ಛಾಯಾಗ್ರಾಹಕರ ವಿವಿಧೋದ್ದೇಶ ಬ್ಯಾಂಕ್ ನಿರ್ಮಾಣಕ್ಕೆ ಚಿಂತನೆ

Update: 2019-09-13 15:08 GMT

ಬೆಂಗಳೂರು, ಸೆ.13: ವೃತ್ತಿಪರ ಛಾಯಾಚಿತ್ರಗಾರರ ಸ್ಥಿತಿ ಶೋಚನೀಯವಾಗಿದೆ. ಹೀಗಾಗಿ, ಅವರ ಆರ್ಥಿಕ ಸ್ಥಿತಿ ಉತ್ತಮ ಪಡಿಸುವ ಉದ್ದೇಶದಿಂದ ವಿವಿಧೋದ್ದೇಶ ಬ್ಯಾಂಕ್ ನಿರ್ಮಾಣ ಮಾಡುವ ಚಿಂತನೆಯಿದೆ ಎಂದು ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ಅಧ್ಯಕ್ಷ ಎಸ್.ಪರಮೇಶ ಹೇಳಿದ್ದಾರೆ.

ಶುಕ್ರವಾರ ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘ ವತಿಯಿಂದ ಮೈಸೂರು ರಸ್ತೆಯಲ್ಲಿರುವ ನಂದಿಲಿಂಕ್ ಗ್ರೌಂಡ್‌ನಲ್ಲಿ ಏರ್ಪಡಿಸಿದ್ದ ‘ಡಿಜಿ ಇಮೇಜ್’ ಅಂತರ್‌ರಾಷ್ಟ್ರೀಯ ಛಾಯಾಗ್ರಹಣ ವಸ್ತು ಪ್ರದರ್ಶನದ ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರ ಸರಕಾರದ ‘ಮಾಧ್ಯಮ ಮತ್ತು ಮನೋರಂಜನೆಯ ಕೌಶಲ್ಯ ಸಮಿತಿ’ (ಎಂಇಎಸ್‌ಸಿ) ಯೋಜನೆಯಡಿ 2 ಲಕ್ಷ ರೂ. ವಿಮೆಯನ್ನು ಎಲ್ಲ ಛಾಯಾಚಿತ್ರಗ್ರಾಹಕರು ಪಡೆಯಬೇಕು ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರದ ಸೌಲಭ್ಯ ಉಪಯೋಗಿಸಿಕೊಳ್ಳಬೇಕು. ನೆರೆಯಲ್ಲಿ ಹಾನಿಗೀಡಾದ ಛಾಯಾಗ್ರಾಹಕರಿಗೆ ಸಂಘದ ನಿಧಿಯಿಂದ ಆರ್ಥಿಕ ನೆರವು ನೀಡಲಾಗುವುದು.

ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ಉಪಾಧ್ಯಕ್ಷ ಬಿ.ಎನ್.ರವಿಕುಮಾರ್ ಮಾತನಾಡಿ, ರಾಜ್ಯದಲ್ಲಿ 4 ಲಕ್ಷ ಕುಟುಂಬಗಳು ಛಾಯಾಗ್ರಹಣ ವೃತ್ತಿಯಿಂದ ಜೀವನ ನಡೆಸುತ್ತಿವೆ. ಇತ್ತೀಚಿನ ದಿನಗಳಲ್ಲಿ ಈ ವೃತ್ತಿ ನಶಿಸುತ್ತಿದ್ದು, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸಂಘಟನೆ ಬಲಗೊಳ್ಳಬೇಕಿದೆ. ಛಾಯಾಚಿತ್ರಗ್ರಾಹಕರ ಏಳಿಗೆಗೆ ಮತ್ತು ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರಕಾರ ವಿವಿಧ ಯೋಜನೆಗಳನ್ನು ಘೋಷಿಸಬೇಕು ಎಂದರು.

ಇದೇ ವೇಳೆ ಕ್ಯಾನಾನ್, ನಿಕಾನ್, ಪೆನಾಸೋನಿಕ್, ಸೋನಿ, ಸಿಂಪೆಕ್ಸ್, ಎಲಿನ್‌ಕ್ರೀಮ್, ಮೆಟ್ರೋ ಮೀಡಿಯಾ ಸೇರಿ ಹಲವು ಸಂಸ್ಥೆಗಳು ಭಾಗವಹಿಸಿದ್ದವು. ಮೂರು ದಿನಗಳ ಕಾಲ ನಡೆಯಲಿರುವ ಈ ಪ್ರದರ್ಶನದಲ್ಲಿ ವಿವಿಧ ರೀತಿಯ ಛಾಯಾಚಿತ್ರಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ ಎಂದು ಅವರು ವಿವರಿಸಿದರು.

ಸೆ.14ರಂದು ರಾಜ್ಯಾಧ್ಯಂತ ಆಯ್ಕೆ ಮಾಡಿದ 30 ಛಾಯಾಗ್ರಾಹಕರಿಗೆ ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ಡಾ.ತೇಜಸ್ವಿನಿ ಅನಂತ್‌ಕುಮಾರ್ ಅವರು ‘ಛಾಯಾ ಸಾಧಕ’ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. ಸೆ.15ರಂದು ನಡೆಯುವ ‘ನೀರನ್ನು ಉಳಿಸಿ ಕಾಡನ್ನು ಬೆಳಸಿ’ ಎಂಬ ಜಾಗೃತಿ ಕಾರ್ಯಕ್ರಮದಲ್ಲಿ ಸಾವಿರಾರು ಛಾಯಾಗ್ರಾಹಕರು ಏಕಕಾಲದಲ್ಲಿ ಕ್ಯಾಮರಾ ಕ್ಲಿಕ್ಕಿಸುವ ಮೂಲಕ ಪಾಲ್ಗೊಳ್ಳಲಿದ್ದಾರೆ. ಸಮಾರಂಭಕ್ಕೆ 30,000 ವೃತ್ತಿಪರ ಛಾಯಾಗ್ರಾಹಕರು ಆಗಮಿಸಿಲಿದ್ದು, ಅವರಿಗೆ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ಉಪಾಧ್ಯಕ್ಷ ಮಹದೇವ, ಕಾರ್ಯದರ್ಶಿ ಎ.ಎಂ.ಮುರಳಿ, ಖಜಾಂಚಿ ಆರ್.ವಿ. ಶ್ರೀಕಾಂತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News