ಡ್ರೋನ್ ದಾಳಿ: ಸೌದಿಯ ಅರಾಮ್ಕೋದ ಎರಡು ತೈಲ ಘಟಕಗಳಲ್ಲಿ ಬೆಂಕಿ

Update: 2019-09-14 14:05 GMT

ರಿಯಾದ್,ಸೆ.14: ಸೌದಿ ಅರೇಬಿಯಾದ ಸರಕಾರಿ ಸ್ವಾಮ್ಯದ ಅರಾಮ್ಕೋಗೆ ಸೇರಿದ ಎರಡು ತೈಲ ಸ್ಥಾವರಗಳ ಮೇಲೆ ಶನಿವಾರ ನಸುಕಿನಲ್ಲಿ ಡ್ರೋನ್ ದಾಳಿಗಳು ನಡೆದಿವೆ ಎಂದು ಆಂತರಿಕ ಸಚಿವಾಲಯವು ತಿಳಿಸಿದೆ. ಪರಿಣಾಮ ಬೃಹತ್ ಬೆಂಕಿ ಕಾಣಿಸಿಕೊಂಡಿದ್ದು, ಅರಾಮ್ಕೋದ ಭದ್ರತಾ ತಂಡಗಳು ಅದನ್ನು ನಿಯಂತ್ರಿಸುವಲ್ಲಿ ಸಫಲಗೊಂಡಿವೆ. ಈ ದಾಳಿಯಲ್ಲಿ ಯಾವುದೇ ಸಾವುನೋವುಗಳು ಸಂಭವಿಸಿವೆಯೇ ಎನ್ನುವುದನ್ನು ಸಚಿವಾಲಯವು ತಿಳಿಸಿಲ್ಲ.

ಪೂರ್ವ ಸೌದಿ ಅರೇಬಿಯಾದ ಅಬ್ಕೈಕ್ ಮತ್ತು ಖುರೈಸ್‌ನಲ್ಲಿಯ ಅರಾಮ್ಕೋದ ಈ ಎರಡು ಪ್ರಮುಖ ತೈಲಸ್ಥಾವರಗಳ ಮೇಲಿನ ದಾಳಿಯ ಹೊಣೆಯನ್ನು ತಕ್ಷಣಕ್ಕೆ ಯಾವುದೇ ಗುಂಪು ವಹಿಸಿಕೊಂಡಿಲ್ಲ. ಇರಾನ್‌ನೊಂದಿಗೆ ಪ್ರಾದೇಶಿಕ ಉದ್ವಿಗ್ನತೆಗಳು ಹೆಚ್ಚುತ್ತಿರುವ ನಡುವೆಯೇ ಈ ದಾಳಿಗಳು ನಡೆದಿವೆ.

ದಾಳಿಯ ಕುರಿತು ತನಿಖೆಯನ್ನು ಆರಂಭಿಸಲಾಗಿದೆ ಎಂದು ತಿಳಿಸಿರುವ ಸಚಿವಾಲಯದ ಹೇಳಿಕೆಯು,ಡ್ರೋನ್‌ಗಳ ಮೂಲವನ್ನು ನಿರ್ದಿಷ್ಟಪಡಿಸಿಲ್ಲ.

 ಪರ್ಷಿಯನ್ ಕೊಲ್ಲಿಯಲ್ಲಿ ಸೌದಿಯ ತೈಲ ಟ್ಯಾಂಕರ್‌ಗಳ ಮೇಲೆ ನಡೆದಿದ್ದ ಡ್ರೋನ್ ದಾಳಿಯ ಹಿಂದೆ ಇರಾನಿನ ರೆವೊಲ್ಯೂಶನರಿ ಗಾರ್ಡ್ಸ್‌ನ ಕೈವಾಡವಿದ್ದ ಹೆಚ್ಚಿನ ಸಾಧ್ಯತೆಯಿದೆ ಎಂದು ನಾರ್ವೆಯ ವಿಮಾ ಕಂಪನಿಯೊಂದು ತನ್ನ ವರದಿಯಲ್ಲಿ ಹೇಳಿತ್ತು.

 ಸೌದಿ ಅಧಿಕಾರಿಗಳು ದಾಳಿಗೀಡಾದ ಸ್ಥಾವರಗಳ ಬಳಿ ಭದ್ರತೆಯನ್ನು ಹೆಚ್ಚಿಸಿದ್ದು,ಮಾಧ್ಯಮ ಪ್ರತಿನಿಧಿಗಳನ್ನು ಅವುಗಳ ಸಮೀಪ ಸುಳಿಯಲೂ ಅವಕಾಶ ನೀಡುತ್ತಿಲ್ಲ,ಹೀಗಾಗಿ ಸಂಭವಿಸಿರುವ ಹಾನಿಯ ಬಗ್ಗೆ ಸ್ಪಷ್ಟ ಚಿತ್ರಣ ತಕ್ಷಣಕ್ಕೆ ದೊರೆತಿಲ್ಲ.

ಇತ್ತೀಚಿನ ತಿಂಗಳುಗಳಲ್ಲಿ ಇರಾನ್ ಜೊತೆ ನಂಟು ಹೊಂದಿರುವ ಯೆಮನ್‌ನ ಹೌಥಿ ಬಂಡುಕೋರರ ಸೌದಿ ಅರೇಬಿಯದ ವಾಯು ನೆಲೆಗಳು ಮತ್ತು ಇತರ ಸ್ಥಾವರಗಳನ್ನು ಗುರಿಯಾಗಿಸಿಕೊಂಡು ಸರಣಿ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದ್ದರು. ಭಯೋತ್ಪಾದಕರ ಹಿಡಿತದಲ್ಲಿರುವ ಪ್ರದೇಶಗಳ ಮೇಲೆ ದೀರ್ಘ ಕಾಲದಿಂದ ನಡೆಯುತ್ತಿರುವ ಸೌದಿ ನೇತೃತ್ವದ ಬಾಂಬ್ ದಾಳಿಗಳಿಗೆ ಇದು ಪ್ರತ್ಯುತ್ತರವಾಗಿದೆ ಎಂದು ಅವರು ಹೇಳಿಕೊಂಡಿದ್ದರು.

ಹೌಥಿಗಳು ತಕ್ಷಣಕ್ಕೆ ಶನಿವಾರದ ದಾಳಿಯ ಹೊಣೆಯನ್ನು ವಹಿಸಿಕೊಂಡಿಲ್ಲ, ಆದರೆ ಬಂಡುಕೋರರ ಮಸೀರಾ ಟಿವಿಯು ಸೌದಿಯಲ್ಲಿನ ಭಾರೀ ದಾಳಿಯ ಕುರಿತು ಮಹತ್ವದ ಹೇಳಿಕೆಯೊಂದನ್ನು ಬಿಡುಗಡೆಗೊಳಿಸುವುದಾಗಿ ಟ್ವೀಟಿಸಿದೆ.

 ಕಳೆದ ತಿಂಗಳು ಯೆಮನ್‌ನ ಹೌಥಿ ಭಯೋತ್ಪಾದಕರು ನಡೆಸಿದ್ದ ದಾಳಿಯಿಂದ ಅರಾಮ್ಕೋದ ಶಯ್ಬಾ ನೈಸರ್ಗಿಕ ಅನಿಲ ದ್ರವೀಕರಣ ಸ್ಥಾವರವು ಹೊತ್ತಿ ಉರಿದಿತ್ತು. ಆದರೆ ಯಾವುದೇ ಸಾವುನೋವುಗಳು ಸಂಭವಿಸಿಲ್ಲ ಎಂದು ಕಂಪನಿಯು ತಿಳಿಸಿತ್ತು. ಕಳೆದ ಮೇ ತಿಂಗಳಲ್ಲಿ ಭಯೋತ್ಪಾದಕರು ಸೌದಿಯ ಪ್ರಮುಖ ಪೂರ್ವ-ಪಶ್ಚಿಮ ಕೊಳವೆ ಮಾರ್ಗದ ಎರಡು ತೈಲ ಪಂಪಿಂಗ್ ಕೇಂದ್ರಗಳ ಮೇಲೆ ನಡೆಸಿದ್ದ ಡ್ರೋನ್ ದಾಳಿಗಳಿಂದಾಗಿ ಅವುಗಳನ್ನು ಹಲವು ದಿನಗಳ ಕಾಲ ಮುಚ್ಚಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News