ಪರಿಶಿಷ್ಟರ ಅಭಿವೃದ್ಧಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಸಿಎಂ ಸೂಚನೆ

Update: 2019-09-16 14:18 GMT

ಬೆಂಗಳೂರು, ಸೆ. 16: ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗೆ ಮೀಸಲಿಟ್ಟ ಎಸ್ಸಿಪಿ-ಟಿಎಸ್ಪಿ ಅನುದಾನವನ್ನು ಸಮರ್ಪಕ ಬಳಕೆ ಮಾಡುವ ಮೂಲಕ ಯೋಜನೆಗಳ ತ್ವರಿತ ಅನುಷ್ಠಾನಗೊಳಿಸಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಏರ್ಪಡಿಸಿದ್ದ ರಾಜ್ಯ ಪರಿಷತ್ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಸ್ಸಿ-ಎಸ್ಟಿ ಅಭಿವೃದ್ಧಿಗಾಗಿ ವಿವಿಧ ಅಭಿವೃದ್ಧಿ ಇಲಾಖೆಗಳ ಎಸ್ಸಿಪಿ-ಟಿಎಸ್ಪಿ ಯೋಜನೆ ಮೂಲಕ ಹಂಚಿಕೆ ಮಾಡಲಾಗಿದೆ. ಎಸ್ಸಿ-ಎಸ್ಟಿ ಜನಸಂಖ್ಯೆಗೆ ಅನುಗುಣವಾಗಿ ರಾಜ್ಯದ ಆಯವ್ಯಯದಲ್ಲಿ ಅನುದಾನ ಮೀಸಲಿಡಲಾಗುತ್ತಿದೆ. ಎಸ್ಸಿ-ಎಸ್ಟಿ ಮತ್ತು ಸಾಮಾನ್ಯ ಜನರ ನಡುವೆ ಇರುವ ಅಭಿವೃದ್ಧಿ ಅಂತರವನ್ನು ಕಡಿಮೆಗೊಳಿಸಲು ಎಸ್ಸಿಪಿ-ಟಿಎಸ್ಪಿ ಯೋಜನೆ ರೂಪಿಸಲಾಗಿದೆ ಎಂದು ಅವರು ತಿಳಿಸಿದರು.

ಆರೋಗ್ಯ, ಶಿಕ್ಷಣ, ವಸತಿ, ನೈರ್ಮಲ್ಯ ಸೇರಿ ವೈಯಕ್ತಿಕ ಅಭಿವೃದ್ಧಿ ಕಾರ್ಯಗಳು ಹಾಗೂ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗುತ್ತಿದೆ. 2019-20ನೆ ಸಾಲಿನ ಬಜೆಟ್‌ನಲ್ಲಿ ಎಸ್ಸಿ-21,602 ಕೋಟಿ ರೂ. ಹಾಗೂ ಎಸ್ಟಿ-8,842 ಕೋಟಿ ರೂ.ಅನುದಾನ ಸೇರಿ ಒಟ್ಟು 30,444 ಕೋಟಿ ರೂ.ಅನುದಾನ ಒದಗಿಸಲಾಗಿದೆ ಎಂದು ಅವರು ತಿಳಿಸಿದರು.

ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ ಸೇರಿ 39 ಇಲಾಖೆಗಳು ಎಸ್ಸಿಪಿ-ಟಿಎಸ್ಪಿ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಿದ್ದು, 2019ರ ಆಗಸ್ಟ್ ಅಂತ್ಯಕ್ಕೆ ಶೇ.18ರಷ್ಟು ಪ್ರಗತಿ ಸಾಧಿಸಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಗತಿ ಸಾಧಿಸುವಂತೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ವಿವಿಧ ಇಲಾಖೆಗಳಲ್ಲಿ ಖರ್ಚಾಗದೆ ಉಳಿಕೆಯಾಗಬಹುದಾದ ಅನುದಾನವನ್ನು ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಜನರಿಗೆ ಮನೆಗಳ ನಿರ್ಮಾಣ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಉಪಯೋಗಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ನಗರ ಸ್ಥಳೀಯ ಸಂಸ್ಥೆಗಳಿಗೆ ಎಸ್ಸಿಪಿ-ಟಿಎಸ್ಪಿ ಯೋಜನೆಯಡಿ ನೀಡಿರುವ ಅನುದಾನದ ಪೈಕಿ ಶೇ.50ರಷ್ಟು ಹಣವನ್ನು ಎಸ್ಸಿ-ಎಸ್ಟಿ ವರ್ಗದವರ ಮನೆಗಳ ನಿರ್ಮಾಣಕ್ಕಾಗಿ ಉಪಯೋಗಿಸಲು ನೋಡಲ್ ಅಧಿಕಾರಿಗಳ ಸಭೆಯಲ್ಲಿ ಸೂಚನೆ ನೀಡಲಾಗಿದೆ. ಲಭ್ಯವಿರುವ ಅನುದಾನವನ್ನು ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಆದ್ಯತೆ ಮೇಲೆ ವಿನಿಯೋಗಿಸಬೇಕು ಎಂದು ಅವರು ಸೂಚಿಸಿದರು.

‘ಕೃಷಿ, ತೋಟಗಾರಿಕೆ, ಗ್ರಾಮೀಣಾಭಿವೃದ್ಧಿ, ಲೋಕೋಪಯೋಗಿ, ನೀರಾವರಿ, ನಗರಾಭಿವೃದ್ಧಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳಲ್ಲಿ ಎಸ್ಸಿಪಿಯಡಿ 780ಕೋಟಿ ರೂ.ಹಾಗೂ ಟಿಎಸ್ಪಿಯಡಿ 367ಕೋಟಿ ರೂ.ಸೇರಿದಂತೆ ಒಟ್ಟು 1,157 ಕೋಟಿ ರೂ.ಉಳಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ’

-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News