ಜಮ್ಮು-ಕಾಶ್ಮೀರವನ್ನು ಸಹಜ ಸ್ಥಿತಿಗೆ ತನ್ನಿ: ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸೂಚನೆ

Update: 2019-09-16 08:17 GMT

ಹೊಸದಿಲ್ಲಿ, ಸೆ.16: ರಾಷ್ಟ್ರೀಯ ಹಿತಾಸಕ್ತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಆದಷ್ಟು ಬೇಗನೆ ಆದ್ಯತೆಯ ಆಧಾರದಲ್ಲಿ ಜಮ್ಮು-ಕಾಶ್ಮೀರದ ಜನಜೀವನವನ್ನು ಸಹಜ ಸ್ಥಿತಿಗೆ ತರಬೇಕೆಂದು ಕೇಂದ್ರ ಹಾಗೂ ಜಮ್ಮು-ಕಾಶ್ಮೀರದ ಆಡಳಿತಕ್ಕೆ ಸುಪ್ರೀಂಕೋರ್ಟ್ ಸೋಮವಾರ ಸೂಚನೆ ನೀಡಿದೆ.
ಕಣಿವೆ ರಾಜ್ಯದಲ್ಲಿ ಜನಜೀವನವನ್ನು ಸಹಜಸ್ಥಿತಿಗೆ ತಂದು, ಜನರು ಕಲ್ಯಾಣ ಯೋಜನೆಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಹಾಗೂ ಜಸ್ಟಿಸ್‌ಗಳಾದ ಎಸ್‌ಎ ಬೊಬ್ಡೆ, ಎಸ್‌ಎ ನಝೀರ್ ಅವರಿದ್ದ ನ್ಯಾಯಪೀಠ ಆದೇಶಿಸಿದೆ.
ಜಮ್ಮು-ಕಾಶ್ಮೀರದಲ್ಲಿ ಸಂಪರ್ಕ ಸಾಧನದ ಮೇಲೆ ವಿಧಿಸಲಾಗಿರುವ ನಿರ್ಬಂಧವನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ‘ಕಾಶ್ಮೀರ ಟೈಮ್ಸ್’ನ ಕಾರ್ಯಕಾರಿ ಸಂಪಾದಕಿ ಅನುರಾಧಾ ಭಾಸಿನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವಳೆ ನ್ಯಾಯಾಲಯ ಈ ಆದೇಶ ನೀಡಿದೆ.
   ‘‘ಜಮ್ಮು-ಕಾಶ್ಮೀರದಲ್ಲಿ ಈ ತನಕ ಒಂದು ಗುಂಡು ಕೂಡ ಸಿಡಿದಿಲ್ಲ. ಕೆಲವು ಕಡೆ ಸ್ಥಳೀಯವಾಗಿ ನಿರ್ಬಂಧವಿದೆ. ಕಾಶ್ಮೀರ ವಿಭಾಗದಲ್ಲಿ ಶೇ.88ರಷ್ಟು ಪೊಲೀಸ್ ಠಾಣೆಗಳಲ್ಲಿ ನಿರ್ಬಂಧವನ್ನು ಹಿಂಪಡೆಯಲಾಗಿದೆ. ಕಾಶ್ಮೀರ ಮೂಲದ ಎಲ್ಲ ದಿನಪತ್ರಿಕೆಗಳು ತಮ್ಮ ಕಾರ್ಯವನ್ನು ಪುರನಾರಂಭಿಸಿದ್ದು, ಸರಕಾರ ಎಲ್ಲ ರೀತಿಯ ಸಹಕಾರವನ್ನು ನೀಡುತ್ತಿದೆ. ದೂರದರ್ಶನ ಹಾಗೂ ಇತರ ಖಾಸಗಿ ಟಿವಿ ಚಾನಲ್‌ಗಳು ಹಾಗೂ ಎಫ್‌ಎಂ ಜಾಲಗಳು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ’’ ಎಂದು ಕೇಂದ್ರ ಪರ ನ್ಯಾಯಾಲಯದಲ್ಲಿ ಹಾಜರಿದ್ದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ತಿಳಿಸಿದರು.
 ಈ ಎಲ್ಲ ವಿವರಗಳನ್ನು ಒಳಗೊಂಡ ಅಫಿಡಾವಿಟ್‌ನ್ನು ಸಲ್ಲಿಸುವಂತೆ ನ್ಯಾಯಪೀಠ ಅಟಾರ್ನಿ ಜನರಲ್‌ಗೆ ಸೂಚಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News