ನಾಡಪ್ರಭು ಕೆಂಪೇಗೌಡ ವ್ಯಕ್ತಿತ್ವ ಪಠ್ಯಗಳಲ್ಲಿ ಅಳವಡಿಕೆಯಾಗಲಿ: ನಂಜಾವಧೂತ ಸ್ವಾಮೀಜಿ

Update: 2019-09-14 15:27 GMT

ಬೆಂಗಳೂರು, ಸೆ.14: ಪ್ರಾಥಮಿಕ ಶಾಲೆಯಿಂದ ಸ್ನಾತಕೋತ್ತರದವರೆಗಿನ ಪಠ್ಯದಲ್ಲಿ ನಾಡಪ್ರಭು ಕೆಂಪೇಗೌಡರನ್ನು ಪರಿಚಯಿಸಬೇಕೆಂದು ಸ್ಫಟಿಕಪುರಿ ಮಹಾಸಂಸ್ಥಾನದ ನಂಜಾವಧೂತ ಸ್ವಾಮೀಜಿ ತಿಳಿಸಿದ್ದಾರೆ. 

ಬೆಂಗಳೂರು ವಿಶ್ವವಿದ್ಯಾಲಯದ ಎಚ್.ಎನ್.ಸಭಾಂಗಣದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಮಾನವಿಕ ಮತ್ತು ಸಮಾಜ ವಿಜ್ಞಾನಗಳ ಕೇಂದ್ರ ಹಾಗೂ ಇತಿಹಾಸ ವಿಭಾಗದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಬೆಂಗಳೂರಿನ ಇತಿಹಾಸ ಮತ್ತು ಪರಂಪರೆ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೆಂಪೇಗೌಡರ ಜನಪರ ಆಡಳಿತ, ದೂರದರ್ಶಿತ್ವ ಸೇರಿದಂತೆ ಅವರ ಸಮಗ್ರ ವ್ಯಕಿತ್ವವನ್ನು ಪಠ್ಯದಲ್ಲಿ ಅಳವಡಿಸಬೇಕು. ಸರಕಾರಿ ಶಾಲೆಗಳಲ್ಲದೆ ಖಾಸಗಿ ಸಂಸ್ಥೆಗಳಲ್ಲೂ ರಜೆ ರಹಿತ ಕೆಂಪೇಗೌಡರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಹಾಗೂ ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಬೃಹತ್‌ ಪುತ್ಥಳಿಯನ್ನು ಸ್ಥಾಪಿಸಬೇಕು ಎಂದು ಅವರು ಹೇಳಿದರು.

ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, ಉದಾತ್ತ ಧ್ಯೇಯೋದ್ದೇಶ, ದೂರದೃಷ್ಟಿ, ಜನಪರ ಕಾಳಜಿಯಿಂದ ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರ ಪ್ರಶಾಂತವಾಗಿತ್ತು. ಸದ್ಯ ಜಾಗತೀಕರಣ, ನಗರೀಕರಣಕ್ಕೆ ತುತ್ತಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗದೆ, ಅಧೋಗತಿಯತ್ತ ಸಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ವಿವಿ ಕುಲಪತಿ ಬಿ.ಕೆ.ರವಿ, ಇತಿಹಾಸ ವಿಭಾಗದ ಮುಖ್ಯಸ್ಥೆ ನಾಗರತ್ನಮ್ಮ, ಕೆಂಪೇಗೌಡ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಎನ್.ಮಸ್ತಾನ್ ಷೇಕ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News