ಅಧಿಕಾರಿಗಳ ಅಶಿಸ್ತು, ಕರ್ತವ್ಯ ಲೋಪ ಸಹಿಸುವುದಿಲ್ಲ: ಸಚಿವ ಪ್ರಭು ಚೌವ್ಹಾಣ್

Update: 2019-09-14 16:29 GMT

ಬೆಂಗಳೂರು, ಸೆ. 14: ಇಲಾಖೆ ಪ್ರಗತಿ ಪರಿಶೀಲನೆ ಸಭೆಗೆ ಗೈರು ಹಾಜರಾಗುವ ಮೂಲಕ ಅಶಿಸ್ತು ಪ್ರದರ್ಶನ ಮತ್ತು ಕರ್ತವ್ಯ ಲೋಪ ಎಸಗುವ ಅಧಿಕಾರಿಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ಇಲಾಖೆ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ಕೂಡಲೇ ನೋಟಿಸ್ ಜಾರಿಗೊಳಿಸಲು ಕಾರ್ಯದರ್ಶಿಗೆ ನಿರ್ದೇಶನ ನೀಡಿದರು. ಇಲಾಖೆ ಸಿವಿಲ್ ಕಾಮಗಾರಿಗಳನ್ನು ನಿರ್ಮಿತಿ ಕೇಂದ್ರದ ಬದಲಿಗೆ ಕೆಟಿಟಿಪಿ ಕಾಯ್ದೆಯಡಿ ಟೆಂಡರ್ ಆಹ್ವಾನಿಸಿ, ಅರ್ಹ ಗುತ್ತಿಗೆದಾರರಿಗೆ ನೀಡಬೇಕೆಂದು ಸೂಚಿಸಿದರು.

ಹಾಲು ಉತ್ಪಾದನೆ ಹೆಚ್ಚಿಸಲು ಹಾಲಿನ ಶೇಖರಣೆಯನ್ನು 1 ಕೋಟಿ ಲೀ.ಗೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ದೇಶಿ ಹಾಲಿಗೆ ಬೇಡಿಕೆ ಇದ್ದು, ಕೆಎಂಎಫ್‌ನಿಂದ ದೇಶಿ ಹಾಲು ಶೇಖರಣೆ ಆರಂಭಿಸಿದ್ದು, ದಿನಕ್ಕೆ 2 ಸಾವಿರ ಲೀ.ದೇಶಿ ಹಾಲು ಶೇಖರಣೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು 10 ಸಾವಿರ ಲೀಟರ್‌ಗೆ ಹೆಚ್ಚಿಸಲಾಗುವುದು ಎಂದರು.

ಪಶು ಆಹಾರ ಸಾಕಷ್ಟು ಪ್ರಮಾಣದಲ್ಲಿ ಪೂರೈಸಲು ಪಶು ಆಹಾರ ಘಟಕಗಳ ಸಾಮರ್ಥ್ಯ ಹೆಚ್ಚಿಸಲಾಗುವುದು. ಆಯಾ ಪ್ರದೇಶಗಳಲ್ಲಿ ಹೊಸ ಘಟಕ ಆರಂಭಿಸಲು ಯೋಜನೆ ರೂಪಿಸಬೇಕಿದೆ. ಹೈನುಗಾರಿಕೆಗೆ ರಾಜ್ಯದಲ್ಲಿ ವಿಫುಲ ಅವಕಾಶಗಳಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News