ಮುಸ್ಲಿಮರ ಮತ ಪಡೆಯುವ ಶಾಸಕರು ಹಿಜಡಾಗಳು: ಸಚಿವ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ

Update: 2019-09-15 13:15 GMT

ಬೆಂಗಳೂರು, ಸೆ.15: ಮುಸ್ಲಿಮರ ಮತಗಳನ್ನು ಪಡೆದು ಗೆಲುವು ಸಾಧಿಸುವ ಶಾಸಕರಲ್ಲಿ ‘ಹಿಜಡಾ’ತನ ಅಡಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ವಿವಾದಿತ ಹೇಳಿಕೆ ನೀಡಿದ್ದಾರೆ.

ರವಿವಾರ ನಗರದ ಪುರಭವನದಲ್ಲಿ ಶ್ರೀರಾಮಸೇನಾ(ಬೆಂಗಳೂರು)ಏರ್ಪಡಿಸಿದ್ದ, ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅನೇಕ ಶಾಸಕರು ಬಿಜೆಪಿ ಸೇರ್ಪಡೆಗಾಗಿ ತಯಾರಿದ್ದಾರೆ. ಆದರೆ, ಅವರ ಕ್ಷೇತ್ರಗಳಲ್ಲಿ ಮುಸ್ಲಿಮರ ಮತಗಳು ಹೆಚ್ಚಾಗಿರುವ ಕಾರಣ, ಕೈ ತಪ್ಪುವ ಭೀತಿ ಅವರಲ್ಲಿದೆ. ಇದು, ಆ ಶಾಸಕರಲ್ಲಿನ ಹಿಜಡಾತನದ ಸಂಕೇತ ಎಂದು ವಾಗ್ದಾಳಿ ನಡೆಸಿದರು.

ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಎಂದಿಗೂ ಸಹ ಓರ್ವ ಮುಸ್ಲಿಮ್ ವ್ಯಕ್ತಿಯ ಬಳಿಯೂ ನಮಸ್ಕಾರ ಹಾಕಿ ಮತ ಕೇಳಿಲ್ಲ. ಇದರ ಅವಶ್ಯತೆಯೂ ನನಗಿಲ್ಲ ಎಂದ ಅವರು, ಯಾರು ರಾಷ್ಟ್ರದ್ರೋಹಿ ತತ್ವ ಹೊಂದಿದ ವ್ಯಕ್ತಿಗಳು ಮಾತ್ರ ಬಿಜೆಪಿಗೆ ಮತ ನೀಡುವುದಿಲ್ಲ ಎಂದು ಅವರು ಹೇಳಿದರು.

ಹಿಂದೆ ನಮ್ಮ ಸರಕಾರದ ಅವಧಿಯಲ್ಲಿ ಗೋಹತ್ಯೆ ನಿಷೇಧ ಮಾಡಿದ್ದೆವು. ಆದರೆ, ಬಳಿಕ ಕಾಂಗ್ರೆಸ್ ಸರಕಾರ ಅದನ್ನು ರದ್ದುಗೊಳಿಸಿತ್ತು. ಇದೀಗ ನಮಗೆ ಅವಕಾಶ ಸಿಕ್ಕಿದ್ದು, ಗೋವಿನ ಸಂತತಿ ಉಳಿವಿಗೆ ನಿಷೇಧವನ್ನು ಪುನಃ ಜಾರಿ ಮಾಡುತ್ತೇವೆ ಎಂದು ಈಶ್ವರಪ್ಪ ತಿಳಿಸಿದರು.

ಹಿಂದುತ್ವ ಸೇನಾನಿಗಳ ತಯಾರಿಕ ಸಂಸ್ಥೆ ಶ್ರೀರಾಮ ಸೇನೆ ಆಗಿದೆ ಎಂದ ಅವರು, ಪಾಕಿಸ್ತಾನ ಮತ್ತು ಪಿಒಕೆ ಪ್ರದೇಶವನ್ನು ಮುಂದಿನ ದಿನಗಳಲ್ಲಿ ಭಾರತಕ್ಕೆ ವಶಕ್ಕೆ ಪಡೆಯಲಿದ್ದು, ನರೇಂದ್ರ ಮೋದಿ ಜೀವಾಂತವಾಗಿವವರೆಗೂ ಅವರೇ ಈ ದೇಶದ ಪ್ರಧಾನಿ ಆಗಿರುತ್ತಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸೇರಿದಂತೆ ಪ್ರಮುಖರಿದ್ದರು.

ರೌಡಿ ಜತೆ ವೇದಿಕೆ, ಖಡ್ಗ ವಿತರಿಸಿದ ಸಚಿವ..!

ರಾಜಧಾನಿ ಬೆಂಗಳೂರಿನ ಕುಖ್ಯಾತ ಮಹಿಳಾ ರೌಡಿಶೀಟರ್ ಯಶಸ್ವಿನಿ ಗೌಡ ಜತೆ ವೇದಿಕೆ ಹಂಚಿಕೊಂಡು, ಶ್ರೀರಾಮ ಸೇನಾ ಪದಾಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಖಡ್ಗ ವಿತರಿಸಿದರು.

ಸುಲಿಗೆ, ಹಲ್ಲೆ, ಮೀಟರ್ ಬಡ್ಡಿ ದಂಧೆ ಸೇರಿದಂತೆ ಯಶಸ್ವಿನಿ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಆರು ಪ್ರಕರಣಗಳು ದಾಖಲಾಗಿವೆ. ಅಲ್ಲದೆ, ಸುಬ್ರಹ್ಮಣ್ಯಪುರ ಠಾಣೆಯ ರೌಡಿಗಳ ಪಟ್ಟಿಯಲ್ಲೂ ಯಶಸ್ವಿಗೌಡ ಹೆಸರಿದೆ. ಆದರೆ, ರವಿವಾರ ಶ್ರೀರಾಮ ಸೇನಾ ಆಯೋಜಿಸಿದ್ದ, ಕಾರ್ಯಕ್ರಮದಲ್ಲಿ ಯಶಸ್ವಿಗೌಡ ಜತೆ ವೇದಿಕೆಯಲ್ಲಿ ಸಚಿವರು ಕುಳಿತಿದ್ದರು. ಬಳಿಕ ಆಕೆಯನ್ನು ಈಶ್ವರಪ್ಪ ಮುಂದೆ ಕರೆದು ಅವರಿಂದಲೇ ದೀಪ ಬೆಳಗಿಸಿದರು. 

‘ಲಕ್ಷ್ಮೀ ದೇವತೆ ಇದ್ದು, ಆರ್ಥಿಕವಾಗಿ ಕುಗ್ಗುವುದಿಲ್ಲ’

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ವಿರುದ್ಧ ಆರ್ಥಿಕ ಸಂಪೂರ್ಣ ಕುಸಿಯುತ್ತಿರುವ ಅಲೆ ಬರುತ್ತದೆ. ಆದರೆ, ಮೋದಿ ಸಚಿವ ಸಂಪುಟದಲ್ಲೂ ಬಹಳಷ್ಟು ಮಂದಿ ಆರ್ಥಿಕ ತಜ್ಞರಿದ್ದಾರೆ.ಅಷ್ಟೇ ಅಲ್ಲದೆ, ಭಾರತದಲ್ಲಿ ಲಕ್ಷ್ಮೀ ದೇವತೆ ಇದ್ದಾಳೆ.ಹಾಗಾಗಿ, ಆರ್ಥಿಕತೆ ಕುಗ್ಗುವುದಿಲ್ಲ ಎಂದು ಬಾರ್ಕೂರು ಮಹಾ ಸಂಸ್ಥಾನದ ವಿಶ್ವ ಸಂತೋಷ ಭಾರತಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News