ವಿಶ್ವ ದಾಖಲೆಯನ್ನು ಉತ್ತಮಪಡಿಸಿದ ಚೌಧರಿ

Update: 2019-09-14 18:45 GMT

ಹೊಸದಿಲ್ಲಿ, ಸೆ.14: ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಶೂಟಿಂಗ್ ಟ್ರಯಲ್ಸ್‌ನಲ್ಲಿ ಏಶ್ಯನ್ ಗೇಮ್ಸ್ ಚಾಂಪಿಯನ್ ಸೌರಭ್ ಚೌಧರಿ ಪುರುಷರ 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಶನಿವಾರ ತನ್ನ ಹಿಂದಿನ ವಿಶ್ವದಾಖಲೆಯನ್ನು ಉತ್ತಮಪಡಿಸಿದ್ದಾರೆ.

ಯೂತ್ ಒಲಿಂಪಿಕ್ಸ್ ಚಾಂಪಿಯನ್ ಸೌರಭ್ ಚೌಧರಿ ಪುರುಷರ 246.8 ಪಾಯಿಂಟ್ ದಾಖಲಿಸಿ ಹಿಂದಿನ ದಾಖಲೆಯನ್ನು ಉತ್ತಮ ಪಡಿಸಿದರು. ಅವರ ಹಿಂದಿನ ವಿಶ್ವದಾಖಲೆ 246.3. ಆದರೆ ಇದು ಅಧಿಕೃತವಾಗಿ ಲೆಕ್ಕಕ್ಕೆ ಬರುವುದಿಲ್ಲ.

ಪುರುಷರ 10 ಮೀಟರ್ ಟಿ 7 ಫೈನಲ್ಸ್‌ನಲ್ಲಿ ಸೌರಭ್ ಚೌಧರಿ (246.3) ಮೊದಲ ಸ್ಥಾನ, ಶಾಹ್‌ಝಾರ್ ರಿಝ್ವಿ (243.7) ದ್ವಿತೀಯ ಮತ್ತು ಆರ್ಮಿಯ ರವೀಂದರ್ ಕುಮಾರ್(220.3) ತೃತೀಯ ಸ್ಥಾನ ಪಡೆದರು. ಚೌಧರಿ ಅರ್ಹತಾ ಸುತ್ತಿನಲ್ಲಿ 587 ಪಾಯಿಂಟ್, ಆರ್ಮಿಯ ವಿಕಾಸ್ ಧರ್ಮ 581 (2ನೇ ಸ್ಥಾನ), ಉಳಿದ 6 ಮಂದಿ 580 ಪಾಯಿಂಟ್ ಸಂಪಾದಿಸಿದರು.

    ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಅಂಜುಮ್ ವೌದ್ಗಿಲ್ ಮಹಿಳೆಯರ 50 ಮೀಟರ್ ರೈಫಲ್3 ಇವೆಂಟ್‌ನಲ್ಲಿ ವಿಜಯಶಾಲಿಯಾಗಿದ್ದಾರೆ. ಪಂಜಾಬ್‌ನ ಯುವತಿ ವೌದ್ಗಿಲ್ ಫೈನಲ್‌ನಲ್ಲಿ 456 ಪಾಯಿಂಟ್‌ನೊಂದಿಗೆ ಒಟ್ಟು 1,170 ಪಾಯಿಂಟ್ ದಾಖಲಿಸಿದರು. ಮಧ್ಯಪ್ರದೇಶದ ಸುನಿಧಿ ಚೌಹಾಣ್ (1,165) ಎರಡನೇ ಸ್ಥಾನ ಪಡೆದರು. ಫೈನಲ್‌ನಲ್ಲಿ ಸೈನಿ ಹರ್ಯಾಣ 451.7 ಮತ್ತು ಗುಜರಾತ್‌ನ ಲಜ್ಜಾ ಗೋಸ್ವಾಮಿ 441 ಅಂಕ ಪಡೆದಿದ್ದಾರೆ. ವಿಮೆನ್ಸ್ 3 ಪಿ ಜೂನಿಯರ್ ಟ್ರಯಲ್ಸ್ 6ರಲ್ಲಿ ಪ್ರಸಿದ್ಧಿ , ಪುರುಷರ 10 ಮೀ ಏರ್ ಪಿಸ್ತೂಲ್‌ನಲ್ಲಿ ಅರ್ಜುನ್ ಸಿಂಗ್ ಚೀಮಾ ಮತ್ತು ಪುರುಷರ 25 ಮೀಟರ್ ಸ್ಟಾಂಡರ್ಡ್ ಪಿಸ್ತೂಲ್‌ನಲ್ಲಿ ಉದಯ್‌ವೀರ ಸಿಧು ಜಯ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News