ಕೌನ್ ಬನೇಗಾ ಕರೋಡ್ ಪತಿ: ಒಂದು ಕೋಟಿ ರೂ. ಗೆದ್ದ ಐಎಎಸ್ ಆಕಾಂಕ್ಷಿ

Update: 2019-09-14 04:47 GMT

ಹೊಸದಿಲ್ಲಿ: ಎನ್‌ಡಿಟಿವಿಯ ಜನಪ್ರಿಯ ಕಾರ್ಯಕ್ರಮ ಕೌನ್‌ಬನೇಗಾ ಕರೋಪತಿ ಸೀಸನ್-11ನಲ್ಲಿ, ಬಿಹಾರ ಮೂಲದ ಐಎಎಸ್ ಆಕಾಂಕ್ಷಿ ಸನೋಜ್‌ರಾಜ್ ಒಂದು ಕೋಟಿ ರೂ. ಬಹುಮಾನ ಗೆಲ್ಲುವ ಮೂಲಕ ಈ ಆವೃತ್ತಿಯಲ್ಲಿ ಕೋಟಿ ಗೆದ್ದ ಮೊದಲ ಸ್ಪರ್ಧಿ ಎನಿಸಿಕೊಂಡಿದ್ದಾರೆ.

ಎಲ್ಲ 16 ಪ್ರಶ್ನೆಗಳನ್ನು ಸಮರ್ಥವಾಗಿ ಎದುರಿಸಿದ ಮೊಟ್ಟಮೊದಲ ಸ್ಪರ್ಧಿ ಎನಿಸಿಕೊಂಡರು. "ಭಾರತದ ಯಾವ ಮುಖ್ಯ ನ್ಯಾಯಮೂರ್ತಿಯ ತಂದೆ, ಭಾರತದ ರಾಜ್ಯವೊಂದರ ಪ್ರಥಮ ಮುಖ್ಯಮಂತ್ರಿಯಾಗಿದ್ದರು ?" ಎಂಬ ಪ್ರಶ್ನೆ ಸನೋಜ್‌ರಾಜ್ ಅವರಿಗೆ ಒಂದು ಕೋಟಿ ರೂ. ಬಹುಮಾನ ತಂದುಕೊಟ್ಟಿದೆ. "ತಜ್ಞರನ್ನು ಕೇಳಿ" ಎಂಬ ತಮ್ಮ ಕೊನೆಯ ಲೈಫ್‌ಲೈನ್ ಬಳಸಿಕೊಂಡ ಸನೋಜ್ ಅಂತಿಮವಾಗಿ ನಗೆ ಬೀರಿದರು. ಆದರೆ ಏಳು ಕೋಟಿ ರೂ. ಮೌಲ್ಯದ ಮುಂದಿನ ಪ್ರಶ್ನೆ ಎದುರಿಸದ ಸನೋಜ್ ಈ ಹಂತದಲ್ಲಿ ಸ್ಪರ್ಧೆಯಿಂದ ನಿರ್ಗಮಿಸಿದರು.

"ಆಸ್ಟ್ರೇಲಿಯಾ ಕ್ರಿಕೆಟ್‌ನ ದಂತಕಥೆ ಎನಿಸಿದ್ದ ಡಾನ್ ಬ್ರಾಡ್‌ಮನ್ ತಮ್ಮ 100ನೇ ಪ್ರಥಮ ದರ್ಜೆ ಶತಕ ಸಾಧಿಸಲು ಭಾರತದ ಯಾವ ಬೌಲರ್‌ನ ಬೌಲಿಂಗ್‌ನಲ್ಲಿ ಒಂದು ರನ್ ಗಳಿಸಿದರು" ಎಂಬ ಹದಿನಾರನೇ ಪ್ರಶ್ನೆಗೆ ಉತ್ತರಿಸುವ ಸಾಹಸವನ್ನು ಸನೋಜ್ ಮಾಡಲಿಲ್ಲ.

ದೆಹಲಿಯಲ್ಲಿ ಯುಪಿಎಸ್ಸಿ ಪರೀಕ್ಷೆಗೆ ಸಜ್ಜಾಗುತ್ತಿರುವ ಸನೋಜ್ ಕಾರ್ಯಕ್ರಮದುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದರು. ಆರೋಗ್ಯ ಮತ್ತು ಪರಿಸರ ನೀತಿ ರೂಪಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಇಂಗಿತವನ್ನು ಅವರು ವ್ಯಕ್ತಪಡಿಸಿದರು.
"ಈ ಗೆಲುವಿನೊಂದಿಗೆ ನಾನು ಭಾವ ಪರವಶನಾಗಿದ್ದೇನೆ. ಇದು ನನ್ನ ಜೀವನದ ಮಹತ್ವದ ಘಟ್ಟ. ನನ್ನ ಮುಂದಿನ ಗುರಿ ಇನ್ನಷ್ಟು ಮೈಲುಗಲ್ಲುಗಳನ್ನು ತಲುಪುವುದು. ಕಠಿಣ ಪರಿಶ್ರಮ, ಪ್ರೀತಿ ಹಾಗೂ ಬದ್ಧತೆ ನಮ್ಮ ಗುರಿ ತಲುಪುವ ಮಾರ್ಗಗಳು" ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News