ಪ್ರತಿಭಟನೆಗೆ ಅನುಮತಿ ಕಡ್ಡಾಯಕ್ಕೆ ವಾಟಾಳ್ ನಾಗರಾಜ್ ವಿರೋಧ

Update: 2019-09-16 14:20 GMT

ಬೆಂಗಳೂರು, ಸೆ. 16: ಚಳವಳಿಗಳನ್ನು ನಡೆಸಲು ವಾರದ ಮುಂಚೆಯೇ ಅರ್ಜಿ ಹಾಕಬೇಕು ಸೇರಿದಂತೆ ವಿವಿಧ ಷರತ್ತುಗಳನ್ನು ಚಳವಳಿಗಾರರ ಮೇಲೆ ವಿಧಿಸಿರುವುದನ್ನು ಹಿಂತೆಗೆದುಕೊಳ್ಳಬೇಕೆಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾರೇ ಚಳವಳಿ ಮಾಡಿದರೂ ಏಳು ದಿನಕ್ಕೆ ಮುಂಚಿತವಾಗಿ ಅನುಮತಿಯನ್ನು ಪಡೆಯಬೇಕು ಎಂದು ಹೇಳಿರುವುದು ಪ್ರಜಾಪ್ರಭುತ್ವ ವಿರೋಧಿ ಧೋರಣೆಯಾಗಿದೆ. 2009ರ ಕಾನೂನನ್ನು ಜಾರಿ ಮಾಡಬೇಕೆಂದು ಪೊಲೀಸ್ ಆಯುಕ್ತರು ತರಾತುರಿಯಲ್ಲಿ ಹೇಳಿದ್ದಾರೆ. ಆದರೆ ಚಳವಳಿ ನಡೆಸಲು ಅರ್ಜಿ ಹಾಕುವುದರ ಸಾಧಕ ಬಾಧಕಗಳ ಬಗ್ಗೆ ಯೋಚನೆ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅಲ್ಲದೆ, ಪೊಲೀಸರಿಗೆ ಎಲ್ಲಿ ಚಳವಳಿ ಮಾಡುತ್ತೇವೆಂದು ಸ್ಥಳ ತಿಳಿಸಬೇಕು. ಆ ಸ್ಥಳವನ್ನು ಪೊಲೀಸರು ಬಂದು ಪರಿಶೀಲನೆ ನಡೆಸಬೇಕು. ಸ್ಥಳ ಪ್ರತಿಭಟನೆ ನಡೆಸಲು ಯೋಗ್ಯವಾಗಿ ಇರುವುದೇ ಎಂದು ತೀರ್ಮಾನ ತೆಗೆದುಕೊಳ್ಳಬೇಕು. ತದನಂತರ ನೀವು ಚಳವಳಿ ಮಾಡಬೇಕಾ, ಬೇಡವಾ ಎಂದು ತಿಳಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಹೊಸ ನಿಯಮದ ಪ್ರಕಾರ ಪ್ರತಿಭಟನೆ ಮಾಡುವ ಮುನ್ನ ಅರ್ಜಿಯನ್ನು ಭರ್ತಿ ಮಾಡಬೇಕು. ಆದರೆ ಅರ್ಜಿಯನ್ನು ಕಾನೂನು ತಜ್ಞರ ಸಲಹೆ ಪಡೆದು ಭರ್ತಿ ಮಾಡುವಂತೆ ರೂಪಿಸಲಾಗಿದೆ. ಏಕೆಂದರೆ ಅರ್ಜಿ ಅಷ್ಟು ಸುಲಭವಾಗಿ ಅರ್ಥವಾಗುವಂತೆ ಇಲ್ಲ. ಇದು ಪ್ರಜೆಗಳ ದನಿಯನ್ನು ಕುಗ್ಗಿಸುವ ಕ್ರಮವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹಿಂದಿನ ದಿನಗಳಲ್ಲಿ ನಡೆಸುತ್ತಿದ್ದ ರೈತ, ಕಮ್ಯುನಿಸ್ಟ್, ವಿದ್ಯಾರ್ಥಿ, ದಲಿತ ಹಾಗೂ ನಾಡು, ನುಡಿಗಾಗಿ ಕನ್ನಡ ಪರ ಚಳವಳಿಗಳು ಸರಕಾರವನ್ನೇ ನಡುಗಿಸುವಂತೆ ಇರುತ್ತಿದ್ದವು. ಇನ್ನು ಪೊಲೀಸರಿಗೆ ಚಳವಳಿಯನ್ನು ನಿಭಾಯಿಸುವುದೇ ಸವಾಲಾಗಿರುತ್ತಿತ್ತು ಎಂದು ವಿವರಿಸಿದರು.

ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಜನರ ಮೇಲೆ ನಿರಂತರವಾಗಿ ದಬ್ಭಾಳಿಕೆ ಮಾಡುತ್ತಿದೆ. ಸರಕಾರದ ವಿರುದ್ಧ ಚಳವಳಿಯನ್ನು ಮಾಡಲೇಬಾರದು. ಚಳವಳಿಯ ಹೆಸರನ್ನೇ ಎತ್ತಬಾರದು ಎಂಬ ಧೋರಣೆ ಸರಿಯಾದುದಲ್ಲ. ಪೊಲೀಸರು ಹೇಳಿದ ಮಾತನ್ನು ಕೇಳಬೇಕು ಎಂದು ಸರಕಾರ ಪರೋಕ್ಷವಾಗಿ ಹೇಳಿದಂತೆ ಇದೆ. ಇನ್ನು ಈ ಪರಿಸ್ಥಿತಿ ಮುಂದೆ ಪತ್ರಿಕಾ ರಂಗಕ್ಕೂ ಬರುತ್ತದೆ ಎಂದು ಹೇಳಿದರು.

ರಾಜ್ಯದಲ್ಲಿ ಇತ್ತೀಚೆಗೆ ಚಳವಳಿಗಳೇ ಅಪರೂಪವಾಗುತ್ತಿವೆ. ಇಂತಹ ಸಮಯದಲ್ಲಿ ಅಸಮಾನತೆ ಹಾಗೂ ಅನ್ಯಾಯದ ವಿರುದ್ಧ ಹೋರಾಡುವುದಕ್ಕೆ ಅರ್ಜಿ ಹಾಕಬೇಕು ಎಂದಿರುವುದು ಜನರ ದನಿಯನ್ನು ಅಡಗಿಸುವ ಕ್ರಮವಾಗಿದೆ.

-ವಾಟಾಳ್ ನಾಗರಾಜ್, ಕನ್ನಡ ಒಕ್ಕೂಟದ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News