ವಿಜ್ಞಾನ ವಿದ್ಯಾರ್ಥಿನಿಯರಿಗಿನ್ನು ಸರ್ಕಾರಿ ಟ್ಯೂಷನ್

Update: 2019-09-15 04:01 GMT

ಹೊಸದಿಲ್ಲಿ: ಎಂಜಿನಿಯರಿಂಗ್, ಗಣಿತಶಾಸ್ತ್ರ ಮತ್ತು ಭೌತಶಾಸ್ತ್ರದಲ್ಲಿ ಉನ್ನತ ವ್ಯಾಸಾಂಗ ಮಾಡಲು ಬಾಲಕಿಯರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಒಂಬತ್ತರಿಂದ ಹನ್ನೆರಡನೇ ತರಗತಿವರೆಗಿನ ವಿದ್ಯಾರ್ಥಿನಿಯರಿಗೆ ವಿಶೇಷ ಕೋಚಿಂಗ್ ನೀಡಲು ಸರ್ಕಾರ ಉದ್ದೇಶಿಸಿದೆ.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ವಿಜ್ಞಾನಜ್ಯೋತಿ ಕಾರ್ಯಕ್ರಮದಡಿ ಈ ವಿಶೇಷ ಟ್ಯೂಷನ್ ನೀಡಲು ನಿರ್ಧರಿಸಿದೆ. "ಎಂಜಿನಿಯರಿಂಗ್, ಗಣಿತಶಾಸ್ತ್ರ ಮತ್ತು ಭೌತಶಾಸ್ತ್ರದಂಥ ಕೆಲ ವಿಷಯಗಳು ಕೇವಲ ಪುರುಷರಿಗೆ ಎಂಬ ಭಾವನೆ ಇದೆ. ಐಐಟಿಯಂಥ ಉನ್ನತ ಸಂಸ್ಥೆಗಳಲ್ಲಿ ಕೂಡಾ ಈ ಕ್ಷೇತ್ರಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಕಡಿಮೆ ಇದೆ. ಈ ಯೋಜನೆಯು ದೇಶಾದ್ಯಂತ ಸುಮಾರು 50 ಸಾವಿರ ವಿದ್ಯಾರ್ಥಿನಿಯರಿಗೆ ಮುಕ್ತವಾಗಲಿದೆ" ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಪ್ರೊ.ಅಶುತೋಶ್ ಶರ್ಮಾ ಹೇಳಿದ್ದಾರೆ.

"ಇದು ಐಚ್ಛಿಕವಾಗಿರುತ್ತದೆ ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ಅಧ್ಯಯನ ಮಾಡಲು ಆಸಕ್ತಿ ಇದ್ದೂ, ಉತ್ತಮ ಕಾಲೇಜುಗಳಿಗೆ ಪ್ರವೇಶ ಪಡೆಯಲು ಅಗತ್ಯವಾದ ಬೆಂಬಲ ಸಿಗದಿದ್ದ ಹೆಣ್ಣುಮಕ್ಕಳಿಗೆ ನೆರವಾಗಲಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

"ಇಷ್ಟು ವರ್ಷಗಳಿಂದ ಕೋಚಿಂಗ್ ಸೆಂಟರ್‌ಗಳಿದ್ದರೂ, ವಿಜ್ಞಾನದ ಈ ಕ್ಷೇತ್ರಗಳಲ್ಲಿ ಮಹಿಳೆಯರನ್ನು ಉತ್ತೇಜಿಸುವಂಥ ಮಹತ್ವದ ಬದಲಾವಣೆಯನ್ನು ತರಲು ಸಾಧ್ಯವಾಗಿಲ್ಲ. ಅದನ್ನು ಬದಲಾಯಿಸುವ ಐತಿಹಾಸಿಕ ದೃಷ್ಟಿಕೋನ ಇದಾಗಲಿದೆ" ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಈ ಯೋಜನೆಯಡಿ ಪ್ರಮುಖವಾಗಿ ನಾಲ್ಕು ಅಂಶಗಳಿದ್ದು, ವಿಷಯ ತರಬೇತಿ, ಮಾದರಿ ವ್ಯಕ್ತಿಗಳ ಭೇಟಿ, ಪೋಷಕರಿಗೆ ಸಾಂಸ್ಕೃತಿಕ ತರಬೇತಿ ಮತ್ತು ವೆಚ್ಚ ಭರಿಸಲು ಫೆಲೋಶಿಪ್ ಇರುತ್ತದೆ. ಐಐಟಿ, ಐಐಎಸ್‌ಇಆರ್ ಮತ್ತು ಇತರ ಪ್ರಮುಖ ವಿಜ್ಞಾನ ಸಂಸ್ಥೆಗಳ ಪ್ರಾಧ್ಯಾಪಕರು ಮಾತ್ರವಲ್ಲದೇ, ಉತ್ತಮ ಶಿಕ್ಷಕರು ಕೂಡಾ ಆಯ್ದ ವಿದ್ಯಾರ್ಥಿಗಳಿಗೆ ತಮ್ಮ ಜಿಲ್ಲೆಗಳಲ್ಲಿ ಬೋಧಿಸುವರು ಎಂದು ಅವರು ಮಾಹಿತಿ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News