×
Ad

ರಾಷ್ಟ್ರಭಾಷೆ ಕುರಿತು ಅಮಿತ್‌ ಶಾ ಹೇಳಿಕೆ ಅಪಾಯಕಾರಿ: ಡಾ.ಸಿ.ಎನ್.ರಾಮಚಂದ್ರನ್

Update: 2019-09-15 20:06 IST

ಬೆಂಗಳೂರು, ಸೆ.15: ದೇಶದ ಉನ್ನತ ಸ್ಥಾನದಲ್ಲಿರುವ ಗೃಹಮಂತ್ರಿ ಅಮಿತ್ ಶಾ ಹಿಂದಿಯನ್ನು ರಾಷ್ಟ್ರಭಾಷೆ ಎಂಬಂತೆ ಹೇಳಿಕೆ ನೀಡಿರುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾದದ್ದು ಹಾಗೂ ದೇಶದ ಹಿತದೃಷ್ಟಿಯಿಂದ ಅಪಾಯಕಾರಿ ಎಂದು ಹಿರಿಯ ವಿದ್ವಾಂಸ ಪ್ರೊ.ಸಿ.ಎನ್.ರಾಮಚಂದ್ರನ್ ಆತಂಕ ವ್ಯಕ್ತಪಡಿಸಿದ್ದಾರೆ.

ರವಿವಾರ ಸಮುದಾಯ ಹಾಗೂ ಸಹಯಾನ ಸಂಯುಕ್ತಾಶ್ರಯದಲ್ಲಿ ನಗರದ ಸೌಹಾರ್ದ ವಿಮಾ ನೌಕರರ ಸಂಘದಲ್ಲಿ ಆಯೋಜಿಸಿದ್ದ ನ್ಯಾ.ನಾಗಮೋನ ದಾಸ್ ರವರ ಸಂವಿಧಾನ ಓದು ಕೃತಿಯ ಇಂಗ್ಲಿಷ್ ಅವತರಣಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ದೇಶದ ಏಕತೆಗಾಗಿ ಹಿಂದಿ ರಾಷ್ಟ್ರಭಾಷೆಯಾಗಲಿಯೆಂದು ಅಮಿತ್‌ಶಾ ಹೇಳಿದ್ದಾರೆ. ಹಾಗಾದರೆ, ಕನ್ನಡ, ತಮಿಳು, ತೆಲುಗು, ಮರಾಠಿ ಭಾಷೆಗಳು ದೇಶದ ಏಕತೆಯನ್ನು ಒಡೆಯುತ್ತದೆಯೇ ಎಂದು ಪ್ರಶ್ನಿಸಿದರು.

ನಮ್ಮ ಸಂವಿಧಾನದಲ್ಲಿ ಯಾವುದೇ ಒಂದು ಭಾಷೆಯನ್ನು ರಾಷ್ಟ್ರಭಾಷೆಯಾಗಿ ಪರಿಗಣಿಸಿಲ್ಲ. ಸದ್ಯ ದೇಶದಲ್ಲಿರುವ 22 ಭಾಷೆಯನ್ನು ಅಧಿಕೃತ ಭಾಷೆಯೆಂದು ಘೋಷಿಸಿ ಸಮಾನ ಅವಕಾಶವನ್ನು ನೀಡಲಾಗಿದೆ. ಹಾಗೆಯೇ ದೇಶದಲ್ಲಿ ಅನಧಿಕೃತವಾಗಿ 108 ಭಾಷೆಗಳು, 1600ಕ್ಕೂ ಹೆಚ್ಚು ಜನಸಾಮಾನ್ಯ ಭಾಷೆಗಳಿವೆ. ಇವೆಲ್ಲ ಭಾಷೆಯನ್ನು ನಿರ್ಲಕ್ಷಿಸುವ ರೀತಿಯಲ್ಲಿ ಹಿಂದಿಗೆ ಪ್ರಾಮುಖ್ಯತೆ ನೀಡುತ್ತಿರುವುದು ಒಕ್ಕೂಟ ವ್ಯವಸ್ಥೆ ಮಾರಕವೆಂದು ಅವರು ಹೇಳಿದರು.

ಯಾವ ಭಾಷೆಯು ದೇಶವನ್ನು ಒಡೆಯುವುದೂ ಇಲ್ಲ, ಕಟ್ಟುವುದೂ ಇಲ್ಲ. ಆಯಾ ದೇಶಗಳ ಆಡಳಿತದ ವ್ಯವಸ್ಥೆಯ ಕಾರ್ಯವೈಖರಿಯ ಮೇಲೆ ದೇಶದ ಅಭಿವೃದ್ಧಿ ನಿಂತಿದೆ. ಆದರೆ, ನಮ್ಮ ಕೇಂದ್ರ ಸರಕಾರ ಭಾಷೆಯನ್ನು ಭಾವನಾತ್ಮಕ ವಿಷಯವನ್ನಾಗಿಸಿ ಜನತೆಯನ್ನು ದಾರಿ ತಪ್ಪಿಸಲು ಹೊರಟಿದೆ ಎಂದು ಅವರು ವಿಷಾದಿಸಿದರು.

ಬೃಹತ್ ಲಿಖಿತ ರೂಪದಲ್ಲಿರುವ ಭಾರತದ ಸಂವಿಧಾನವು ಹಲವು ಕ್ರಾಂತಿಕಾರಕ ಅಂಶಗಳನ್ನು ಒಳಗೊಂಡಿದೆ. ಬಹುತೇಕ ಪ್ರಜಾಪ್ರಭುತ್ವ ದೇಶಗಳು ಒಂದು ಧರ್ಮಕ್ಕೆ ಜೋತು ಬಿದ್ದಿರುವಾಗ ನಮ್ಮ ಸಂವಿಧಾನದಲ್ಲಿ ಎಲ್ಲ ಧರ್ಮಗಳನ್ನು ಸಮಾನವಾಗಿ ಕಾಣುವಂತಹ ಜಾತ್ಯಾತೀತ ವೌಲ್ಯಗಳನ್ನು ಅಳವಡಿಸಿಕೊಂಡಿದ್ದೇವೆ. ಹಾಗೆಯೇ ಮುಕ್ತ ಮಾರುಕಟ್ಟೆ ಹಾಗೂ ನಿಯಂತ್ರಿತ ಮಾರುಕಟ್ಟೆಯ ಇವೆರಡಕ್ಕೂ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಅಭಿಮಾನಪಟ್ಟರು.

ಕಾರ್ಯಕ್ರಮದಲ್ಲಿ ಕವಯತ್ರಿ ಡಾ.ಎಚ್.ಎಲ್.ಪುಷ್ಪಾ, ನಿವೃತ್ತ ನ್ಯಾ. ನಾಗಮೋಹನ ದಾಸ್, ಸಮುದಾಯ ಅಧ್ಯಕ್ಷ ಅಚ್ಯುತ, ವಿಮಲಾ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News