ಶಿವಮೊಗ್ಗದಲ್ಲಿ ಆಯುಷ್ ಫಾರ್ಮ: ಸೂಕ್ತ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸಿಎಂ ಸೂಚನೆ

Update: 2019-09-13 14:50 GMT

ಬೆಂಗಳೂರು, ಸೆ.13: ಶಿವಮೊಗ್ಗ ಜಿಲ್ಲೆಯಲ್ಲಿ ಆಯುಷ್ ಫಾರ್ಮ, ಬಯೋ ಫಾರ್ಮ, ಆರೋಗ್ಯ ಸೇವೆಗಳ(ವೆಲ್‌ನೆಸ್) ಕ್ಲಸ್ಟರ್ ಸ್ಥಾಪನೆಗೆ ಸಂಬಂಧಿಸಿದಂತೆ ಸೂಕ್ತ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಕೈಗಾರಿಕಾ ಕ್ಲಸ್ಟರ್‌ಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ವೇಳೆ, ಶಿವಮೊಗ್ಗ ಜಿಲ್ಲೆಯಲ್ಲಿ ಆಯುಷ್ ಫಾರ್ಮ, ಬಯೋ ಫಾರ್ಮ, ಆರೋಗ್ಯ ಸೇವೆಗಳ (ವೆಲ್ನೆಸ್) ಕ್ಲಸ್ಟರ್ ಸ್ಥಾಪನೆಗೆ ಅವಕಾಶವಿದೆ ಎಂದು ಅಧಿಕಾರಿಗಳು ವಿವರಿಸಿದರು. ಈ ಕುರಿತು ಕೂಡಲೇ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿ ಸೂಚಿಸಿದರು.

ಇದೇ ಸಂದರ್ಭದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ, ರಾಜ್ಯದಲ್ಲಿ ಸ್ಥಾಪಿಸಲಾಗುತ್ತಿರುವ 9 ಕೈಗಾರಿಕಾ ಕ್ಲಸ್ಟರ್‌ಗಳ ಕುರಿತು ಮಾಹಿತಿ ನೀಡಿದರು.

ಕೊಪ್ಪಳದಲ್ಲಿ ಆಟಿಕೆಗಳ ಕೈಗಾರಿಕೆ ಸ್ಥಾಪನೆ ಹಾಗೂ ಬಳ್ಳಾರಿಯಲ್ಲಿ ಜವಳಿ ಮತ್ತು ವಸ್ತ್ರೋದ್ಯಮ ಸ್ಥಾಪನೆಗೆ ಹಲವು ಕಂಪೆನಿಗಳು ಸಿದ್ಧತೆ ನಡೆಸಿದ್ದು, ವಸ್ತ್ರೋದ್ಯಮದಿಂದ ಮಹಿಳೆಯರಿಗೆ ಹೆಚ್ಚಿನ ಅವಕಾಶ ದೊರೆಯತ್ತದೆ ಎಂದು ಅವರು ವಿವರಿಸಿದರು.

ಚಿಕ್ಕಬಳ್ಳಾಪುರದಲ್ಲಿ, ಮೊಬೈಲ್ ಫೋನ್ ಮತ್ತು ಇತರ ಇಲೆಕ್ಟ್ರಾನಿಕ್ ಉತ್ಪನ್ನಗಳು, ಚಿತ್ರದುರ್ಗದಲ್ಲಿ ಎಲ್ಇಡಿ ಉಪಕರಣಗಳ ಕ್ಲಸ್ಟರ್, ಹಾಸನದಲ್ಲಿ ಟೈಲ್ಸ್ ಮತ್ತು ಸ್ಯಾನಿಟರಿ ವೇರ್, ತುಮಕೂರಿನಲ್ಲಿ ಕ್ರೀಡೆ ಮತ್ತು ವ್ಯಾಯಾಮ ಸಲಕರಣೆಗಳ ತಯಾರಿಕೆಯ ಉದ್ಯಮ ಸ್ಥಾಪನೆಗೆ ಹಲವು ಕಂಪೆನಿಗಳು ಉತ್ಸುಕತೆ ತೋರಿದ್ದು, ಅವರೊಂದಿಗೆ ಮಾತುಕತೆ ವಿವಿಧ ಹಂತದಲ್ಲಿದೆ ಎಂದು ಗೌರವ್ ಗುಪ್ತ ತಿಳಿಸಿದರು.

ರಾಜ್ಯದಲ್ಲಿ ಯುವಜನರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಕೈಗಾರಿಕಾ ಕ್ಲಸ್ಟರುಗಳ ಸ್ಥಾಪನೆಯನ್ನು ಆದ್ಯತೆಯ ಮೇರೆಗೆ ಮಾಡುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News