಶನವೊಂದರಲ್ಲಿ, ಪಾಕಿಸ್ತಾನದ ಆಡಳಿತದ ಹೊಣೆಯನ್ನು ಹೊತ್ತಿರುವ ಜನರು ದೇಶವನ್ನು ನಾಶಗೊಳಿಸಿದ್ದಾರೆ ಎಂದರು. ‘‘ಕಾಶ್ಮೀರದಲ್ಲಿ ಅವರು (ಭಾರತ) ಕರ್ಫ್ಯೂ ಹೇರಿದ್ದಾರೆ, ಅಲ್ಲಿ ಔಷಧ ಲಭ್ಯವಿಲ್ಲ ಎಂದು ನಾವು ಹೇಳುತ್ತಿದ್ದೇವೆ. ಆದರೆ, ಜಗತ್ತಿನಾದ್ಯಂತದ ಜನರು ನಮ್ಮನ್ನು ನಂಬುತ್ತಿಲ್ಲ, ಬದಲಿಗೆ ಭಾರತವನ್ನು ನಂಬುತ್ತಿದ್ದಾರೆ’’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಹೇಳಿದರು.

ಕಾಶ್ಮೀರ ವಿಷಯದ ಕುರಿತ ಪಾಕಿಸ್ತಾನದ ನಿಲುವಿಗೆ 58 ದೇಶಗಳು ಬೆಂಬಲ ವ್ಯಕ್ತಪಡಿಸಿವೆ ಎಂದು ಆ ದೇಶದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ ಬಳಿಕ, ಬ್ರಿಗೇಡಿಯರ್ ಶಾ ಈ ಹೇಳಿಕೆ ನೀಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಸಂವಿಧಾನದ 370ನೇ ವಿಧಿಯನ್ನು ಭಾರತ ಆಗಸ್ಟ್ 5ರಂದು ರದ್ದುಗೊಳಿಸಿದ ಬಳಿಕ, ಎಲ್ಲ ಜಾಗತಿಕ ವೇದಿಕೆಗಳಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ.

370ನೇ ವಿಧಿಯನ್ನು ರದ್ದುಗೊಳಿಸಿರುವುದು ಭಾರತದ ಆಂತರಿಕ ವಿಷಯವಾಗಿದೆ ಎಂದು ಭಾರತ ಅಂತರ್‌ರಾಷ್ಟ್ರೀಯ ಸಮುದಾಯಕ್ಕೆ ತಿಳಿಸಿದೆ ಹಾಗೂ ವಾಸ್ತವವನ್ನು ಒಪ್ಪಿಕೊಳ್ಳುವಂತೆ ಪಾಕಿಸ್ತಾನಕ್ಕೆ ಸಲಹೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News