ರಾಜ್ಯ-ಕೇಂದ್ರ ಸರಕಾರಕ್ಕೆ ಮನುಷ್ಯತ್ವ ಇಲ್ಲ: ವಿ.ಎಸ್.ಉಗ್ರಪ್ಪ

Update: 2019-09-16 14:29 GMT

ಬೆಂಗಳೂರು, ಸೆ.16: ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರಕಾರಕ್ಕೆ ಮನುಷ್ಯತ್ವ ಇಲ್ಲ. ನೆರೆ ವಿಚಾರದಲ್ಲಿ ಒಂದು ರೂಪಾಯಿ ಪರಿಹಾರವನ್ನು ಈವರೆಗೆ ಬಿಡುಗಡೆ ಮಾಡಲಿಲ್ಲ ಎಂದು ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಮುಖ್ಯಸ್ಥ ವಿ.ಎಸ್.ಉಗ್ರಪ್ಪ ಆರೋಪಿಸಿದರು.

ಸೋಮವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನೆರೆ ಪರಿಹಾರ ಬಗ್ಗೆ ಸಚಿವರಾದ ಕೆ.ಎಸ್.ಈಶ್ವರಪ್ಪ, ಜೆ.ಸಿ.ಮಧುಸ್ವಾಮಿ, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬಳಸಿರುವ ಪದಗಳನ್ನು ಗಮನಿಸಿದರೆ, ಅಧಿಕಾರದ ಮದ ನೆತ್ತಿಗೇರಿರುವುದು ಸಾಬೀತಾಗಿದೆ ಎಂದು ಟೀಕಿಸಿದರು.

ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ. ಬಿತ್ತನೆ ಬೀಜ ತೆಗೆದುಕೊಳ್ಳಲು ರೈತರ ಬಳಿ ಹಣವಿಲ್ಲ. ಸಿದ್ದರಾಮಯ್ಯ ಸಹಕಾರಿ ಬ್ಯಾಂಕುಗಳಲ್ಲಿನ 8163 ಕೋಟಿ ರೂ. ಸಾಲಮನ್ನಾ ಮಾಡಿದ್ದರು. ಸಮ್ಮಿಶ್ರ ಸರಕಾರ ವಾಣಿಜ್ಯ ಬ್ಯಾಂಕುಗಳಲ್ಲಿನ ಒಂದು ಲಕ್ಷ ರೂ.ವರೆಗಿನ ಸಾಲಮನ್ನಾ ಮಾಡಿತ್ತು ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಯಡಿಯೂರಪ್ಪಗೆ ರೈತರ ಮೇಲೆ ಗೌರವ ಕಾಳಜಿ ಇದ್ದರೆ, ನೆರೆ ಹಾಗೂ ಬರ ಪರಿಸ್ಥಿತಿಯ ಸಂತ್ರಸ್ತ ರೈತರ ಎಲ್ಲ ರೀತಿಯ ಬ್ಯಾಂಕುಗಳ ಸಾಲಮನ್ನಾ ಮಾಡಲಿ ಎಂದು ಆಗ್ರಹಿಸಿದ ಅವರು, ಕೇಂದ್ರ ಸರಕಾರ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದು, ರಿಸರ್ವ್ ಬ್ಯಾಂಕ್‌ನಿಂದ 1.73 ಲಕ್ಷ ಕೋಟಿ ರೂ.ಪ್ಯಾಕೇಜ್ ಪಡೆದಿದೆ. ರಾಜ್ಯದಲ್ಲಿ ಬರ ಹಾಗೂ ನೆರೆ ಸಮಸ್ಯೆಯಿದ್ದರೂ ಯಾವುದೇ ಪ್ಯಾಕೇಜ್ ಘೋಷಿಸಿಲ್ಲ ಎಂದು ಅವರು ಹೇಳಿದರು. ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಬಿಜೆಪಿಯವರಿಗೆ ಭಯ ಕಾಡುತ್ತಿದೆ. ನೆರೆ ಸಂತ್ರಸ್ತರ ಆಕ್ರೊಶ ಎದುರಿಸಬೇಕಾಗಬಹುದು ಎಂಬ ಆತಂಕ ಸರಕಾರಕ್ಕಿದೆ. ಅಧಿವೇಶನ ರದ್ದುಪಡಿಸಿದರೆ ಆ ಭಾಗದ ಜನರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಉಗ್ರಪ್ಪ ಹೇಳಿದರು.

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ವಡ್ಡೂ ಗ್ರಾಮದಲ್ಲಿ ಮಗುವಿನ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಗಿದೆ. ಮೃತ ಬಾಲಕಿಯ ಕುಟುಂಬಕ್ಕೆ 3 ಲಕ್ಷ ರೂ.ಪರಿಹಾರ ನೀಡಬೇಕು. ನಿರ್ಭಯಾ ಮಾದರಿಯಲ್ಲಿ ಈ ಪ್ರಕರಣ ದಾಖಲಿಸಬೇಕು. ಸಂಡೂರಿನಲ್ಲಿ ಒಂದೇ ತಿಂಗಳಲ್ಲಿ ಎರಡು ಅತ್ಯಾಚಾರ ಪ್ರಕರಣಗಳಾಗಿವೆ. ಆದರೆ, ಈವರೆಗೆ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ದೊರಕಿಲ್ಲ ಎಂದು ಉಗ್ರಪ್ಪ ದೂರಿದರು.

ಶೋಷಿತ ಜನರ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಎಸ್ಸಿಪಿ-ಟಿಎಸ್ಪಿ ಅನುದಾನವನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡಲು ಹೊರಟಿರುವ ಸರಕಾರದ ಕ್ರಮ ಖಂಡನೀಯ. ಇದರ ವಿರುದ್ಧ ರಾಜ್ಯದ ಎಲ್ಲ ದಲಿತರು ಎದ್ದು ನಿಂತು ಪ್ರತಿಭಟಿಸಬೇಕಿದೆ ಎಂದು ಉಗ್ರಪ್ಪ ಕರೆ ನೀಡಿದರು.

ಕಾಂಗ್ರೆಸ್‌ನವರು ನೀಲಿಚಿತ್ರ ಮಾಡುತ್ತಾರೆ ಎಂದು ಸವದಿ ಹೇಳಿದ್ದಾರೆ. ಯಾರು ಮಾಡುತ್ತಿದ್ದಾರೆ ಅಂತ ಬಹಿರಂಗ ಪಡಿಸಲಿ. ಒಬ್ಬ ಉನ್ನತ ಹುದ್ದೆಯಲ್ಲಿ ಇರೋರ ಮಾತು ಜಾರಬಾರದು. 24 ಗಂಟೆಯ ಒಳಗೆ ಇದನ್ನ ಸಾರ್ವಜನಿಕರ ಮುಂದೆ ಸವದಿ ಹೇಳಬೇಕು ಎಂದು ಅವರು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News