ಎಸ್ಸಿ-ಎಸ್ಟಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಗೆ ದಸಂಸ ಆಗ್ರಹ

Update: 2019-09-14 15:21 GMT

ಬೆಂಗಳೂರು, ಸೆ.14: ಎಸ್ಸಿ-ಎಸ್ಟಿಯ ಜನಸಂಖ್ಯೆಗೆ ಅನುಗುಣವಾಗಿ ನಿಗದಿ ಪಡಿಸಿರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಂಚಾಲಕ ಲಕ್ಷ್ಮೀ ನಾರಾಯಣ ನಾಗವಾರ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ರಚನೆ ಮಾಡುವ ಸಂದರ್ಭದಲ್ಲಿ ಶೋಷಿತ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸುವ ಮೂಲಕ ಜನಾಂಗದ ಅಭ್ಯುದಯಕ್ಕೆ ಬುನಾದಿ ಹಾಕಿದರು. ಆದರೆ ಇಲ್ಲಿಯತನಕ ಆಡಳಿತ ನಡೆಸಿದ ಪಕ್ಷಗಳು ಸರಿಯಾಗಿ ಮೀಸಲಾತಿ ಜಾರಿಗೊಳಿಸದೆ, ಅನ್ಯಾಯವೆಸಗಿವೆ. ಹೀಗಾಗಿ ಈ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ಎಸ್ಸಿಗೆ ಶೇ.18ರಷ್ಟು ಹಾಗೂ ಎಸ್ಟಿಗೆ ಶೇ.7ರಷ್ಟು ಮೀಸಲಾತಿ ನೀಡುವ ಮೂಲಕ ಸಾಮಾಜಿಕ ನ್ಯಾಯ ಎತ್ತಿಹಿಡಿಯಬೇಕೆಂದು ಒತ್ತಾಯಿಸಿದರು.

ರಾಜ್ಯದಲ್ಲಿ ಪರಿಶಿಷ್ಟ ಜಾತಿಯವರಿಗೆ ಸರಕಾರಿ ಹುದ್ದೆಗಳಲ್ಲಿ ಶೇ.15ರಷ್ಟು ಮೀಸಲಾತಿಯನ್ನು ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ.3ರಷ್ಟು ಮೀಸಲಾತಿಯನ್ನು ಒದಗಿಸಬೇಕೆಂದು ಸೂಚಿಸಲಾಗಿದೆ. ಆದರೆ ಇಲ್ಲಿಯತನಕ ಮೀಸಲಾತಿ ಪ್ರಮಾಣ ಅನುಷ್ಠಾನವಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆ ಹೆಚ್ಚಾಗಿರುವುದರಿಂದ ನಿಗದಿಪಡಿಸಿರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಬೇಕೆಂದು ಹೇಳಿದರು.

ಇನ್ನು, ಹೊಸದಾಗಿ ರಚನೆ ಮಾಡುತ್ತಿರುವ ಮೀಸಲಾತಿಗೆ ಸಂಬಂಧಪಟ್ಟ ಸಮಿತಿಯಲ್ಲಿ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅವರನ್ನು ಮುಂದುವರಿಸಬೇಕು ಮತ್ತು ಕಾಲಮಿತಿ ನಿಗದಿಗೊಳಿಸಿ ವರದಿ ತರಿಸಿಕೊಂಡು 4 ತಿಂಗಳ ಒಳಗೆ ಮೀಸಲಾತಿ ಪ್ರಮಾಣ ಹೆಚ್ಚಳವನ್ನು ಪ್ರಕಟಿಸಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News