ಭಾಷೆಗಳ ನಡುವೆ ಗೊಂದಲ ಸೃಷ್ಟಿಗೆ ಅಮಿತ್ ಶಾ ಯತ್ನ: ದಿನೇಶ್ ಗುಂಡೂರಾವ್

Update: 2019-09-16 14:27 GMT

ಬೆಂಗಳೂರು, ಸೆ.16: ದೇಶದ ಆರ್ಥಿಕ ಪರಿಸ್ಥಿತಿ ಕುಲಗೆಟ್ಟು ಹೋಗಿದೆ. ಈ ವಿಚಾರದ ಬಗ್ಗೆ ಜನಸಾಮಾನ್ಯರ ಗಮನ ಬೇರೆಡೆ ಸೆಳೆಯಲು ಹಿಂದಿ ಹೇರಿಕೆಯ ವಿಚಾರವನ್ನು ಪ್ರಸ್ತಾಪ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದರು.

ಸೋಮವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಕನ್ನಡ ಮೊದಲು, ಆಮೇಲೆ ಬೇರೆ ಭಾಷೆ. ಹಿಂದಿಯ ಬಗ್ಗೆಯೂ ನಮಗೆ ಗೌರವವಿದೆ. ಆದರೆ, ಅನ್ಯ ಭಾಷಿಕರು ಹಾಗೂ ಹಿಂದಿ ಭಾಷಿಕರ ನಡುವೆ ಗೊಂದಲ ಸೃಷ್ಟಿಸುವ ಕೆಲಸವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಾಡುತ್ತಿದ್ದಾರೆ ಎಂದು ಕಿಡಿಗಾರಿದರು.

ಬಲವಂತವಾಗಿ ಹಿಂದಿ ಹೇರಿಕೆ ಕೆಲಸ ಮಾಡುತ್ತಿರುವುದು ಸರಿಯಲ್ಲ. ಭಾರತ ಹಲವಾರು ರಾಜ್ಯಗಳು ಸೇರಿ ಒಂದು ರಾಷ್ಟ್ರವಾಗಿದೆ. ನಮ್ಮ ರಾಜ್ಯದಲ್ಲೂ ಹಲವಾರು ಭಾಷೆ ಮಾತನಾಡುವ ಜನರಿದ್ದಾರೆ. ನಾವೇನು ಹಿಂದಿ ವಿರೋಧಿಗಳಲ್ಲ. ಆದರೆ, ಒಂದೇ ಭಾಷೆ, ಒಂದೇ ರಾಷ್ಟ್ರ ಅನ್ನುವುದಲ್ಲ ಎಂದು ಅವರು ಹೇಳಿದರು.

ನಮ್ಮ ರಾಜ್ಯದಿಂದ ಬಿಜೆಪಿಯ 25 ಜನ ಸಂಸದರು ಆಯ್ಕೆಯಾಗಿದ್ದಾರೆ. ಭಾಷೆಯ ವಿಚಾರದಲ್ಲಿ ಈ ರೀತಿಯಲ್ಲಿ ಹೇಳಿಕೆ ಕೊಡುವುದು ಸರಿಯಲ್ಲವೆಂದು ಅಮಿತ್ ಶಾಗೆ ಹೇಳುವ ಧೈರ್ಯ ಮಾಡಲಿ. ಹಿಂದಿ ಹೇರಿಕೆ ವಿರುದ್ಧ ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ಮಾಡಲಾಗುತ್ತಿದೆ. ಅಮಿತ್ ಶಾ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ದಿನೇಶ್ ಗುಂಡೂರಾವ್ ಆಗ್ರಹಿಸಿದರು.

ಅರ್ಕಾವತಿ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಹೈಕಮಾಂಡ್ ಹೇಳಿದಂತೆ ಬಿಜೆಪಿ ನಾಯಕರು ಕೇಳುತ್ತಿದ್ದಾರೆ. ಬೆಂಗಳೂರಿನ ವಿಚಾರ ಆಗಿರಲಿ, ನೀರಾವರಿ ಯೋಜನೆ ವಿಚಾರ ಇರಲಿ ಯಾವುದನ್ನು ಬೇಕಾದರು ಸರಕಾರ ತನಿಖೆಗೆ ಕೊಡಲಿ. ಜೊತೆಗೆ ಯಡಿಯೂರಪ್ಪ ಸರಕಾರದಲ್ಲಿ ಆದ ಯೋಜನೆಗಳನ್ನು ತನಿಖೆಗೆ ಕೊಡಲಿ ಎಂದು ಅವರು ಹೇಳಿದರು.

ಮೈಸೂರು ಪಾಕ್‌ನಲ್ಲೇ ಅದರ ಮೂಲವೂ ಅಡಗಿದೆ. ನಮ್ಮ ರಾಜ್ಯದಿಂದ ಆಯ್ಕೆಯಾಗಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಯಾತಕ್ಕಾಗಿ ಹಾಗೆ ಹೇಳಿದ್ದಾರೋ ಗೊತ್ತಿಲ್ಲ. ಯಾರೋ ಅವರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಮೈಸೂರು ಅಲ್ಲದೇ, ಮಧುರೈ ಪಾಕ್ ಎಂದು ಕರೆಯಬೇಕಿತ್ತಾ? ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.

ವಿರೋಧ ಪಕ್ಷದ ನಾಯಕನ ಸ್ಥಾನದ ಬಗ್ಗೆ ನಮ್ಮ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಸಿದ್ದರಾಮಯ್ಯ ಬಗ್ಗೆ ಹೇಳಿಕೆಗಳನ್ನು ಕೊಡುವುದು ಸರಿಯಲ್ಲ. ಈ ಹಿಂದೆ ಸದಾನಂದಗೌಡರನ್ನು ಯಾರು ಮುಖ್ಯಮಂತ್ರಿ ಮಾಡಿದರೋ, ಅವರಿಗೆ ಸದಾನಂದಗೌಡ ಮೋಸ ಮಾಡಿದ್ದರು ಎಂದು ದಿನೇಶ್ ಗುಂಡೂರಾವ್ ತಿರುಗೇಟು ನೀಡಿದರು.

ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರನ್ನು ಉಪ ಚುನಾವಣೆಯ ಸಿದ್ಧತೆಗಳ ಕುರಿತ ಸಭೆಗೆ ಆಹ್ವಾನ ನೀಡಲಾಗಿತ್ತು. ಪಕ್ಷದಲ್ಲಿ ಅವರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿ ಎಂದು ಅವರು ತಿಳಿಸಿದರು.

ವರ್ಗಾವಣೆ ದಂಧೆ: ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆ ಮಾಡಲು, ಶಾಸಕರ ಖರೀದಿಗೆ ನೂರಾರು ಕೋಟಿ ರೂ.ಖರ್ಚು ಮಾಡಲಾಗಿದೆ. ಈ ಮೊತ್ತವನ್ನು ಶೇಖರಿಸಲು ವರ್ಗಾವಣೆ ದಂಧೆಗೆ ಕೈ ಹಾಕಲಾಗಿದೆ. ಯಾವ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ನಮ್ಮ ಸರಕಾರ ಟೇಕಾಫ್ ಆಗಿಲ್ಲ ಎಂದು ಬಿಜೆಪಿಯವರು ಟೀಕಿಸುತ್ತಿದ್ದರು. ಆದರೆ, ಈ ಸರಕಾರದ ಇಂಜಿನ್ ಈವರೆಗೆ ಚಾಲನೆ ಆಗಿಲ್ಲ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News