ನೂತನ ಕಾರ್ಮಿಕ ನೀತಿಗಳ ವಿರುದ್ಧ ಸಂಘಟಿತ ಹೋರಾಟ ಅಗತ್ಯ: ನ್ಯಾ.ಗೋಪಾಲಗೌಡ

Update: 2019-09-15 14:33 GMT

ಬೆಂಗಳೂರು, ಸೆ.15 : ಕೇಂದ್ರ ಸರಕಾರದ ನೂತನ ಕಾರ್ಮಿಕ ನೀತಿಗಳ ವಿರುದ್ಧ ಸಂಘಟಿತ ಹೋರಾಟ ಅಗತ್ಯವಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಮೂರ್ತಿ ವಿ.ಗೋಪಾಲಗೌಡ ಅಭಿಪ್ರಾಯ ಪಟ್ಟಿದ್ದಾರೆ.

ರವಿವಾರ ನಗರದ ಗಾಂಧಿ ಭವನದಲ್ಲಿ ಕರ್ನಾಟಕ ಲೇಬರ್ ರೆಪ್ರೆಸಂಟೇಟಿವ್ಸ್ ಫೋರಂ ರಿಸರ್ಚ್ ಅಂಡ್ ಆಕ್ಷನ್‌ನಿಂದ ಆಯೋಜಿಸಿದ್ದ ‘ಕೇಂದ್ರ ಸರಕಾರದ ನೂತನ ಕಾರ್ಮಿಕ ಕಾಯ್ದೆ -2019’ರ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೇಂದ್ರ ಸರಕಾರವು ಕಾರ್ಮಿಕರ ಪರವಾಗಿದ್ದ ಸುಮಾರು 40 ಕ್ಕೂ ಅಧಿಕ ಕಾನೂನುಗಳನ್ನು ತಿದ್ಧುಪಡಿ ಮಾಡಿ, ಒಂದೇ ಕಾನೂನು ಮಾಡಲು ಮುಂದಾಗಿದೆ. ಇದು ಕಾರ್ಮಿಕರ ವಿರೋಧಿಯಾಗಿದ್ದು, ಅದರಲ್ಲಿ ಹಲವು ನ್ಯೂನತೆಗಳಿವೆ. ಇದರ ವಿರುದ್ಧ ಎಲ್ಲರೂ ಸಂಘಟಿತರಾಗಿ ಹೋರಾಟಕ್ಕಿಳಿಯಬೇಕು ಎಂದು ಹೇಳಿದರು.

ಭವಿಷ್ಯದಲ್ಲಿ ಕಾರ್ಮಿಕರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವುದರೊಳಗೆ ಎಚ್ಚೆತ್ತುಕೊಳ್ಳಬೇಕು. ಎಲ್ಲ ಕಾರ್ಮಿಕ ಸಂಘಟನೆಗಳ ಜಂಟಿಯಾಗಿ ಹೋರಾಟ ರೂಪಿಸಬೇಕು. ಆ ಮೂಲಕ ಕೇಂದ್ರ ಸರಕಾರದ ನೀತಿಗಳನ್ನು ಧಿಕ್ಕರಿಸಬೇಕು ಎಂದು ಅವರ ಕರೆ ನೀಡಿದರು.

ದೇಶದಲ್ಲಿ ನಮ್ಮನ್ನಾಳುತ್ತಿರುವ ಸರಕಾರಗಳಿಗೆ ಕಾರ್ಮಿಕರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ ಹಾಗೂ ಕಾರ್ಮಿರಕ ಬಗ್ಗೆ ಭಯವಿಲ್ಲ. ಆದುದರಿಂದಾಗಿಯೇ ದಿನದಿಂದ ದಿನಕ್ಕೆ ಕಾರ್ಮಿಕ ಕಾನೂನುಗಳು ಬಲಹೀನವಾಗುತ್ತಿವೆ. ಇಂತಹ ಸಂದರ್ಭದಲ್ಲಿ ಎಲ್ಲ ಕಾರ್ಮಿಕರು ಒಟ್ಟುಗೂಡಬೇಕು ಎಂದರು.

ಕಾರ್ಮಿಕರು ಕಷ್ಟಕರವಾದ ದಿನಗಳನ್ನು ಅನುಭವಿಸುತ್ತಿದ್ದಾರೆ. ಹೀಗಾಗಿ ಕಾರ್ಮಿಕ ಶಕ್ತಿಗೆ ಬಲ ನೀಡುವ ಕೆಲಸ ಮತ್ತಷ್ಟು ಆಗಬೇಕಾಗಿದೆ. ನಮ್ಮನಾಳುವ ಸರಕಾರಗಳು ಬಂಡವಾಳಶಾಹಿಗಳ ಕೈಗೊಂಬೆಯಾಗಿರುವ ಹಿನ್ನೆಲೆಯಲ್ಲಿ ಕಾರ್ಮಿಕ ಕಾಯ್ದೆಗಳು ಬಂಡವಾಳಶಾಹಿಗಳ ಅನುಕೂಲಕ್ಕೆ ತಕ್ಕಂತೆ ಮಾರ್ಪಾಟು ಮಾಡಲಾಗುತ್ತಿದೆ. ಇದು ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿ ನಡೆ ಎಂದು ತಿಳಿಸಿದರು.

ಹಿರಿಯ ವಕೀಲೆ ರಾಮ ಪ್ರಿಯಾ ಮಾತನಾಡಿ, ಕೇಂದ್ರ ಸರಕಾರದ ನೂತನ ಕಾರ್ಮಿಕ ಕಾಯ್ದೆಯಲ್ಲಿ ಹಲವು ನ್ಯೂನತೆಗಳಿಗೆ ಕೃಷಿ ಕಾರ್ಮಿಕರನ್ನು ಕಾರ್ಮಿಕರೆಂದು ಪರಿಗಣಿಸಿಲ್ಲ. ಕಾರ್ಮಿಕರ ಕೆಲಸದ ವೇಳೆಯನ್ನು ಕೂಡ ಸರಿಯಾಗಿ ವ್ಯಾಖ್ಯಾನ ಮಾಡಿಲ್ಲ ಎಂದು ದೂರಿದರು.

2019ರ ಕಾರ್ಮಿಕ ಕಾಯ್ದೆಯಲ್ಲಿ ಮಹಿಳರಿಗೆ ಸುರಕ್ಷತೆಗೆ ಆದ್ಯತೆ ನೀಡಿಲ್ಲ. ಸಮಾನ ಕೆಲಸಕ್ಕೆ ಸಮಾನ ವೇತನ ಕೂಡ ತೆಗೆದು ಹಾಕುವ ಕೆಲಸ ನಡೆಯುತ್ತಿದೆ. ಬಂಡವಾಳ ಶಾಹಿಗಳ ಪರವಾದ ಕಾನೂನು ರೂಪಿಸಲಾಗಿದೆ ಎಂದು ಹೇಳಿದರು. ಹಿರಿಯ ವಕೀಲ ಕೆ.ಸುಬ್ಬರಾವ್, ಪ್ರೊ.ಬಾಬು ಮ್ಯಾಥ್ಯೂವ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News